Advertisement

ಮಹಿಳೆಯರು ಅಡೆತಡೆ ಇಲ್ಲದೇ ಸಾಧನೆಯತ್ತ ಸಾಗಿ

07:47 AM Mar 10, 2019 | Team Udayavani |

ಚನ್ನಪಟ್ಟಣ: ಸೀಮಿತ ಚೌಕಟ್ಟಿನೊಳಗಿರಬೇಕೆಂಬಸಂಕೋಲೆಯನ್ನು ಬಿಟ್ಟು, ಸಾಧನೆಯತ್ತ ಹೆಜ್ಜೆ ಇರಿಸಿದರೆ ಯಶಸ್ಸು ಯಾವುದೇ ಅಡೆತಡೆ ಇಲ್ಲದೆ ಲಭಿಸುತ್ತದೆ ಎಂದು ಮಹಿಳಾ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ ಹೇಳಿದರು.

Advertisement

ತಾಲೂಕಿನ ದೇವರಹಳ್ಳಿ ಗ್ರಾಮದ ಶ್ರೀಶಿರಡಿ ಸಾಯಿಬಾಬಾ ವೃದ್ಧಾಶ್ರಮದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಮತ್ತು ರಾಮಕೃಷ್ಣ ಪರಮಹಂಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಣಿ ಚನ್ನಮ್ಮ, ಸಂಚಿ ಹೊನ್ನಮ್ಮ, ಅಕ್ಕಮಹಾದೇವಿ ಅಂತಹವರ ಚಾರಿತ್ರಿಕ ಹಿನ್ನೆಲೆಯನ್ನು ಇಂದಿನ ಯುವತಿಯರು ತಿಳಿದುಕೊಳ್ಳಬೇಕು. ಕೀಳರಿಮೆ ಬಿಟ್ಟು ಸಾಧನೆಯತ್ತ ಮುಖಮಾಡಬೇಕು ಎಂದರು.

ಉತ್ತಮ ಭವಿಷ್ಯಕ್ಕೆ ಅನೇಕ ಮಾರ್ಗವಿದೆ: ಪಶುವೈದ್ಯೆ ಡಾ.ರಕ್ಷಿತ ಮಾತನಾಡಿ, ಸಾಧನೆ ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅನೇಕ ರೀತಿಯ ಉತ್ತಮ ಮಾರ್ಗಗಳಿವೆ. ಪೋಷಕರು ಹೆಣ್ಣುಮಕ್ಕಳಿಂದ ಏನೂ ಸಾಧಿಸಲಾರರುಎಂಬ ಕೀಳರಿಮೆಯನ್ನು ಅನುಸರಿಸದೇ ಉನ್ನತ ಶಿಕ್ಷಣದವರೆಗೂ ಮುಂದುವರಿಸಿದರೆ ಹೆಣ್ಣು ಮಕ್ಕಳು ಉನ್ನತ ಸ್ಥಾನಕ್ಕೇರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

ಯಶಸ್ವಿ ಮಹಿಳೆಗೆ ಪತಿ ಸಹಕಾರ: ಹೆಣ್ಣು ಮಗಳು ಶಿಕ್ಷಣ ಪಡೆದರೆ ಜಗತ್ತನ್ನು ಆಳಬಲ್ಲಳು ಎನ್ನುವುದಕ್ಕೆ ಇತಿಹಾಸದ ಪುಟದಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತವೆ. ಅವುಗಳನ್ನು ಕಣ್ತೆರೆದು ನೋಡಿದರೆ ಸತ್ಯ ಅರ್ಥವಾಗುತ್ತದೆ. ಯಶಸ್ವಿ ಮಹಿಳೆಯ ಹಿಂದೆ ಪತಿಯ ಸಹಕಾರವೂ ಸಹ ಸಾಕಷ್ಟಿರುತ್ತದೆ. ವಿರೋಧಗಳನ್ನು ಮೆಟ್ಟಿನಿಂತಾಗ ಅಷ್ಟೇ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದುಪತ್ರಕರ್ತೆ ಸುಧಾರಾಣಿ ಹೇಳಿದರು.

ಮಹಿಳೆಯರ ಹೋರಾಟ ಅನಿವಾರ್ಯ: ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಕೆ.ಟಿ.ಲಕ್ಷ್ಮಮ್ಮ ಮಾತನಾಡಿ, ಮಹಿಳೆಯರ ಪರವಾದ ಸಾಕಷ್ಟು ಕಾನೂನುಗಳು ಜಾರಿಯಾಗಿದ್ದರೂ ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲುತ್ತಿಲ್ಲ. ಇದಕ್ಕೆ ಮೂಲ ಕಾರಣ ಮಹಿಳೆಯರು ಸಂಘಟನಾತ್ಮಕವಾಗಿ ಜಾಗೃತರಾಗದಿರುವುದು. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯನ್ನು ವ್ಯವಸ್ಥಿತವಾಗಿ ಸಾಧನೆಯಿಂದ ಹಿಂದೆ ಸರಿಯುವಂತೆ ಮಾಡಲಾಗುತ್ತಿದೆ, ಅದರ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದು ತಿಳಿಸಿದರು.

Advertisement

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಯಿತು. ಆಶ್ರಮದಲ್ಲಿರುವ ಹಿರಿಯರನ್ನು ಗೌರಸಲಾಯಿತು. ವೃದ್ಧಾಶ್ರಮದ ಮುಖ್ಯಸ್ಥ ಹರೀಶ್‌ ಹೆಗ್ಗಡೆ ರಾಮಕೃಷ್ಣ ಪರಮಹಂಸರ ಜೀವನ ಸಾಧನೆಗಳ ಬಗ್ಗೆ ತಿಳಿಸಿಕೊಟ್ಟರು. 

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ಖಮರ್‌ ನಿಜಾಮಿ, ಶಿಕ್ಷಣ ಇಲಾಖೆಯ ಎಚ್‌.ವಿ.ರಕ್ಷಿತಾ, ಮಜ್ದೂರ್‌ ಕಾಂಗ್ರೆಸ್‌ ಅಧ್ಯಕ್ಷೆ ಜಯಲಕ್ಷ್ಮೀ, ಅಂಬೇಡ್ಕರ್‌ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷೆ ಶಾಂತಮ್ಮ, ಮಹಿಳಾ ಕಾಂಗ್ರೆಸ್‌ ಕಾರ್ಯದರ್ಶಿ ಜಯಶೀಲ, ಉದ್ಯಮಿ ಚಂದ್ರಮ್ಮ, ಟೆಕ್ಕಿ ನವ್ಯಶ್ರೀ. ಆರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next