Advertisement

ಕತ್ತಲಾದರೆ ಮಹಿಳೆಯರಿಗೆ ಇಲ್ಲಿ ನಡೆದಾಡುವುದಕ್ಕೆ ಭಯ

11:18 PM Nov 05, 2019 | Team Udayavani |

ಮಲ್ಪೆ: ಮಲ್ಪೆ ಸಿಟಿಜನ್‌ ಸರ್ಕಲ್‌ನಿಂದ ಕೊಡವೂರು ಸಂಪರ್ಕ ರಸ್ತೆಯ ಮಧ್ಯೆ ಸುಮಾರು ಅರ್ಧ ಕಿ. ಮೀ. ದೂರ ರಸ್ತೆಯುದ್ದಕ್ಕೂ ವಿದ್ಯುತ್‌ ಕಂಬಗಳ ದಾರಿದೀಪ ಕೆಟ್ಟು ಹೋಗಿದ್ದು ಇದರಿಂದ ಪಾದಾಚಾರಿಗಳಿಗೆ ಅಪಾಯ ಎದುರಾಗಾಗಿದೆ.

Advertisement

ಎರಡು ವರ್ಷದಿಂದ ಇಲ್ಲಿ ವಾಹನಗಳು ಕತ್ತಲಲ್ಲಿ ಸಂಚಾರ ಮಾಡುತ್ತಿದೆಯಾದರೂ ವಾಹನ ಚಾಲಕರು, ಜನರು ತಮ್ಮ ಸಮಸ್ಯೆ ಹೇಳದೇ ಸುಮ್ಮನಿರುವುದು ಈ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳದಿರುವುದು ಒಂದು ಕಾರಣವಾಗುತ್ತಿದೆ.

ಜಿ.ಪಂ ಇಲಾಖೆಗೆ ಸೇರಿದ ಈ ರಸ್ತೆಯ ಬದಿಯಲ್ಲಿ ಎರಡು ವರ್ಷದ ಹಿಂದೆ ಯು.ಜಿ.ಕೇಬಲ್‌ ಅಳವಡಿಸಿ ಎತ್ತರದ ಹೊಸ ಕಂಬವನ್ನು ಹಾಕಲಾಗಿತ್ತು. ಆ ಬಳಿಕ ಈ ಹಿಂದೆ ಇದ್ದ ಕಂಬದಲ್ಲಿಯ ದೀಪಗಳು ಉರಿಯುತ್ತಿಲ್ಲ. ಒಂದು ಕಂಬದಲ್ಲಿ ಇದ್ದ ಟ್ಯೂಬ್‌ಲೈಟ್‌ ತಂತಿ ಸಮೇತವಾಗಿ ನೇತಾಡುತ್ತಿದ್ದರೂ ಇಲಾಖೆಯ ಕಣ್ಣಿಗೆ ಕಾಣುತ್ತಿಲ್ಲ.

ನಗರಸಭೆಯಾಗಲಿ ಅಥವಾ ಮೆಸ್ಕಾಂ ಇಲಾಖೆಯಾಗಲಿ ಈ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ. ರಾತ್ರಿ ವೇಳೆಯಲ್ಲಿ ಪಾದಾಚಾರಿಗಳು ನಡೆದುಕೊಂಡು ಹೋಗಲು ಕಷ್ಟಕರ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ತಿರುವುಗಳಿಂದ ಕೂಡಿದ ರಸ್ತೆಯಾದ್ದರಿಂದ ರಾತ್ರಿ ವೇಳೆ ಅಪಘಾತಕ್ಕೂ ಇನ್ನೊಂದು ಕಾರಣವಾಗಿದೆ.

ಮಹಿಳೆಯರಿಗೆ ನಡೆದಾಡಲು ಭಯ
ಕತ್ತಲಾದ ಮೇಲೆ ಕಗ್ಗತ್ತಲ್ಲಂತೆ ಕಾಣುವ ಈ ಪ್ರದೇಶದಲ್ಲಿ ರಾತ್ರಿ ವೇಳೆ ನಡೆದುಕೊಂಡು ಹೋಗುವವರಿಗೆ ವಾಹನಗಳು ಸಮೀಪದ ಬಂದರೂ ಗೊತ್ತಾಗುತ್ತಿಲ್ಲ. ಸಂಜೆಯ ಬಳಿಕ ಮಹಿಳೆಯರು ನಡೆದುಕೊಂಡು ಹೋಗುವುದು ಸುರಕ್ಷಿತವಲ್ಲ. ಹಾಗಾಗಿ ಕೆಲಸಕ್ಕೆ ಹೋಗುವ ಮಹಿಳೆಯರನ್ನು ಕರೆದುಕೊಂಡು ಬರಲು ಮನೆಯವರು ಬರಬೇಕಾದ ಪರಿಸ್ಥಿತಿ ಇದೆ.

Advertisement

ಸಂಜೆ 5ಗಂಟೆಯೊಳಗೆ ವ್ಯವಸ್ಥೆ
ಸಮಸ್ಯೆ ಗಮನಕ್ಕೆ ಬಂದಿರಲಿಲ್ಲ. ಬುಧವಾರ ಸಂಜೆ 5ಗಂಟೆಯೊಳಗೆ ದಾರಿದೀಪವನ್ನು ಸರಿಪಡಿಸುವ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿ ಸಮಸ್ಯೆಯನ್ನು ಪರಿಹರಿಸಲಾಗುವುದು.
-ಆನಂದ ಸಿ. ಕಲ್ಲೋಳಿಕರ್‌, ಪೌರಾಯುಕ್ತರು ಉಡುಪಿ ನಗರಸಭೆ

ಜವಾಬ್ದಾರಿ ಕಾಣುತ್ತಿಲ್ಲ
ಈ ಪ್ರದೇಶದಲ್ಲಿ ದಾರಿದೀಪ ಉರಿಯದ ಕಾರಣ ಇಲ್ಲಿ ಕದ್ದು ಮುಚ್ಚಿ ಕಸ ತಂದು ಎಸೆಯುವವರಿಗೆ ಸುಲಭವಾಗಿದೆ. ಕತ್ತಲಾದರೆ ಹೆಣ್ಣು ಮಕ್ಕಳು ಈ ದಾರಿಯಲ್ಲಿ ನಡೆಯಲು ಭಯ ಪಡುತ್ತಾರೆ. ನಗರಸಭೆಗಾಗಲಿ, ಮೆಸ್ಕಾಂ ಇಲಾಖೆಗಾಗಲಿ ಕಿಂಚಿತ್ತು ಜವಾಬ್ದಾರಿ ಇರುವಂತೆ ಕಾಣುತ್ತಿಲ್ಲ.
-ಹರೀಶ್‌ ಕೆ. ಗೋಳಿದಡಿ ಕೊಡವೂರು,ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next