Advertisement
ವಿವಾಹವಾಗಿ ನೂರು ಕನಸುಗಳನ್ನು ಹೊತ್ತು ಪತಿಯ ಮನೆಗೆ ಕಾಲಿರಿಸುತ್ತಾಳೆ, ನಮವಧು. ಕಾಲಿರಿಸುವುದು ಒಂದು ಸುಂದರವಾದ ಪದ. ಹೇಳಿಕೇಳಿ- ಅಕ್ಕಿ ತುಂಬಿದ ಬಳ್ಳವನ್ನು ಒದ್ದು ಒಳ ಬರುವುದಲ್ಲವೆ? ಆ ಸಂತೋಷ ಕೆಲವೇ ದಿನಗಳು ಮಾತ್ರ. ಮನೆಯವರಿಗೇನಾದರೂ ಒಳ್ಳೆಯದಾಯಿತೋ ಆಗ ಮಾತಿಲ್ಲ. ಮನೆಯಲ್ಲೇನಾದರೂ ತೊಂದರೆಯಾಯಿತೋ ಆಗ ಅದು ಬಂದವಳ ಕಾಲ್ಗುಣವಾಗಿ ಬಿಡುತ್ತದೆ. ಒಂದೇ ತಿಂಗಳಿನಲ್ಲಿ ಅಜ್ಜಿ ತೀರಿಹೋದರೆಂದಿಟ್ಟುಕೊಳ್ಳಿ. ವಯಸ್ಸಾದ ಜೀವ, ಅದಾಗಲೇ ಹಾಸಿಗೆ ಹಿಡಿದಿದ್ದವರು, ತೀರಿಕೊಳ್ಳುವುದು ಸಹಜವೇ. ಮೊಮ್ಮಗನ ಲಗ್ನ ನೋಡಬೇಕು ಎಂದು ಆಸೆ ಪಡುತ್ತಿದ್ದರು, ಅದನ್ನೂ ನೋಡಿಯಾಯಿತು. ಕೊನೆಯಾಸೆ ಈಡೇರಿ ನೆಮ್ಮದಿಯಲ್ಲಿ ಕಣ್ಣು ಮುಚ್ಚಿದ್ದರು ಆಕೆ. ಅದಕ್ಕೆ ಕಾರಣ, ವಧುವಿನ ಪ್ರವೇಶ ಅಲ್ಲವೇ ಅಲ್ಲ. ಮನೆಯವರ ವ್ಯವಹಾರದಲ್ಲೇನಾದರೂ ಏರುಪೇರಾಯಿತು ಎಂದಿಟ್ಟುಕೊಳ್ಳಿ. ಆಗ ಅದಕ್ಕೆ ಬಂದವಳ ಕಾಲ್ಗುಣವೇ ಕಾರಣವಾಗಿರುತ್ತದೆ. ತನ್ನದಲ್ಲದ ತಪ್ಪಿಗೆ “ಕಾಲ್ಗುಣ ಚೆನ್ನಾಗಿಲ್ಲ’ ಎಂಬ ನಿಂದನೆಯನ್ನು ಆಕೆ ಹೊರಬೇಕಾಗುತ್ತದೆ.
“ನನ್ನ ಲಗ್ನವಾಗಿ ನಾನು ಪತಿಯ ಮನೆಗೆ ಕಾಲಿರಿಸಿದ ನಂತರ, ಅಲ್ಲಿ ಮೇಲಿಂದ ಮೇಲೆ ಒಳ್ಳೆಯದೇ ಆಗಿದೆ. ಎಲ್ಲರೂ ನಿನ್ನ ಕಾಲ್ಗುಣದ ಫಲ ಅಂತಾರೆ. ಈ ಕಾಲ್ಗುಣ ಎನ್ನುವುದು ಕೇವಲ ಹೆಣ್ಣಿಗೇ ಸೀಮಿತವೆ?’
Related Articles
Advertisement
ಹೆಣ್ಣು ತಾನು ಹುಟ್ಟಿದ ಮನೆಯನ್ನು ತೊರೆದು ವಿವಾಹವಾದ ಮನೆಗೆ ಬರುವುದು ಸಂಪ್ರದಾಯ. ಇದು ಬಹುಕಾಲದಿಂದಲೂ ನಡೆದುಕೊಂಡು ಬಂದಿದೆ. ಅವಳು ಮನೆಗೆ ಪ್ರವೇಶವಾಗುವ ತನಕ ಆ ಮನೆಯಲ್ಲಿದ್ದವರಿಗೆ ಇದೊಂದು ನೆಪ ಇರಲಿಲ್ಲ. ಅಲ್ಲಿಯವರಿಗಿಲ್ಲದ ಪರಿಣಾಮ ನೂತನ ಮದುಮಗಳು ಬಂದೊಡನೆ ಹೇಗೆ ಆಗುತ್ತದೆ? ಮನೆಯವರಿಗೆ ಶುಭಾಶುಭ ಫಲ ಹೇಗೆ ಒದಗುತ್ತದೆ? ಇವೆಲ್ಲ ಬಹಳ ಮುಖ್ಯ ಪ್ರಶ್ನೆಗಳೇ. ಜೊತೆಗೆ, ಮನೆಯವರ ಅಥವಾ ಮನೆಯ ಪ್ರಭಾವ ಹೆಣ್ಣಿನ ಮೇಲೆ ಹೇಗೆ ಉಂಟಾಯಿತು ಎಂಬ ತರ್ಕಕ್ಕೆ ಉತ್ತರ ಸಿಗುವುದಿಲ್ಲ.
