ಬೆಂಗಳೂರು: ಕಳೆದ ಹಲವು ವರ್ಷಗಳಿಂದ ಆನ್ ಲೈನ್ ಗೇಮಿಂಗ್ ನಿರಂತರವಾಗಿ ಬೆಳೆಯುತ್ತಲೇ ಇದೆ. ಈ ಟ್ರೆಂಡ್ ಭಾರತದಲ್ಲಿ ಪ್ರಮುಖವಾಗಿದೆ. ಕಳೆದ ಕೆಲವು ವರ್ಷಗಳಿಂದ ಪಿಸಿ ಗೇಮಿಂಗ್ ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ವಿಭಾಗವಾಗಿದೆ. ಎಚ್ ಪಿ ಇಂಡಿಯಾ ಗೇಮಿಂಗ್ ಲ್ಯಾಂಡ್ ಸ್ಕೇಪ್ ರಿಪೋರ್ಟ್ 2021 ಈ ಅಂಶಗಳತ್ತ ಹೆಚ್ಚು ಬೆಳಕು ಚೆಲ್ಲಿದೆ. ಈ ಪಿಸಿ ಗೇಮಿಂಗ್ ಬಗ್ಗೆ ಎಚ್ ಪಿ ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ ಶೇ.88 ರಷ್ಟು ಮಂದಿ ಸ್ಮಾರ್ಟ್ ಫೋನ್ ಅನುಭವಕ್ಕಿಂತ ಪಿಸಿಗಳಲ್ಲಿಯೇ ಹೆಚ್ಚು ಗೇಮಿಂಗ್ ಅನುಭವವನ್ನು ಪಡೆಯಬಹುದು ಎಂದು ಹೇಳಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಶೇ.37 ರಷ್ಟು ಮಂದಿ ಮೊಬೈಲ್ ಗೇಮರ್ ಗಳು ಉತ್ತಮ ಗೇಮಿಂಗ್ ಅನುಭವಕ್ಕಾಗಿ ತಾವು ಪಿಸಿ ಗೇಮಿಂಗ್ ಅನ್ನು ಆಯ್ಕೆ ಮಾಡಿಕೊಳ್ಳಲು ಬಯಸಿರುವುದಾಗಿ ತಿಳಿಸಿದ್ದಾರೆ.
ಕೊಚ್ಚಿ, ಬೆಂಗಳೂರು, ಕೊಯಮತ್ತೂರು, ಹೈದರಾಬಾದ್ ಮತ್ತು ಚೆನ್ನೈನಂತಹ ನಗರಗಳಲ್ಲಿ ಈ ಟ್ರೆಂಡ್ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗತೊಡಗಿದೆ. ವರದಿ ಪ್ರಕಾರ ಗೇಮಿಂಗ್ ಒಂದು ವೃತ್ತಿಯ ಆಯ್ಕೆಯಾಗಿ ಆದ್ಯತೆ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ ಮತ್ತು ಪ್ರಮುಖವಾಗಿ ಮಹಿಳೆಯರು ಈ ಪಿಸಿ ಗೇಮಿಂಗ್ ನತ್ತ ಒಲವು ತೋರುತ್ತಿರುವುದು ಗಮನಿಸಬೇಕಾದ ಪ್ರಮುಖ ಅಂಶವಾಗಿದೆ.
ದಕ್ಷಿಣ ಭಾರತದಲ್ಲಿ ಗೇಮಿಂಗ್ ಟ್ರೆಂಡ್ಸ್ ಹೇಗಿದೆ ಎಂಬುದರ ಅವಲೋಕನ ಇಲ್ಲಿದೆ:-
ವೃತ್ತಿ ಆಯ್ಕೆಯಾಗಿ ಗೇಮಿಂಗ್
ದಕ್ಷಿಣ ಭಾರತದಲ್ಲಿ ಗೇಮಿಂಗ್ ಒಂದು ವೃತ್ತಿ ಆಯ್ಕೆಯಾಗಿ ಹೊರಹೊಮ್ಮಿದೆ. ಸಮೀಕ್ಷೆಯಲ್ಲಿ ಪ್ರತಿಕ್ರಿಯೆ ನೀಡಿದವರಲ್ಲಿ ಶೇ.83 ರಷ್ಟು ಮಂದಿ ತಮಗೆ ಗೇಮಿಂಗ್ ಎನ್ನುವುದು ಒಂದು ಕಾರ್ಯಸಾಧ್ಯವಾದ ವೃತ್ತಿ ಆಯ್ಕೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಪುರುಷರಿಗಿಂತ ಮಹಿಳೆಯರೇ ಮುಂದಿದ್ದಾರೆ. ಅಂದರೆ, ಗೇಮಿಂಗ್ ಅನ್ನು ವೃತ್ತಿ ಆಯ್ಕೆಯನ್ನಾಗಿ ಮಾಡಿಕೊಳ್ಳಲು ತಾವು ಬಯಸಿರುವುದಾಗಿ ಶೇ.84 ರಷ್ಟು ಮಹಿಳೆಯರು ಹೇಳಿಕೊಂಡಿದ್ದಾರೆ. ಇದೇ ಅಭಿಪ್ರಾಯ ವ್ಯಕ್ತಪಡಿಸಿರುವ ಪುರುಷರ ಪ್ರಮಾಣ ಶೇ.82 ರಷ್ಟಿದೆ. ಕೊಯಮತ್ತೂರಿನಲ್ಲಿ ಶೇ.94, ಹೈದರಾಬಾದ್ ನಲ್ಲಿ ಶೇ.90 ಮತ್ತು ಕೊಚ್ಚಿಯ ಶೇ.89 ರಷ್ಟು ಮಂದಿ ಗೇಮಿಂಗ್ ಅನ್ನು ವೃತ್ತಿ ಆಯ್ಕೆಯಾಗಿ ಮಾಡಿಕೊಳ್ಳಲು ಬಯಸಿರುವುದಾಗಿ ತಿಳಿಸಿದ್ದಾರೆ.
