Advertisement

ಫ್ರೆಂಚ್‌ ಓಪನ್‌; ಸಕತ್ತಾಗವ್ಳೆ ಸಕ್ಸಸ್‌ ಪಡಿತವ್ಳಾ?!

03:55 AM Jun 03, 2017 | |

ಹೇಳಿ ಕೇಳಿ ಮಹಿಳಾ ಟೆನಿಸ್‌ ಎಂಬುದು ಕೇವಲ ಆಟವನ್ನು ಮಾತ್ರ ನೋಡುವುದಲ್ಲ. ಅಲ್ಲಿ ಕಣ್ಣು ತಂಪು ಮಾಡುವ ಇನ್ನೂ ಹಲವು ವಿಷಯಗಳಿರುತ್ತವೆ. ವಿಂಬಲ್ಡನ್‌ ಆದರೆ ಆಟಗಾರರು ಕೇವಲ ಬಿಳಿ ವರ್ಣದ ಡ್ರೆಸ್‌ ತೊಟ್ಟಿರಬೇಕು ಎಂಬ ನಿರ್ಬಂಧವಿದೆ. ಫ್ರೆಂಚ್‌ ಓಪನ್‌ ಹಾಗಲ್ಲ. ಕೆಂಪು ಆವೆ ಮಣ್ಣಿನ ಮೇಲೆ ಆಟಗಾರ್ತಿಯರ ನಾನಾ ತೆರನ ಉಡುಪುಗಳು ಕಣ್ಣಿಗೆ ಕಾಮನಬಿಲ್ಲು! ಹಾಗಂತ ಟೆನಿಸ್‌ ಲಲನೆಯರು ಸೌಂದರ್ಯದ ಆಧಾರದ ಮೇಲೆಯೇ ರ್ಯಾಕೆಟ್‌ ಹಿಡಿದರೆ ಗಮನ ಸೆಳೆಯುತ್ತಾರೆ ಎಂದು ಭಾವಿಸಿದರೆ ತಪ್ಪು. ರಷ್ಯಾದ ಅನ್ನಾ ಕುರ್ನಿಕೋವಾ ಎಂಬ ಸೌಂದರ್ಯದ ಖನಿ ತಮ್ಮ 12 ವರ್ಷಗಳ ಕೆರಿಯರ್‌ನಲ್ಲಿ ಒಂದೇ ಒಂದು ಡಬ್ಲ್ಯುಟಿಎ ಪ್ರಶಸ್ತಿ ಪಡೆಯದಿದ್ದುದರಿಂದ ಕಾಲಕ್ರಮದಲ್ಲಿ ಅವರ ನೆನಪು ಮಾಯವಾಗುತ್ತದೆ. ಅದೇ ಗ್ರ್ಯಾನ್‌ಸ್ಲಾಮ್‌ಗಳ ಚಾಂಪಿಯನ್‌ ಪಟ್ಟದಿಂದ ಅರಾಂಕ್ಸಾ ಸ್ಯಾಂಚೆಜ್‌ ವಿಕಾರಿಯೋ, ಯಾನಾ ನವೋತ್ನಾ ಇತಿಹಾಸದಲ್ಲಿ ಅಜರಾಮರ.ಈ ಬಾರಿಯ ಫ್ರೆಂಚ್‌ ಓಪನ್‌ನಲ್ಲಿ ಮರಿಯಾ ಶರಪೋವಾರಿಗೆ ವೈಲ್ಡ್‌ ಕಾರ್ಡ್‌ ನಿರಾಕರಿಸುವ ಮೂಲಕ ಫ್ರೆಂಚ್‌ ಓಪನ್‌ ಆಡಳಿತ ಇಲ್ಲಿನ ಟೆನಿಸ್‌ಗೆ ನೈತಿಕತೆ ಹೆಚ್ಚು ಮುಖ್ಯ, ಗ್ಲಾಮರ್‌ಗಾಗಿ ನಾವು ನಮ್ಮತನವನ್ನು ಅಡವಿಡುವುದಿಲ್ಲ ಎಂಬರ್ಥದ ಹೇಳಿಕೆಯನ್ನು ಪರೋಕ್ಷವಾಗಿ ದಾಖಲಿಸಿತು. ಅಷ್ಟಕ್ಕೂ ಶರಪೋವಾ  ಗ್ರೌಂಡ್‌ಸ್ಟ್ರೋಕ್‌, ಚೀತ್ಕಾರ, ಇನ್‌ಫ್ಯಾಕ್ಟ್ ಸೌಂದರ್ಯ ಕಣ್ತಪ್ಪಿದರೂ ಉಳಿದ ಹಲವು ಚೆಲುವೆಯರು ಈ ಬಾರಿಯ ಕಣದಲ್ಲಿದ್ದರು. ಆಟದಲ್ಲೂ ಶೂರರು, ಮಲ್ಯ ಕ್ಯಾಲೆಂಡರ್‌ಗೂ ರೂಪದರ್ಶಿಯಾಗಬಲ್ಲವರು ಅವರು. ಅವರತ್ತ ಒಂದು ನೋಟ!

