Advertisement

ಹೆಣ್ಣಿಗೆ ಸ್ವಾತಂತ್ರ್ಯವೆಂಬುದು ಸಂಸಾರ ನಿರ್ವಹಣೆಗೆ ಸಂಬಳ ತರುವುದಕ್ಕೊ

03:50 AM Jul 07, 2017 | |

ಹೆಣ್ಣಿಗೆ ಆರ್ಥಿಕ ಸ್ವಾತಂತ್ರ್ಯವೆಂಬುದು ಸಂಸಾರ ನಿಭಾವಣೆಗೆ ಸಂಬಳ ತರುವುದಕ್ಕೊ ಅಥವಾ ಆಕೆಯ ಸ್ಥಿತಿಯಲ್ಲಿ ಬದಲಾವಣೆ ತರುವುದಕ್ಕೊ? 

Advertisement

ಮೋಹಿನಿ ಪ್ರತಿದಿನ ಕೆಲಸಕ್ಕೆ ಹೋಗುತ್ತಾಳೆ. ಬೆಳಗ್ಗೆ ಎದ್ದು ಗಡಿಯಾರದೊಂದಿಗೆ ಗುದ್ದಾಟ. ಗಡಿಯಾರದ ಮುಳ್ಳು ಮೊದಲೊ, ತಾನು ಮೊದಲೋ ಅನ್ನುವಷ್ಟು ಆತುರ ತೋರಿದರೂ ಮನೆಕೆಲಸ ಮುಗಿಯದು. ಇನ್ನೇನು ಎಲ್ಲ ಮುಗಿಯಿತು ಅಂತ ಕೈಚೀಲ ಎಳೆದು ಹೊರಡಬೇಕು, ಕೈಚೀಲದಲ್ಲಿ ದಿನದ ಖರ್ಚಿಗೆ ಸಾಲದ ಹಣ. ಗಂಡ ಕೆಲಸಕ್ಕೆ ಹೋಗಿಯಾಯಿತು. ಎಟಿಎಂ ಎಲ್ಲಿದೆ ಅಂತ ತಿಳಿಯದು, ಹುಡುಕುವಷ್ಟು ಸಮಯವಿಲ್ಲ. ಚಪ್ಪಲಿ ಮೆಟ್ಟಿ ಹೊರಟವಳಿಗೆ ದುಃಖ ಉಮ್ಮಳಿಸಿ ಬಂತು. ಬಸ್ಸು ಹತ್ತಿ, ಯೋಚಿಸ ತೊಡಗಿದಳು- ನಾನ್ಯಾಕೆ ಇಷ್ಟು ಬೇಸರ ಪಟ್ಟುಕೊಳ್ಳಬೇಕು? ನಾನ್ಯಾಕೆ ಕಷ್ಟ ಪಡಬೇಕು?

ಹೋಗಲಿ ಬಿಡಿ, ಇವತ್ತಿಗೆ ಬೇಕಾಗುವ ಹಣ ಯಾರಿಂದಲಾದರೂ ಪಡೆಯಬಹುದು, ಸಾಯಂಕಾಲ ಗಂಡನೊಡನೆ ಮಾತಾಡಿ ಎಲ್ಲಾ ಸರಿಪಡಿಸಬಹುದು ಎಂದು ತನ್ನೊಳಗೆ ಅಂದುಕೊಂಡಳು. ಕಿಟಿಕಿಯ ಹೊರಗೆ ದಿಟ್ಟಿಸುತ್ತಿದ್ದ ಮುಖ ಕುಂದಿಹೋಗಿತ್ತು. ಕೆನ್ನೆಯ ಮೇಲಿನಿಂದ ಎರಡು ಹನಿಗಳು ಕೆಳಗುರುಳಿದವು. 