ಅತ್ತೆಯರ ದೊಂದು ವಿಚಿತ್ರ ಚಾಳಿ. “ನೀನು ನಮ್ಮ ಮನೆಹೊಕ್ಕ ಮೇಲೆ ಎಲ್ಲವೂ ಹಾಳಾಯ್ತು’ ಎಂದು ಸೊಸೆಯಂ ದಿರನ್ನು ಹೀಯಾಳಿಸುತ್ತಾರೆ. ಈಗಲೂ ಅಂಥವರು ನಮ್ಮ ನಡುವೆಯೇ ಇದ್ದಾರೆ. ಆದರೆ, ಅವರು ಅವರ ಕಾಲ್ಗುಣದ ಬಗ್ಗೆ ಏನನ್ನುತ್ತಾರೆ? ಬದುಕಿನಲ್ಲಿ ಗೆಲುವು ಮತ್ತು ಸೋಲು ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಅನಾರೋಗ್ಯವಂತೂ ಯಾರನ್ನೂ ಬಿಟ್ಟಿಲ್ಲ. ಏನೇನೂ ಸಂಬಂಧವಿಲ್ಲದೆ, ಅರಿಯದ ಒಬ್ಟಾಕೆ ಯುವತಿಯನ್ನು ನೇರವಾಗಿ ಅದಕ್ಕೆಲ್ಲ ಹೊಣೆಗಾರಳಾಗಿ ಮಾಡಿ ವಿಕೃತಾನಂದ ಪಡೆಯುವ ಪರಿಪಾಠ ಇನ್ನೂ ಚಾಲ್ತಿಯಲ್ಲಿದೆ. ಅದೂ ಅವಿದ್ಯಾವಂತರು, ವಿದ್ಯಾವಂತರು ಎನ್ನುವ ವ್ಯತ್ಯಾಸ ಇಲ್ಲದೆ ಈ ನಂಬಿಕೆ ಬೇರುಬಿಟ್ಟಿದೆ ಎನ್ನಲು ವಿಷಾದವಾಗುತ್ತದೆ. ಕೇವಲ ಹಳ್ಳಿಗರಲ್ಲಿ ಇರುವ ಮೂಢನಂಬಿಕೆ ಎನ್ನಲಾಗದು. ಪಟ್ಟಣಗಳಲ್ಲಿ ಇದೇನು ಕಡಿಮೆಯೆ?
ಅಪವಾದಕ್ಕೆ- ನಿಂದನೆಗೆ ಬಲಿಯಾದ ಹೆಣ್ಣುಗಳಿಗೆ ತನ್ನಿಂದೇನೂ ತಪ್ಪಾಗಿಲ್ಲ ಎಂಬುದು ಗೊತ್ತಿರುತ್ತದೆ. ಆದರೆ, ಸುತ್ತಲಿನ ಸಮಾಜದ ಟೀಕೆ-ಟಿಪ್ಪಣಿ-ದೋಷಾರೋಪ ಎಲ್ಲದಕ್ಕೂ ಆಕೆ ತಲೆಕೊಡಬೇಕು. ಪತಿಯ ತಮ್ಮನಿಗೆ ಅಥವಾ ತಂಗಿಗೆ ನಿರೀಕ್ಷಿಸಿದಷ್ಟು ಉತ್ತಮ ಫಲಿತಾಂಶ ಬಾರದೇ ಇದ್ದರೆ, ಆಯಾ ವರ್ಷ ಒಳ್ಳೆಯ ಬೆಳೆ ಬಾರದೇ ಇದ್ದರೆ, ಗಂಡನ ಅಣ್ಣನಿಗೆ/ಅಪ್ಪನಿಗೆ ಕಾಲು ಉಳುಕಿದರೆ, ಗಂಡನ ತಾಯಿ ಬಾತ್‌ರೂಮಿನಲ್ಲಿ ಸಾಬೂನು ನೀರಿನ ಮೇಲೆ ಕಾಲಿಟ್ಟು ಜಾರಿದರೆ- ಎಲ್ಲದರ ಹೊಣೆಯೂ ಕಾಲ್ಗುಣ ಸರಿಯಿಲ್ಲದ ಸೊಸೆಯ ಮೇಲೆ ! ಅನಿಷ್ಟಕ್ಕೆಲ್ಲ ಶನೀಶ್ವರನೇ ಹೊಣೆ.
ಈ “ಕಾಲ್ಗುಣ’ ಎಂಬ ಸಮಸ್ಯೆಗೆ ಪರಿಹಾರವಿಲ್ಲ. ಆಧುನಿಕತೆಯ ಈ ಕಾಲದಲ್ಲಿಯೂ ಈ ಮೂಢನಂಬಿಕೆಯನ್ನು ಇಟ್ಟುಕೊಳ್ಳುವುದು ಸರಿಯಲ್ಲ. ಕಾಲು “ಗುಣ’ವೇ ಹೊರತು ಅದು “ದೋಷ’ವಲ್ಲ. ದೋಷ ಉಂಟುಮಾಡುವ ಉದ್ದೇಶ ಬಂದವಳಿಗೂ ಇರುವುದಿಲ್ಲ.
ಕೃಷ್ಣವೇಣಿ ಕಿದೂರು