Advertisement

ಎಲಿನಾ ಸ್ವಿಟೋಲಿನಾ


 22 ವರ್ಷದ ಎಲಿನಾ ಅಭಿಮಾನಿಗಳ ಪಾಲಿನ ತಂಪು ಕನ್ನಡಕ. ಸದ್ಯ ವಿಶ್ವ ನಂ.11ನೇ ಶ್ರೇಯಾಂಕ ಅವರ ಅತ್ಯುತ್ತಮ ಸಾಧನೆ. ಉಕ್ರೇನಿನ ಈ ಚೆಲುವೆ ಈಗಾಗಲೇ 7 ಡಬ್ಲ್ಯುಟಿಎ ಪ್ರಶಸ್ತಿ ಪಡೆದಿರುವುದು ಗಮನ ಸೆಳೆದರೆ, ಇನ್ನೂ ಗ್ರ್ಯಾನ್‌ಸ್ಲಾಮ್‌ ಗೆದ್ದಿಲ್ಲ ಎಂಬುದು ಅದೇ ಉಸಿರಿನಲ್ಲಿ ಹೇಳಬೇಕಾದ ಮಾತು. ಇನ್‌ಸ್ಟಾಗ್ರಾಂನಲ್ಲಿ ಬೃಹತ್‌ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಸ್ವಿಟೋಲಿನಾ ಒಂದರ್ಥದಲ್ಲಿ ಕುಟುಂಬ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಾರೆಯೇ? ಇನ್‌ಸ್ಟಾಗ್ರಾಂನಲ್ಲಿ ಅವರು ಸದಾ ತಮ್ಮ ಸಹೋದರ ಯುಲಿಯಾನ್‌ ಜೊತೆಗಿನ ಫೋಟೋಗಳನ್ನೇ ಹಾಕಿಕೊಳ್ಳುತ್ತಾರೆ. ಆದರೆ ಸ್ವಿಮ್‌ ಸೂಟ್‌ನಲ್ಲಿ ಕೂಡ ಕಾಣಿಸಿಕೊಂಡಿರುವುದರಿಂದ ಗ್ಲಾಮರ್‌ ವ್ಯಕ್ತ ವ್ಯಕ್ತ!

