Advertisement
ಮಂಡ್ಯ ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಮಹಿಳಾ ಮತದಾರರು ಸ್ವಯಂಪ್ರೇರಣೆಯಿಂದ ಬಂದ ಮತ ಚಲಾಯಿಸಿದ್ದರು. ಬಹಿರಂಗ ಪ್ರಚಾರದ ಅಂತಿಮ ದಿನ ಸುಮಲತಾ ಜಿಲ್ಲೆಯ ಜನರೆದುರು ಸೆರಗೊಡ್ಡಿ ಸ್ವಾಭಿಮಾನದ ಭಿಕ್ಷೆ ಬೇಡಿದರು. ಜನರು ಅದನ್ನು ದಯಪಾಲಿಸಿ ವಿಜಯಮಾಲೆ ತೊಡಿಸಿದರು.
Related Articles
Advertisement
ಸುಮಲತಾ ಮಾತು: ನಟನಾಗಿ ಅಂಬರೀಶ್ ಅವರನ್ನು ಇಷ್ಟಪಡುತ್ತಿದ್ದ ಮಹಿಳೆಯರು ಅಂಬರೀಶ್ ಪತ್ನಿಯನ್ನು ಸುಲಭವಾಗಿಯೇ ರಾಜಕಾರಣಿಯಾಗಿ ಒಪ್ಪಿಕೊಂಡರು. ನಾನು ಈ ಮಣ್ಣಿನ ಮಗಳು, ಜಿಲ್ಲೆಯ ಸೊಸೆ ಎಂದು ಹೇಳಿದ ಮಾತುಗಳು ಮಹಿಳೆಯರ ಮನಸ್ಸಿನ ಮೇಲೆ ಪರಿಣಾಮ ಬೀರಿದವು. ಸುಮಲತಾ ಹೋದಲೆಲ್ಲಾ ಮಹಿಳೆಯರು ಗುಂಪು ಗುಂಪಾಗಿ ಸೇರುತ್ತಿದ್ದರು. ಸುಮಲತಾ ಡ್ರೆಸ್ ಕೋಡ್, ನಡವಳಿಕೆ, ಮಾತುಗಾರಿಕೆ ಇವೆಲ್ಲ ಕಂಡು ಮಾರುಹೋದರು. ಸುಮಲತಾ ನಟಿ ಎಂಬುದಕ್ಕಿಂತ ಹೆಚ್ಚಾಗಿ ಅಂಬರೀಶ್ ಪತ್ನಿ, ತವರಿಗೆ ಸೇರಿದವಳು ಎಂಬುದನ್ನು ಹೃದಯದಲ್ಲಿರಿಸಿಕೊಂಡರು.
ಜಿಲ್ಲೆಯ ಮಹಿಳೆಯರು ಈ ಬಾರಿ ಹಣಕ್ಕೆ ಮರುಳಾಗಲಿಲ್ಲ. ಹಣದ ಹರಿದಾಟ ತೀವ್ರತೆಯಿಂದ ಕೂಡಿದ್ದರೂ ಸುಮಲತಾ ಅವರನ್ನು ತಿರಸ್ಕರಿಸುವುದಕ್ಕೆ ಮಹಿಳೆಯರ ಮನಸ್ಸು ಒಪ್ಪಲಿಲ್ಲ. ಜೆಡಿಎಸ್‌ನವರು ನೀಡಿದ ಹಣ ಪಡೆದು ಕೊನೆಗೆ ಸುಮಲತಾ ಪರ ನಿಂತರು. ಸ್ವಾಭಿಮಾನದ ಉಳಿವಿಗೆ ಬದ್ಧರಾದರು.
ಅಳಿಯನಾಗುವೆನೆಂದರೂ ಒಪ್ಪಲಿಲ್ಲ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಕೆ.ನಿಖೀಲ್ ಕೂಡ ನಾನೂ ಈ ಜಿಲ್ಲೆಯ ಮಗ, ಒಳ್ಳೆಯ ಹುಡುಗಿ ಸಿಕ್ಕರೆ ಮದುವೆಯಾಗಿ ಅಳಿಯನಾಗುತ್ತೇನೆ ಎಂದರೂ ಯಾರೊಬ್ಬರೂ ಅದನ್ನು ಒಪ್ಪಿಕೊಳ್ಳಲಿಲ್ಲ. ಜಮೀನು ಖರೀದಿಸಿ, ತೋಟದ ಮನೆ ಮಾಡಿಕೊಂಡು ಇಲ್ಲೇ ಉಳಿಯುತ್ತೇನೆ ಎಂದರೂ ಮಂಡ್ಯ ಜನತೆ ನಂಬಲಿಲ್ಲ. ಮಂಡ್ಯದ ಸೊಸೆ ಸುಮಲತಾ ಅಂಬರೀಶ್ ಪರ ಮತ ಚಲಾಯಿಸಿ ಗೆಲುವಿಗೆ ಕಾರಣರಾದರು.
ಸುಮಲತಾ ಸೆರಗೊಡ್ಡಿ ಬೇಡಿದ ಸ್ವಾಭಿಮಾನದ ಭಿಕ್ಷೆ ಮಹಿಳೆಯರ ಮನಸ್ಸು ಪರಿವರ್ತನೆಯಾಗುವಂತೆ ಮಾಡಿತು. ಒಟ್ಟು ಚಲಾವಣೆಯಾದ ಮಹಿಳಾ ಮತಗಳಲ್ಲಿ ಶೇ.70ರಷ್ಟು ಮತಗಳು ಸುಮಲತಾ ಪರ ಇದ್ದುದರಿಂದಲೇ ಗೆಲುವು ಸುಲಭವಾಯಿತು.
● ಮಂಡ್ಯ ಮಂಜುನಾಥ್