ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆಯಲ್ಲಿ ಮಹಿಳೆಯೊಬ್ಬರು ತಂದೆ ಹಾಗೂ ಪುತ್ರಿಯ ಮುಂದೆಯೇ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ.
ಕುಮ್ಡೇಲು ನಿವಾಸಿ ಉಮೇಶ್ ಬೆಳ್ಚಡರ ಪತ್ನಿ ಯಶೋಧಾ(38) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಘಟನೆಯ ಕುರಿತು ಆಕೆಯ ಪುತ್ರಿ ಸಂಪ್ರೀತಾ ನೀಡಿದ ದೂರಿನಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಯಶೋಧ ಅವರು ಮೂರ್ಛೆ ರೋಗದಿಂದ ಬಳಲುತ್ತಿದ್ದು ಕೆಲವೊಂದು ಬಾರಿ ತೀವ್ರ ಕೋಪಕ್ಕೆ ಒಳಗಾಗಿ ತಾಯಿಯಲ್ಲಿ ಜಗಳ ಮಾಡುತ್ತಿದ್ದರು. ಹೀಗಾಗಿ ಯಶೋಧ ಅವರ ಗಂಡ 10 ವರ್ಷದ ಹಿಂದೆ ಬಿಟ್ಟು ಹೋಗಿದ್ದರು.
ನಿನ್ನೆ (ಸೋಮವಾರ) ರಾತ್ರಿ 09:30 ಗಂಟೆ ಸಮಯಕ್ಕೆ ತಾಯಿಯೊಂದಿಗೆ ಬಾಯಿ ಮಾತಿನ ತಕರಾರು ಮಾಡಿದ್ದು, ತಾಯಿ ಕೈಯಿಂದ ಹೊಡೆಯಲು ಮುಂದಾದಾಗ ಅಣ್ಣ ತಡೆದಿದ್ದಾನೆ.
ಬಳಿಕ ಯಶೋಧ ಅವರಷ್ಟಕ್ಕೆ ಬೈದುಕೊಂಡು ಹೋಗಿ ಮಲಗಿದ್ದು, ಇಂದು ಬೆಳಿಗ್ಗೆ ಎಂದಿನಂತೆ ಎದ್ದು, ಕೆ ಎಸ್ ಆರ್ ಟಿ ಸಿ ಬಿಜೈ ಬಸ್ ಸ್ಟಾಂಡ್ ಗೆ ಕೆಲಸಕ್ಕೆ ಹೋಗಿದ್ದಾರೆ. ಆದರೆ 9 ಗಂಟೆಗೆ ಮನೆಗೆ ಕರೆ ಮಾಡಿ “ನಾನು ಫರಂಗಿಪೇಟೆಯಲ್ಲಿದ್ದೇನೆ. ನನಗೆ ಬದುಕುವುದು ಇಷ್ಟವಿಲ್ಲ. ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ.
ಕೂಡಲೇ ಪುತ್ರಿ ಹಾಗೂ ತಂದೆ ಬಾಲಕೃಷ್ಣ ಅವರ ರಿಕ್ಷಾದಲ್ಲಿ ಫರಂಗಿಪೇಟೆಗೆ ಬಂದಾಗ ಯಶೋಧಾ ಅವರು ನೇತ್ರಾವತಿ ನದಿ ಕಿನಾರೆಗೆ ವೇಗವಾಗಿ ನಡೆದುಕೊಂಡು ಹೋಗುತ್ತಿದ್ದು, ಓಡಿ ಹೋಗಿ ನದಿ ಕಿನಾರೆ ಬಳಿ ಹಿಡಿದುಕೊಂಡಾಗ ಪುತ್ರಿ ಹಾಗೂ ತಂದೆಯಾ ಕೈಯನ್ನು ದೂಡಿ ಏಕಾಏಕಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆಯ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