ಕ್ರಿಸ್ಟಿನಾ ಮ್ಲಾಡೆನೋವಿಕ್‌


 ಈ ವರ್ಷದ ಆರಂಭದಲ್ಲಿ ಮಿಯಾಮಿಯಲ್ಲಿ ಆಟಗಾರ್ತಿಯೊಬ್ಬಳು ಅಭ್ಯಾಸ ನಡೆಸುತ್ತಿದ್ದಾಗ ಅಂಕಣದ ಮೇಲೆ ಹಲ್ಲಿಯೊಂದು ಎದುರಾಗಬೇಕೆ? ಆ ಸಂದರ್ಭದಲ್ಲಿ ಆಕೆಯ ಚೀರಾಟವೇ ಒಂದು ಸುದ್ದಿಯಾಗಿತ್ತು. ವಿಂಬಲ್ಡನ್‌ ಹಾಗೂ ಆಸ್ಟ್ರೇಲಿಯನ್‌ ಓಪನ್‌ಗಳ ಡಬಲ್ಸ್‌ಗಳಲ್ಲಿ ಗ್ರಾÂನ್‌ಸ್ಲಾಮ್‌ ಗೆದ್ದಾಗಲೂ ಅಷ್ಟು ಸುದ್ದಿಯಾಗಿರಲಿಲ್ಲ. 24 ವರ್ಷದ ಫ್ರೆಂಚ್‌ ಆಟಗಾರ್ತಿ ಈಗಷ್ಟೇ ಸಿಂಗಲ್ಸ್‌ ಕಡೆ ಗಂಭೀರವಾಗಿ ವಾಲಿದ್ದಾರೆ. ರ್‍ಯಾಂಕಿಂಗ್‌ ಕೂಡ ವಿಶ್ವದ 14ನೇ ಸ್ಥಾನದವರೆಗೆ ಕೊಂಡೊಯ್ದಿದೆ. 16 ಡಬಲ್ಸ್‌ ಪ್ರಶಸ್ತಿ ಹಾಗೂ ಒಂದು ಸಿಂಗಲ್ಸ್‌ ಸಾಧನೆಯ ಈಕೆ ಇನ್ನೂ ಯಾವುದೇ ಗ್ರಾÂನ್‌ಸ್ಲಾಮ್‌ನ ಮೂರನೇ ಸುತ್ತು ದಾಟಿಲ್ಲ. ನೀಳಕಾಯದ, ಬೆಕ್ಕಿನ ಕಣ್ಣಿನ,  ಈ ಸುಂದರಿಯ ಹೆಸರನ್ನು ಈಗಲೂ ಹೇಳದಿದ್ದರೆ ತಪ್ಪಾಗುತ್ತದೆ. ಕ್ರಿಸ್ಟಿನ್‌ ಮ್ಲಾಡೆನೋವಿಕ್‌!

Advertisement

ಎಗುನಿ ಬೊಚಾರ್ಡ್‌


 ಆರಂಭದಲ್ಲಿ ನೆನಪಿಸಿಕೊಂಡ ಅನ್ನಾ ಕುರ್ನಿಕೋವಾ ಖಾಲಿ ಕೈಯಲ್ಲಿ ವಿದಾಯ ಹೇಳಿದ ಮೇಲೆ ನೂತನ ಅನ್ನಾ ಆಗಿ ಕಾಣಿಸಿಕೊಂಡವರು ಬೊಚಾರ್ಡ್‌. ಮೂರು ವರ್ಷಗಳ ಹಿಂದೆ ವಿಂಬಲ್ಡನ್‌ನ ಫೈನಲ್‌ ಪ್ರವೇಶಿಸಿ ಎಲ್ಲರ ಹುಬ್ಬು ಮೇಲೇರುವಂತೆ ಮಾಡಿದ ಬೊಚಾರ್ಡ್‌ ಆ ಮಟ್ಟಿಗೆ ಕುರ್ನಿಕೋವಾರೇ! ಮೊನ್ನೆ ಮೊನ್ನೆ ಶರಪೋವಾರಿಗೆ ಕೊಡಲಾಗುತ್ತಿರುವ ವೈಲ್ಡ್‌ ಕಾರ್ಡ್‌ ಬಗ್ಗೆ ದೊಡ್ಡ ಧ್ವನಿ ಎತ್ತಿ ಇತ್ತ ಗಮನ ಸೆಳೆದವರು. 23 ವರ್ಷದ ಕೆನಡಾದ ಈ ಬ್ಯೂಟಿ ವಿಶ್ವ ರ್ಯಾಕಿಂಗ್‌ನಲ್ಲಿ ಏದುಸಿರು ಬಿಡುತ್ತ 52ನೇ ಕ್ರಮಾಂಕಕ್ಕೆ ಬಂದು ನಿಂತಿದ್ದಾರೆ. 