“ನಿನಗ್ಯಾಕೆ ದುಡ್ಡು?’ ಅಂತ ಅಪ್ಪ ಕೇಳಿದಾಗ ಅಮ್ಮನ ಮುಖದಲ್ಲಿ ಕಂಡದ್ದೂ ಇದೇ ಕಣ್ಣೀರ ಹನಿ. ಸಂಬಳದ ಕೆಲಸಕ್ಕೆ ಹೋಗದಿದ್ದ ತನ್ನಮ್ಮನ ಪರಿಸ್ಥಿತಿ ತನಗೆ ಬೇಡ ಅಂತ ಯಾವಾಗಲೋ ನಿರ್ಧರಿಸಿದ್ದಳು ಮೋಹಿನಿ. ಅಪ್ಪ , ಅಮ್ಮನನ್ನು ತುಂಬಾ ಪ್ರೀತಿಸುತ್ತ  ಇದ್ದರು- ನನ್ನ ಗಂಡ ನನ್ನನ್ನು ಪ್ರೀತಿಸುವಂತೆ! ಗಂಡನಂತೆ. ಆದರೆ, ದುಡ್ಡಿನ ವಿಷಯದಲ್ಲಿ ಮಾತ್ರ ಬಹಳ ಜಾಗ್ರತೆ.

ನಾನಿಲ್ಲಿ ಹೇಳಹೊರಟಿರುವುದು, ಪ್ರೀತಿಯ ಬಗ್ಗೆಯಲ್ಲ, ದೌರ್ಜನ್ಯದ ಬಗ್ಗೆಯಲ್ಲ, ಹಣದ ಬಗ್ಗೆ ಇರುವ ಜಾಗ್ರತೆ ವಿಷಯ ಅಷ್ಟೇ. ಹೆಣ್ಣಿನ ಬದುಕು ಸುತ್ತುವುದು ಕುಟುಂಬದ ಸುತ್ತ. ಡಾ. ದೇವಿ ಶೆಟ್ಟಿಯವರು ತನ್ನ ಆಸ್ಪತ್ರೆಯಲ್ಲಿ ಹೆಣ್ಣುಮಕ್ಕಳಿಗೇ ಹೆಚ್ಚಾಗಿ ಕೆಲಸ ಕೊಡುತ್ತಾರಂತೆ, ಅದಕ್ಕೆ ಕಾರಣವನ್ನು ಅವರೇ ಕೊಡುತ್ತಾರೆ: “ಹೆಣ್ಣುಮಕ್ಕಳಿಗೆ ಕೊಟ್ಟ ಸಂಬಳ ಪೂರ್ತಿಯಾಗಿ ಸಂಸಾರಕ್ಕೆ ಉಪಯೋಗವಾಗುತ್ತೆ, ಆದರೆ ಗಂಡಸರಿಗೆ ನೀಡಿದ ಸಂಬಳದ ಅರ್ಧದಷ್ಟು ಮಾತ್ರ ಸಂಸಾರ ನಿಭಾವಣೆಗೆ ವಿನಿಯೋಗವಾಗುತ್ತೆ’ನಮಗೆಲ್ಲ ತಿಳಿದ ಸತ್ಯ ಇದು, ಹೆಣ್ಣಿಗೆ ಸಂಸಾರ ಜವಾಬ್ದಾರಿ ಸದಾ ಹೆಚ್ಚು. ಆದರೆ, ಹಣದ ಬಗ್ಗೆ ಜಾಗ್ರತೆ ಮಾತ್ರ ಗಂಡಸಿಗ್ಯಾಕೆ! ಹೆಚ್ಚಿನ ಮನೆಗಳಲ್ಲಿ , ಹೆಣ್ಣಿಗೆ ಸಂಸಾರದ ಪೂರ್ಣ ನಿಭಾವಣೆಯ ಜವಾಬ್ದಾರಿ ಇಲ್ಲವೆಂದೇ ಹೇಳ್ಳೋಣ. 