ಗೇಮಿಂಗ್ ಒಂದು ಒತ್ತಡ ನಿವಾರಕ
ಎಚ್ ಪಿ ಅಧ್ಯಯನದ ಪ್ರಕಾರ, ದಕ್ಷಿಣ ಭಾರತದಲ್ಲಿ ಪ್ರತಿಕ್ರಿಯೆ ನೀಡಿದ ಶೇ.94 ರಷ್ಟು ಮಂದಿ ಗೇಮಿಂಗ್ ನಮಗೆ ಒತ್ತಡವನ್ನು ನಿವಾರಣೆ ಮಾಡುತ್ತದೆ ಮತ್ತು ಧನಾತ್ಮಕವಾದ ಭಾವನೆಗಳನ್ನು ಹೊಂದಲು ಸಹಾಯ ಮಾಡುತ್ತದೆ ಎಂದು ಹೇಳಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗೇಮಿಂಗ್ ನ ಸುತ್ತಲಿನ ಗ್ರಹಿಕೆಗಳಲ್ಲಿ ಮಹಿಳೆಯರು ಈ ಟೆಕ್ಟೋನಿಕ್ ಬದಲಾವಣೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಒತ್ತಡವನ್ನು ನಿವಾರಣೆ ಮಾಡಲು, ಅರಿವಿನ ಕೌಶಲ್ಯಗಳನ್ನು ಮತ್ತು ಮಾನಸಿಕ ಯೋಗಕ್ಷೇಮವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಈ ಗೇಮಿಂಗ್ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದ್ದಾರೆ.
ಶೇ.94 ರಷ್ಟು ಮಹಿಳೆಯರ ಪ್ರಕಾರ ಗೇಮಿಂಗ್ ವಿಶ್ರಾಂತಿ ಮತ್ತು ಮನರಂಜನೆಯ ಒಂದು ಅತ್ಯುತ್ತಮ ಮೂಲವಾಗಿದೆ ಎಂದು ಹೇಳಿಕೊಂಡಿದ್ದರೆ, ಶೇ.92 ರಷ್ಟು ಪುರುಷರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ, ಗೇಮಿಂಗ್ ಕೆಲಸ/ವಿದ್ಯಾಭ್ಯಾಸದ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಶೇ.93 ರಷ್ಟು ಮಹಿಳೆಯರು ಹೇಳಿಕೊಂಡಿದ್ದರೆ, ಶೇ.92 ರಷ್ಟು ಪುರುಷರು ಸಹ ಇದಕ್ಕೆ ಸಹಮತಿ ವ್ಯಕ್ತಪಡಿಸಿದ್ದಾರೆ. ಗೇಮಿಂಗ್ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಧನಾತ್ಮಕವಾದ ಭಾವನೆಗಳನ್ನು ಹೊಂದಲು ಸಹಾಯ ಮಾಡುತ್ತದೆ ಎಂದು ಶೇ.96 ರಷ್ಟು ಮಹಿಳೆಯರು ಮತ್ತು ಶೇ.94 ರಷ್ಟು ಪುರುಷರು ಹೇಳಿಕೊಂಡಿದ್ದಾರೆ.
