ಮುಂಬಯಿ: ಬುಧವಾರದ ವನಿತಾ ಪ್ರೀಮಿಯರ್ ಲೀಗ್‌ನಲ್ಲಿ ಸೋತ ಎರಡು ತಂಡಗಳ ನಡುವಿನ ಸೆಣಸಾಟ ಕಂಡುಬಂದರೆ, ಗುರುವಾರ ಕೂಟದ ಅಜೇಯ ತಂಡಗಳೆರಡು ಸ್ಪರ್ಧೆಗೆ ಇಳಿಯಲಿವೆ.
ಇಲ್ಲಿ ಎದುರಾಗುವ ತಂಡಗಳೆಂದರೆ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್. ಹರ್ಮನ್‌ಪ್ರೀತ್ ಕೌರ್ ಮತ್ತು ಮೆಗ್ ಲ್ಯಾನಿಂಗ್ ಸಾರಥ್ಯದ ಮುಂಬೈ-ಡೆಲ್ಲಿ ತಂಡಗಳೆರಡೂ ಕೂಟದ ಹಾಟ್ ಫೇವರಿಟ್‌ಗಳಾಗಿ ಗೋಚರಿಸಿವೆ. ಇವರಲ್ಲೊಬ್ಬರು ಚಾಂಪಿಯನ್ ಆಗುವುದು ಖಚಿತ ಎಂಬಷ್ಟರ ಮಟ್ಟಿಗೆ ಟ್ರೆಂಡ್ ಸೃಷ್ಟಿಯಾಗಿದೆ. ಆಡಿದ ಎರಡೂ ಪಂದ್ಯಗಳಲ್ಲಿ ಅಧಿಕಾರಯುತ ಜಯ ಸಾಧಿಸಿವೆ. ಆದರೆ ಗುರುವಾರ ಈ ಅಜೇಯ ತಂಡಗಳಲ್ಲಿ ಒಂದು ತಂಡ ಸೋಲಿನ ಮುಖ ಕಾಣಲೇಬೇಕು.
ಮೇಲ್ನೋಟಕ್ಕೆ ಇದೊಂದು 50-50 ಪಂದ್ಯ. ಆತಿಥೇಯ ಮುಂಬೈ ಉದ್ಘಾಟನ ಪಂದ್ಯದಲ್ಲಿ 207 ರನ್ ಪೇರಿಸಿ, ಬಳಿಕ “ಜೈಂಟ್ಸ್’ ಎಂಬ ಹಣೆಪಟ್ಟಿ ಹೊತ್ತಿರುವ ಗುಜರಾತ್ ತಂಡವನ್ನು ಜುಜುಬಿ 64ಕ್ಕೆ ಉದುರಿಸಿತ್ತು. ಬಳಿಕ ಆರ್‌ಸಿಬಿ ವಿರುದ್ಧವಂತೂ ಒಂದೇ ವಿಕೆಟಿಗೆ 159 ರನ್ ಬಾರಿಸಿ ಅಮೋಘ ಜಯ ಸಾಧಿಸಿತ್ತು. ಹ್ಯಾಲಿ ಮ್ಯಾಥ್ಯೂಸ್, ನಾಯಕಿ ಕೌರ್, ಅಮೇಲಿಯಾ ಕೆರ್, ನ್ಯಾಟ್ ಸ್ಕಿವರ್ ಅವರೆಲ್ಲ ಈಗಾಗಲೇ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಬೌಲಿಂಗ್‌ನಲ್ಲಿ ಸೈಕಾ ಇಶಾಖ್, ಕೆರ್, ಬ್ರಂಟ್, ಮ್ಯಾಥ್ಯೂಸ್ ಘಾತಕವಾಗಿ ಪರಿಣಮಿಸಿದ್ದಾರೆ.
ಡೆಲ್ಲಿಯ ಬ್ಯಾಟಿಂಗ್ ಅಬ್ಬರ
ಡೆಲ್ಲಿ ಎರಡೂ ಪಂದ್ಯಗಳಲ್ಲಿ ಇನ್ನೂರರ ಗಡಿಯನ್ನು ದಾಟಿ ಮುನ್ನುಗ್ಗಿದ ತಂಡ. ಆರ್‌ಸಿಬಿ ವಿರುದ್ಧ 2ಕ್ಕೆ 223, ಯುಪಿ ಎದುರು 4ಕ್ಕೆ 211 ರನ್ ಪೇರಿಸಿದ ಹೆಗ್ಗಳಿಕೆ ಡೆಲ್ಲಿ ತಂಡದ್ದು. ನಾಯಕಿ ಮೆಗ್ ಲ್ಯಾನಿಂಗ್ ಎರಡೂ ಪಂದ್ಯಗಳಲ್ಲಿ 70 ರನ್ ರಾಶಿ ಹಾಕಿದ್ದಾರೆ. ಡ್ಯಾಶಿಂಗ್ ಬ್ಯಾಟರ್ ಶಫಾಲಿ ವರ್ಮ ಯುಪಿ ವಿರುದ್ಧ 84 ರನ್ ಸಿಡಿಸಿ ಅಪಾಯದ ಮುನ್ಸೂಚನೆ ನೀಡಿದ್ದಾರೆ. ಜೆಮಿಮಾ ರೋಡ್ರಿಗಸ್, ಮರಿಜಾನ್ ಕಾಪ್ ಕೂಡ ಉತ್ತಮ ಲಯದಲ್ಲಿದ್ದಾರೆ.