 ನಿಜ, ಇಷ್ಟಕ್ಕೇ ಚೆಲುವೆಯರ ಪಟ್ಟಿ ಮುಗಿಯುವುದಿಲ್ಲ. ರ್‍ಯಾಂಕಿಂಗ್‌ನಲ್ಲಿ ಟಾಪ್‌ 50ರ ಹೊರಗಿದ್ದರೂ ಮೈಮಾಟದಲ್ಲಿ ಅಗ್ರ 20ರೊಳಗಿರುವವರು ನೂರಾರು! ಫ್ರೆಂಚ್‌ ಮೊದಲ ಸುತ್ತಿನಲ್ಲಿಯೇ ಪರಾಜಿತರಾಗದಿದ್ದರೆ ಕ್ರೊಯೇಷಿಯಾದ ಡೊನ್ನಾ ವೆಕಿಕ್‌ರನ್ನು ಇಲ್ಲಿ ವಿರಾಜಿಸಬಹುದಿತ್ತು. ಟೆನಿಸ್‌ ಸುಲಭದ ಆಟವಲ್ಲ. ಇದು ಗರಿಷ್ಠ ಪ್ರಮಾಣದ ದೈಹಿಕ ಸಾಮರ್ಥ್ಯವನ್ನು ಬಯಸುತ್ತದೆ. ಈ ರೀತಿ ಫಿಟ್‌ ಆಗಬೇಕಿರುವುದರಿಂದಲೇ ಟೆನಿಸ್‌ ಆಟಗಾರ್ತಿಯರ ಸೌಂದರ್ಯ ಹೆಚ್ಚು ಎದ್ದು ಕಾಣುತ್ತದೆ ಎಂಬುದು ವಾಸ್ತವ. 

 ಈ ಎಲ್ಲ ಆಟಗಾರ್ತಿಯರ ಮೊದಲ ದೃಷ್ಟಿ ಫ್ರೆಂಚ್‌ ಓಪನ್‌ನ ಮೊದಲ ಸುತ್ತನ್ನು ದಾಟುವುದೇ ಆಗಿರುತ್ತದೆ. ಇಲ್ಲಿ ಕಾಣಿಸಿದ ಹಲವರು ಮೊದಲ ಸುತ್ತಿನಲ್ಲಿಯೇ ಸಾಕಷ್ಟು ಬೆವರು ಹರಿಸಿದ್ದಾರೆ. ಇದು ಬಿಡಿ, ರೊಲ್ಯಾಂಡ್‌ ಗ್ಯಾರಸ್‌ನಲ್ಲಿನ ನಿರ್ಣಾಯಕ ವಾರದಲ್ಲಿ ಇವರಲ್ಲದ “ಸಕತ್ತಾಗವೆÛ ನಮ್ಮ ಗಮನ ಸೆಳೆಯಬಹುದು!

ಶರಪೋವಾ; ಸೌಂದರ್ಯದ ಜೊತೆ ಮಾತೂ ಹರಿತ!
ರಷ್ಯಾದ ಸುಂದರಿ ಮರಿಯಾ ಶರಪೋವಾ ಉದ್ದೀಪನ ಮದ್ದು ಸೇವನೆಯ ನಿಷೇಧದದ ಶಿಕ್ಷೆಯಿಂದ ಹೊರಬಂದು ಮತ್ತೆ ಟೆನಿಸ್‌ ರ್ಯಾಕೆಟ್‌ ಹಿಡಿದಿದ್ದಾರೆ. ಈಕೆಗೆ ಸುಲಭದಲ್ಲಿ  ವೈಲ್ಡ್‌ಕಾರ್ಡ್‌ ಸಿಗುತ್ತಿದೆ ಎಂಬರ್ಥದಲ್ಲಿ  ವಿವಾದ ಎದ್ದಾಗ ಸುದ್ದಿಗೋಷ್ಠಿಯಲ್ಲೂ  ಈ ಪ್ರಶ್ನೆ ಎದುರಾಗಿದೆ. ಶರಪೋವಾ ಇವುಗಳನ್ನು ಎದುರಾಳಿಯ ಫೋರ್‌ ಹ್ಯಾಂಡ್‌ಗಳನ್ನು ಎದುರಿಸುವಷ್ಟೇ ಚಾಕಚಕ್ಯತೆಯಿಂದ ಉತ್ತರಿಸಿದ್ದಾರೆ.  ಇದೇ ವೇಳೆ ಅಪರಾಧಿಯಾಗಿ ಶಿಕ್ಷೆ ಅನುಭವಿಸಿ ಬಂದಿರುವ ಶರಪೋವಾ ಎದುರು ಪತ್ರಕರ್ತರು ಆಕ್ಷೇಪಾರ್ಹ ಪ್ರಶ್ನೆ ಕೇಳುವ ಘಟನೆಗಳು ನಡೆಯುತ್ತಿವೆ. 30 ವರ್ಷದ ಶರಪೋವಾರನ್ನು ಇಟಲಿಯ ಮಾಧ್ಯಮ ಮಿತ್ರ ಕೇಳುತ್ತಾನೆ, ಈಗ ಬಾಯ್‌ಫ್ರೆಂಡ್‌ ಇಲ್ಲದೆಯೂ ನೀವು ಸಂತೋಷವಾಗಿದ್ದೀರಾ?
 ಒಂಟಿಯಾಗಿರುವುದು ಅವರ ನಿರ್ಧಾರ. ಬ್ರೇಕ್‌ಅಪ್‌ ಅವರ ಸ್ವಾತಂತ್ರÂ. ಅವತ್ತಿನ ಸುದ್ದಿಗೋಷ್ಠಿಯಲ್ಲಿ ಇಟಲಿ ಪತ್ರಕರ್ತನ ಪ್ರಶ್ನೆಗೆ ಇತರ ಸಹೋದ್ಯೋಗಿ ಪತ್ರಕರ್ತರು ಕೂಡ ತಣ್ಣಗಾದರು, ಇರುಸುಮುರಿಸಿಗೆ ಒಳಗಾದರು. ಚೂಪಾಗಿ ನೋಡಿದ ಶರಪೋವಾ ಪ್ರತಿಯಾಗಿ ಪ್ರಶ್ನಿಸಿದರಂತೆ, ಯಪ್ಪಾ, ನಿನಗೆ ಮದುವೆ ಆಗಿದೆಯೇ? ಈ ಕ್ಷಣಕ್ಕೂ ಆ ಪತ್ರಕರ್ತ ಸುಧಾರಿಸಿಕೊಂಡಿಲ್ಲವಂತೆ! 