ಸಮೀಕ್ಷೆಯ ಪ್ರಕಾರ, ಹೈದರಾಬಾದ್ ನಲ್ಲಿ ಶೇ.99, ಚೆನ್ನೈನಲ್ಲಿ ಶೇ.97 ಮತ್ತು ಕೊಯಮತ್ತೂರಿನಲ್ಲಿ ಶೇ.94 ರಷ್ಟು ಮಂದಿ ಗೇಮಿಂಗ್ ಒಂದು ಒತ್ತಡ ನಿವಾರಕ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಎಚ್ ಪಿ ಇಂಡಿಯಾದ ಪರ್ಸನಲ್ ಸಿಸ್ಟಮ್ಸ್ (ಕನ್ಸೂಮರ್) ಮುಖ್ಯಸ್ಥ ನಿತೀಶ್ ಸಿಂಗಾಲ್ ಅವರು ಈ ಸಮೀಕ್ಷೆ ಬಗ್ಗೆ ಮಾತನಾಡಿ, “ಕಳೆದ 18 ತಿಂಗಳುಗಳಲ್ಲಿ ನಮಗೆ ಸಾಂಕ್ರಾಮಿಕವು ಸಾಕಷ್ಟು ಒತ್ತಡವನ್ನು ತಂದೊಡ್ಡಿದೆ. ಆದರೆ, ಜನರಿಗೆ ಗೇಮಿಂಗ್, ಒತ್ತಡದಿಂದ ಹೊರಬರಲು ಸಾಕಷ್ಟು ನೆರವಾಗಿದೆ ಮತ್ತು ತಮ್ಮ ಸ್ನೇಹಿತರು ಹಾಗೂ ಕುಟುಂಬ ಸದಸ್ಯರೊಂದಿಗೆ ಬೆರೆಯಲು ಸಹಾಯ ಮಾಡಿದೆ. ಎಲ್ಲಾ ವರ್ಗದ ಬಳಕೆದಾರರು ಗೇಮಿಂಗ್ ಅನ್ನು ಕಾರ್ಯಸಾಧ್ಯವಾದ ವೃತ್ತಿಪರ ತಾಣವೆಂದು ಗಂಭೀರವಾಗಿ ಪರಿಗಣಿಸಿದ್ದಾರೆ. ಪಿಸಿ ಗೇಮಿಂಗ್ ಉದ್ಯಮಕ್ಕೆ ಈ ಸಕಾರಾತ್ಮಕವಾದ ಮನೋಭಾವವನ್ನು ನೋಡಲು ನಾವು ಉತ್ಸುಕರಾಗಿದ್ದೇವೆ ಮತ್ತು ನಾವು ಭಾರತದ ಪಿಸಿ ಮಾರುಕಟ್ಟೆಯಲ್ಲಿ ಆಸಕ್ತಿದಾಯಕ ಬೆಳವಣಿಗೆಯ ಹಂತದಲ್ಲಿದ್ದೇವೆ ಎಂಬುದನ್ನು ನಂಬುತ್ತೇವೆ’ ಎಂದರು.
ಭಾರತದ ಇತರೆ ಭಾಗಗಳಿಗೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಗೇಮರ್ ಗಳು ಪಿಸಿಗಳನ್ನು ಖರೀದಿಸಲು ಹೆಚ್ಚು ಹಣವನ್ನು ವಿನಿಯೋಗಿಸುತ್ತಿದ್ದಾರೆ.
ಸಮೀಕ್ಷೆ ಪ್ರಕಾರ, ದಕ್ಷಿಣ ಭಾರತದಲ್ಲಿ 1 ಲಕ್ಷ ರೂಪಾಯಿಗೂ ಅಧಿಕ ಬೆಲೆಯ ಗೇಮಿಂಗ್ ಪಿಸಿಗಳಿಗೆ ಹೂಡಿಕೆ ಮಾಡಲು ಶೇ.52 ರಷ್ಟು ಗೇಮರ್ ಗಳು ಬಯಸಿದ್ದಾರೆ. ಈ ಪೈಕಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿದ್ದಾರೆ. ಅಂದರೆ, ಶೇ.61 ರಷ್ಟು ಮಹಿಳೆಯರು ಈ ಪಿಸಿಗಳನ್ನು ಖರೀದಿಸಲು ಬಯಸಿದ್ದರೆ, ಶೇ.49 ರಷ್ಟು ಪುರುಷರು ಖರೀದಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಕೊಚ್ಚಿ ಮತ್ತು ಬೆಂಗಳೂರಿನ ಗೇಮರ್ ಗಳು 1 ಲಕ್ಷ ರೂಪಾಯಿಗಿಂತ ಅಧಿಕ ಮೌಲ್ಯದ ಪಿಸಿಗಳನ್ನು ಖರೀದಿಸಲು ಬಯಸಿದ್ದರೆ, ಚೆನ್ನೈ, ಹೈದರಾಬಾದ್ ಮತ್ತು ಕೊಯಮತ್ತೂರಿನ ಗೇಮರ್ ಗಳು 50,000 ರೂಪಾಯಿಯಿಂದ 1,00,000 ರೂಪಾಯಿವರೆಗಿನ ಗೇಮಿಂಗ್ ಪಿಸಿಗಳಿಗೆ ಹಣ ವಿನಿಯೋಗ ಮಾಡಲು ಸಿದ್ಧರಿದ್ದಾರೆ.