Advertisement
ಹೆಣ್ಣು ಅಂದಕೂಡಲೇ ಅನೇಕರು ಸೌಂದರ್ಯದ ಮತ್ತು ಭೋಗದ ವಸ್ತು ಎಂದುಕೊಂಡಿದ್ದಾರೆ. ಅವಳು ತುಂಬಾ ಸೂಕ್ಷ್ಮ. ಕಣ್ಣೀರಿನ ಕೊಡ. ಎಲ್ಲವನ್ನೂ ಸಹಿಸಿಕೊಂಡು ಮೌನಿಯಾಗಿ ಬಾಳುವ ನಾರಿ. ಎಷ್ಟಾದರೂ ಹೆಣ್ಣು ಅಬಲೆ, ನಾಚಿಕೆ ಸ್ವಭಾವದವಳು ಎಂಬ ಭಾವನೆಗಳು ಅನೇಕರಲ್ಲಿ ಇದ್ದರೂ ನಮ್ಮ ಕಣ್ಣೆದುರಲ್ಲೇ ಹಲವಾರು ಸಾಧನೆಗಳನ್ನು ಮಾಡಿ ಇತಿಹಾಸ ಸೃಷ್ಟಿಸಿದ ಅನೇಕ ಮಹಿಳಾಮಣಿಗಳು ಈ ಎಲ್ಲಾ ಭಾವನೆಗಳಿಗೆ ಮಣ್ಣೆರಚಿರುವುದು ಮಾತ್ರ ಸತ್ಯ. ಈ ರೀತಿಯ ಮಹಿಳಾಮಣಿಗಳು ಬೆರಳೆಣಿಕೆಯಷ್ಟಿರುವುದರಿಂದ ಪ್ರಾಬಲ್ಯತೆಯನ್ನು ಇನ್ನೂ ಕಂಡಿಲ್ಲ. ಪ್ರಾಬಲ್ಯತೆ ಕಾಣಲು ಬೇಕಾಗಿರುವ ಎಲ್ಲಾ ಕಾನೂನು ಚೌಕಟ್ಟುಗಳು ಇದ್ದರೂ ಹಲವು ರೀತಿಯ ವೈಯಕ್ತಿಕ ವಿಚಾರಗಳು ಅವರ ಸಾಧನೆಗೆ ಧಕ್ಕೆಯುಂಟು ಮಾಡುತ್ತವೆ. ಸಂಸ್ಕೃತಿಯ ಹೆಸರಿನಲ್ಲಿ ಹೆಣ್ಣನ್ನು ಹಲವಾರು ರೀತಿಯ ಅಸಂಬದ್ಧ ಕಟ್ಟುಪಾಡುಗಳಲ್ಲಿ ಸಿಲುಕಿಸಿರುವುದನ್ನು ಕೂಡ ನಾವು ಬಹಳಷ್ಟು ನೋಡಿದ್ದೇವೆ. ಅಲ್ಲದೆ ಹೆಣ್ಣು ಸ್ವಲ್ಪ ಗಟ್ಟಿ ಹೃದಯದವಳಾಗಿದ್ದರೂ ಸಾಕು ಅವಳನ್ನು ಗಂಡುಬೀರಿ ಎಂದು ತಮಾಷೆ ಮಾಡುತ್ತಾರೆ.
ಹೆಣ್ಣಿಗೆ ಹೆಣ್ಣೇ ಮಾರಿ ಎಂಬಂತೆ ಹೆಣ್ಣು ಸಮಾಜಕ್ಕೆ ಕಳಂಕ ಬರುವುದು ಹೆಣ್ಣಿನಿಂದಲೇ ಎಂದರೆ ಆಶ್ಚರ್ಯವಿಲ್ಲ. ಕೆಲವೊಂದು ಪ್ರೇಮ ಪ್ರಕರಣಗಳಲ್ಲಿ ಹೆಣ್ಮಕ್ಕಳೇ ಹುಡುಗರನ್ನು ಪ್ರೇಮಕ್ಕೆ ಸೆಳೆದು ದಾರಿ ತಪ್ಪಿಸಿ ಕೊನೆಗೆ ಅಪಾರ ಮಟ್ಟದ ನೋವನ್ನು ಕೊಡುತ್ತಾರೆ ಎನ್ನುತ್ತಾರೆ. ಇಂಥ ಘಟನೆಗಳು ನಡೆದಾಗ ಸಾಮಾನ್ಯವಾಗಿ ಹುಡುಗರು ಇಡೀ ಹೆಣ್ಣು ಸಮಾಜವನ್ನು ದೂಷಿಸುವುದು ಸಹಜ. ತಪ್ಪು ಅಥವಾ ಮೋಸ ಹೆಣ್ಣಿನಿಂದಲೇ ಆಗಿದೆ ಎನ್ನುವುದು ಸರಿಯಲ್ಲ. ಅಲ್ಲದೆ ಅದಕ್ಕಾಗಿ ಇಡೀ ಹೆಣ್ಣು ಕುಲವನ್ನು ದೂಷಿಸುವ ಅಗತ್ಯವೂ ಇಲ್ಲ. ಹೆಣ್ಣು ಮಾತ್ರವಲ್ಲ, ಗಂಡಿನಿಂದಲೂ ಈ ರೀತಿಯ ಮೋಸ ನಡೆಯಬಹುದು. ಆದ್ದರಿಂದ ನಾವು ಇದನ್ನು ಹೆಣ್ಣು ಅಥವಾ ಗಂಡು ಎಂಬ ಪಂಗಡವನ್ನು ಮಾಡಲು ಸಾಧ್ಯವಿಲ್ಲ. ಇದೊಂದು ಸಮಾಜಘಾತಕ ಜನರ ಚಟವಾದ್ದರಿಂದ ಪ್ರತಿಯೊಬ್ಬನೂ ಅದರಲ್ಲೂ ವಿದ್ಯಾವಂತರಾದ ಯುವಶಕ್ತಿ ಈ ರೀತಿಯ ಮೋಸಗಳಲ್ಲಿ ಪಾಲುದಾರರಾಗುವ ಮೊದಲು ಬಹಳಷ್ಟು ಜಾಗೃತವಾಗಿರುವುದು ಒಳಿತು. ಕೆಲವೊಮ್ಮೆ ಕಾನೂನಿನ ದುರುಪಯೋಗಗಳನ್ನು ನೋಡಿದ್ದೇವೆ. ಕೆಲವೊಂದು ಕಡಿವಾಣಗಳನ್ನು ಹೇಗೆ ಹೆಣ್ಮಕ್ಕಳಿಗೋಸ್ಕರ ಮಾಡುತ್ತಾರೋ ಅದೇ ರೀತಿ ಗಂಡು ಮಕ್ಕಳಿಗೂ ಅಂತಹ ಕೆಲವು ಕಡಿವಾಣಗಳನ್ನು ವಿಧಿಸಿದರೆ ಸಮಾಜದಲ್ಲಿ ಅಂದರೆ ನಮ್ಮ ಸುತ್ತಮುತ್ತ ಒಂದು ಸಣ್ಣ ರೀತಿಯ ಉನ್ನತಿಯ ಬದಲಾವಣೆ ಕಾಣಬಹುದು ಅಲ್ಲವೇ? ಐಶ್ವರ್ಯಾ ರೈ, ಶ್ರೀನಿವಾಸ ತಾಂತ್ರಿಕ ವಿದ್ಯಾಲಯ, ಮಂಗಳೂರು