ಡೊಮಿನಿಕಾ ಸಿಬಿಕೋವಾ


ಸ್ಲೋವೇಕಿಯಾದ ಡೊಮಿನಿಕಾ ಸಿಬಿಕೋವಾರಿಗೆ ಈಗ 28 ವರ್ಷ. ಕಳೆದ ವರ್ಷ ಮೈಕೆಲ್‌ ಎಂಬುವವರ ಜೊತೆ ಲಗ್ನ ಕೂಡ ನಡೆದಿದೆ. ಆದರೆ ಅವರಿಬ್ಬರ ಬೈಕ್‌ ರೈಡ್‌ ಫೋಟೋಗಳು ಹಾಗೂ ಬಿಕಿನಿಯಲ್ಲಿನ ಡೊಮಿನಿಕಾರ ಸ್ನ್ಯಾಪ್‌ಗ್ಳು ಸಾಮಾಜಿಕ ಜಾಲತಾಣಗಳನ್ನು ರೋಮಾಂಚನಗೊಳಿಸಿವೆ. ವಿಶ್ವದ ಅಗ್ರ 4ರಲ್ಲಿ ಸ್ಥಾನ ಪಡೆದ ಡೊಮಿನಿಕಾ ತಮ್ಮ ಜೀವಮಾನದ ಫಾರಂನಲ್ಲಿದ್ದಾರೆ ಎಂಬ ಮಾತೂ ಇದೆ.

 ಫೈನಲ್‌ ಟಚ್‌ ಎಂಬುದು ಸಿಬಿಕೋವಾ ಫ‌ಲಿತಾಂಶಗಳಲ್ಲಿ ಕೈ ಅಳತೆಗೆ ಸಿಗುತ್ತಿಲ್ಲ. 2014ರ ಆಸ್ಟ್ರೇಲಿಯನ್‌ ಓಪನ್‌ನ ಫೈನಲ್‌ನಲ್ಲಿ ಆಡಿದ ಅನುಭವ ಸಿಬಿಕೋವಾಗಿದೆ. ಆದರೆ ಈವರೆಗೆ ಈಕೆ ಗಳಿಸಿರುವುದು ಒಂದೇ ಒಂದು ಪ್ರಶಸ್ತಿ, ಸಿಂಗಾಪೂರ್‌ನಲ್ಲಿ. 2017ರಲ್ಲಿಯೂ ಆಡಿದ ಟೂರ್ನಿಗಳಲ್ಲಿ ಹಲವು ಗಮನಾರ್ಹ ಪ್ರದರ್ಶನ ನೀಡಿದ್ದಿದೆ. ಆದರೆ ಒಂದೂ ಕೂಡ ಪ್ರಶಸ್ತಿಯಾಗಿ ಫ‌ಲಿಸಿಲ್ಲ.

ಮಾ.ವೆಂ.ಸ.ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next