Advertisement

ಒಕ್ಕಲಿಗರ ಸಂಘದಲ್ಲಿ ಮಹಿಳೆಯರಿಗೂ ಸ್ಥಾನ

12:59 PM Oct 25, 2017 | Team Udayavani |

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಸ್ಥಾನ ಕಲ್ಪಿಸಲು ಮಂಗಳವಾರ ನಡೆದ ಸಂಘದ ಕಾರ್ಯಕಾರಿ ಸಮಿತಿ ಸಭೆ ನಿರ್ಧರಿಸಿದೆ.

Advertisement

ಸಂಘದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಅವರನ್ನು ನೇರವಾಗಿ ಚುನಾವಣೆ (ಕೇಂದ್ರೀಯ ಚುನಾವಣೆ) ಮೂಲಕ ಆಯ್ಕೆ ಮಾಡಬೇಕು ಹಾಗೂ ಕಾರ್ಯಕಾರಿ ಸಮಿತಿಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸಬೇಕು ಎಂಬ ಒತ್ತಾಯ ಆಗಾಗ್ಗೆ ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯ ಕಾರ್ಯಸೂಚಿಯಲ್ಲಿ ಈ ಅಂಶವೂ ಸೇರಿಸಲಾಗಿತ್ತು.

ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸಲು ಸಭೆ ಸಮ್ಮತಿಸಿತು. ಆದರೆ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಖಜಾಂಚಿಯವರನ್ನು ನೇರ ಚುನಾವಣೆ ಮೂಲಕ ಆಯ್ಕೆ ಮಾಡಬೇಕು ಎಂಬ ಬಗ್ಗೆ ಒಮ್ಮತ ಮೂಡಲಿಲ್ಲ. ಹಾಗಾಗಿ ಈ ಕುರಿತು ವಿಶೇಷ ಸಾಮಾನ್ಯ ಸಭೆ ಕರೆದು ಚರ್ಚಿಸಲು ನಿರ್ಧರಿಸಲಾಯಿತು.

ಸಭೆ ಬಳಿಕ ಪ್ರತಿಕ್ರಿಯಿಸಿದ ಸಂಘದ ಅಧ್ಯಕ್ಷ ಡಿ.ಎನ್‌.ಬೆಟ್ಟೇಗೌಡ, ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸಲು ನಿರ್ಧರಿಸಲಾಯಿತು. ಕಾರ್ಯಕಾರಿ ಸಮಿತಿಯಲ್ಲಿ ಒಟ್ಟು 35 ಸದಸ್ಯರಿದ್ದು, ಇದರಲ್ಲಿ ಮಹಿಳೆಯರಿಗೆ ಶೇ.33ರಷ್ಟು ಸ್ಥಾನಗಳನ್ನು ಕಲ್ಪಿಸಬೇಕಿದೆ. ಈ ಸಂಬಂಧ ವಿಶೇಷ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಉಪವಿಧಿಗೆ (ಬೈಲಾ) ತಿದ್ದುಪಡಿ ತರಬೇಕಿದೆ ಎಂದು ಹೇಳಿದರು.

ಸಂಘದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಖಜಾಂಚಿಯವರನ್ನು ನೇರವಾಗಿ ಚುನಾವಣೆಯಲ್ಲಿ ಆಯ್ಕೆ ಮಾಡಬೇಕು ಎಂಬ ಪ್ರಸ್ತಾರಕ್ಕೆ ತುಸು ಆಕ್ಷೇಪ ವ್ಯಕ್ತವಾಯಿತು. ಆ ಹಿನ್ನೆಲೆಯಲ್ಲಿ ವಿಶೇಷ ಸಾಮಾನ್ಯ ಸಭೆ ಕರೆದು ಚರ್ಚಿಸಲು ನಿರ್ಧರಿಸಲಾಯಿತು ಎಂದು ತಿಳಿಸಿದರು.

Advertisement

ಒತ್ತಾಯ: ಇದಕ್ಕೂ ಮೊದಲು ರಾಜ್ಯ ಒಕ್ಕಲಿಗರ ಒಕ್ಕೂಟ ಸೇರಿದಂತೆ ನಾನಾ ಸಂಘಟನೆಗಳು ಸಂಘದ ಕಾರ್ಯಕಾರಿ ಸಮಿತಿಗೆ ಮನವಿ ಸಲ್ಲಿಸಿದವು. ಸಂಘದಲ್ಲಿ ಮಹಿಳಾ ಪ್ರತಿನಿಧಿಗಳಿಗೂ ಆದ್ಯತೆ ನೀಡಬೇಕಿದ್ದು, ಕಾರ್ಯಕಾರಿ ಸಮಿತಿಯಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಬೇಕು.

ಸಂಘದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಖಜಾಂಚಿ ನೇರ ಚುನಾವಣೆಯಲ್ಲಿ ಆಯ್ಕೆಯಾಗುವ ವ್ಯವಸ್ಥೆ ತಂದರೆ ಇನ್ನಷ್ಟು ಪಾರದರ್ಶಕವಾಗಿ ಕಾರ್ಯ ನಿರ್ವಹಿಸಲು ಅನುಕೂಲವಾಗಲಿದೆ. ಹಾಗಾಗಿ ಈ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಲಾಗಿದೆ ಎಂದು ರಾಜ್ಯ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ಸಿ.ವಿ.ದೇವರಾಜ್‌ ತಿಳಿಸಿದರು. ಇದೇ ವೇಳೆ ಪ್ರಮುಖರಾದ ಭಾರತಿ ಶಂಕರ್‌, ಮಹದೇವಮ್ಮ ಇತರರು ಮನವಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next