ಬಾಗಲಕೋಟೆ: ನಗರದ ಬಿವಿವಿ ಸಂಘದ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಏಕ್ಯೂಎಸಿ ಘಟಕ ಹಾಗೂ ಮಹಿಳಾ ಸಶಕ್ತೀಕರಣ ಘಟಕದ ಸಹಯೋಗದಲ್ಲಿ ಬಜೆಟ್-2022: ಮಹಿಳೆಯರಿಗೆ ಆರ್ಥಿಕ ಸಾಕ್ಷರತೆ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಿದ್ದ ಚಾರ್ಟರ್ಡ್ ಅಕೌಂಟೆಂಟ್ ಸೀಮಾ ಮಣ್ಣೂರ ಮಾತನಾಡಿ, 2022ರ ಕೇಂದ್ರದ ಬಜೆಟ್ ಸಾಂಕ್ರಾಮಿಕದಿಂದ ಹೊರಬರುತ್ತಿರುವ ಸಮಸ್ತ ಭಾರತೀಯರಿಗೆ ಆಶಾದಾಯಕವಾಗಿದೆ. ಸರ್ವತೋಮುಖ ಅಭಿವೃದ್ಧಿಯ ನಿಟ್ಟಿನಲ್ಲಿ ಬೂಸ್ಟರ್ ಡೋಸ್ ನೀಡಿದಂತಾಗಿ ಭರವಸೆಯನ್ನು ಬಲಪಡಿಸಿದೆ. ಜಾಗತಿಕರಣದ ಇವತ್ತಿನ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಕೇಂದ್ರದ ಬಜೆಟ್ ಅರಿವು ಎಷ್ಟು ಮುಖ್ಯವೋ, ಪ್ರತಿಯೊಬ್ಬ ವ್ಯಕ್ತಿಯ ಕುಟುಂಬದ ಬಜೆಟ್ ಅರಿವೂ ಕೂಡಾ ಅಷ್ಟೇ ಪ್ರಮುಖವಾಗಿದೆ ಎಂದು ಹೇಳಿದರು.
ಭಾರತ ಹಳ್ಳಿಗಳ ದೇಶ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳಿಗೆ ಮನೆಯ ಖರ್ಚುವೆಚ್ಚಗಳ ಬಗೆಗೆ ಅರಿವು ಮೂಡಿಸಬೇಕಾದ ಅಗತ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಆರ್ಥಿಕ ಸಾಕ್ಷರತೆ ಬೇಕೆಬೇಕು. ಅಂದರೆ ಮನೆಗೆ ಬರುವ ಆದಾಯ ಎಷ್ಟು, ಮಾಡಬೇಕಾದ ಖರ್ಚು ಎಷ್ಟು, ಉಳಿತಾಯ ಎಷ್ಟು ಮಾಡಬೇಕು ಎಂಬುದರ ಕುರಿತು ಮನೆಯ ಯಜಮಾನ-ಯಜಮಾನಿ ಇಬ್ಬರೂ ಕೂಡಿ ಚರ್ಚಿಸಬೇಕಾದ ಅಗತ್ಯವಿದೆ. ನಮ್ಮ ಮಾಸಿಕ ಆದಯಕ್ಕೆ ತಕ್ಕಂತೆ ನಮ್ಮ ಮನೆಯ ಖರ್ಚು – ವೆಚ್ಚಗಳಿರಬೇಕು.
ಬರುವ ಆದಾಯದಲ್ಲಿಯೇ ಪ್ರತಿ ತಿಂಗಳ ಮನೆಯ ಬಜೆಟ್‌ನ್ನು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅನೇಕ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ ಎಂದು ತಿಳಿಸಿದರು. ಜಾಗತಿಕ ಹಣಕಾಸು ವ್ಯವಹಾರ, ಅಂದರೆ ಖರ್ಚು-ವೆಚ್ಚ 50:30:20 ರಂತೆ ವಿಭಾಗ ಮಾಡಿಕೊಳ್ಳಬೇಕು. ತಮಗೆ ಬರುವ ಆದಾಯದ 20ರಷ್ಟು ಭಾಗ ಉಳಿತಾಯ ಖಾತೆಗೆ ತೆಗೆದಿರಸಬೇಕು. 50ರಷ್ಟು ಭಾಗ ಖಾತ್ರಿ ಇರುವ ಮನೆಯ ತಿಂಗಳಿನ ಖರ್ಚಿಗಾಗಿ ತೆಗೆದಿಡಬೇಕು. 30ರಷ್ಟು ಭಾಗ ಅನಿರೀಕ್ಷಿತ
ಖರ್ಚಿಗಾಗಿ ಅಥವಾ ಯಾವುದೇ ಆಸ್ತಿಯನ್ನು ಕೊಳ್ಳುವ ಸಲುವಾಗಿಯೋ ಅಥವಾ ಭವಿಷ್ಯದ ಬದುಕಿಗೆ ಅನುಕೂಲವಾಗಲೆಂದೋ ಉಳಿತಾಯ ಖಾತೆಯಲ್ಲಿ ತೆಗೆದಿಡಬೇಕು ಎಂದು ಹೇಳಿದರು.
ಅಲ್ಲದೇ ಹಣವನ್ನು ಬ್ಯಾಂಕಿನಲ್ಲಿ ಫಿಕ್ಸೆಡ್ ಡಿಪಾಜಿಟ್ ಅಥವಾ ಮ್ಯೂಚುವಲ್ ಫಂಡ್ ಅಥವಾ ನ್ಯಾಷನಲ್ ಫೈನೆನ್ಸ್ ಸ್ಕೀಮ್ ನಲ್ಲಿ ಬಡ್ಡಿಗಾಗಿ ಹೂಡಬೇಕು ಎಂಬ ಸಲಹೆ ನೀಡಿದರು. ಪ್ರಾಚಾರ್ಯ ಪ್ರೊ| ಎಸ್.ಎ. ಭೂಸನೂರುಮಠ ಅಧ್ಯಕ್ಷತೆ ವಹಿಸಿ, ಪ್ರತಿಯೊಬ್ಬ ಉದ್ಯೋಗಸ್ಥ ಮತ್ತು ಉದ್ಯಮಿಗೆ ತಕ್ಕಮಟ್ಟಿನ ಹಣಕಾಸಿನ ವ್ಯವಹಾರದ ಮಾಹಿತಿ ಇರಬೇಕು ಎಂದರು.
ಐಕ್ಯುಎಸಿ ಸಂಯೋಜಕ ಡಾ. ಎಸ್.ಎಂ.ಗಾಂವಕರ್, ಮಹಿಳಾ ಸಶಕ್ತೀಕರಣ ಘಟಕದ ಕಾಯಾಧ್ಯಕ್ಷ ಪ್ರೊ| ಎಸ್.ಆರ್.ದೇಶಪಾಂಡೆ, ಸದಸ್ಯೆ ತುಳಸಿ ಚೌವ್ಹಾಣ, ವಿದ್ಯಾರ್ಥಿ ಪ್ರತಿನಿಧಿ ಸುರಭಿ ಕುಂಬಾರ ಮುಂತಾದವರು ಉಪಸ್ಥಿತರಿದ್ದರು. ಪ್ರೊ| ಎಸ್.ಆರ್.ದೇಶಪಾಂಡೆ ಸ್ವಾಗತಿಸಿದರು. ಶ್ವೇತಾ ರೇವಡಕುಂಡಿ ನಿರೂಪಿಸಿದರು. ತುಳಸಿ ಚೌವ್ಹಾಣ ವಂದಿಸಿದರು.