Advertisement

ಹೆಚ್ಚೆಂದರೆ, ಮನೆವಾರ್ತೆಗೆ ಹಣ ಹೊಂದಿಸುವುದು ಅವಳ ಜವಾಬ್ದಾರಿ. ತಿಂಗಳ ಸಂಬಳ ತರುವ ಹೆಣ್ಣಿಗೂ ಸಂಸಾರ ನಿಭಾಯಿಸುವ ಪೂರ್ಣ ಜವಾಬ್ದಾರಿ ಇಲ್ಲದಿರುವ ಸಂದ‌ರ್ಭಗಳೇ ಹೆಚ್ಚು. ಯಾಕೆಂದರೆ, ಅರ್ಧ ಜವಾಬ್ದಾರಿಯನ್ನು ಆಕೆಯ ಗಂಡ ವಹಿಸುತ್ತಾನೆ ಎನ್ನೋಣ.

ಮುಖ್ಯವಾದ ವಿಚಾರವೆಂದರೆ, ಹೆಚ್ಚಿನ ಸಂದರ್ಭಗಳಲ್ಲಿ ದುಡಿಯುವ ಹೆಣ್ಣಿಗೂ ತನ್ನ ದುಡಿಮೆಯ ಪ್ರತಿಫ‌ಲವನ್ನು ಸ್ವತಂತ್ರವಾಗಿ ಬಳಸುವ ಸ್ವಾತಂತ್ರ್ಯ ಇಲ್ಲದಿರುವುದು !ಇಬ್ಬರು ದುಡಿಯುತ್ತಾರಾದರೆ, ಮನೆಕೆಲಸದ ಜವಾಬ್ದಾರಿ ಹೆಣ್ಣಿಗೆ, ಹಣದ ನಿರ್ವಹಣೆಯ ಅಧಿಕಾರ ಗಂಡಸಿಗೆ ! ಇಲ್ಲಿ ಹೆಣ್ಣಿನ ಆವಶ್ಯಕತೆಗಳಿಗೂ ಹಣ ಸಿಗದಷ್ಟೂ ಬಿಗಿಯಾದ ಸ್ಥಿತಿ ಕೆಲವರದ್ದಾದರೆ, ಇನ್ನು ಕೆಲವೆಡೆ ಅವಳಿಗೆ ಬೇಕಾದಷ್ಟು ಹಣವನ್ನಷ್ಟೇ ಬಿಟ್ಟುಕೊಟ್ಟು ಉಳಿದುದರ ನಿರ್ವಹಣೆಯನ್ನು ಗಂಡಸರೇ ಮಾಡುವುದಿದೆ. ಇದಕ್ಕೆ ಕೊಡುವ ಸಹಜವಾದ ಕಾರಣ, ಹಣ ನಿರ್ವಹಣೆ ಹಾಗೂ ಜಾಗ್ರತೆ ಗಂಡಸರಲ್ಲಿಯೇ ಹೆಚ್ಚು. ತಂದೆ, ಗಂಡ, ಅಣ್ಣ, ಮಗ ಯಾರೂ ಆಗಿರಬಹುದು, ಆರ್ಥಿಕ ವಿಚಾರಗಳ ಹೊಣೆ ಹೊರಲು ಅವರೇ ಸೈ!

ನನಗೆ ಆಶ್ಚರ್ಯವಾಗುತ್ತಿದೆ- ಹೊಸ ಹುಟ್ಟಿಗೆ ಆಸರೆ ನೀಡಿ, ಪುಟ್ಟ ಮಗುವನ್ನು ಹೊತ್ತು, ಹೆತ್ತು ದೊಡ್ಡದಾಗಿಸುವ ಜವಾಬ್ದಾರಿ ಹೊರಬಹುದಾದ ಹೆಣ್ಣಿಗೆ ಹಣದ ಹೊಣೆ ನಿಭಾಯಿಸಲು ಸಾಧ್ಯವಿಲ್ಲವೆ?

ಹಾಗಾಗಿ, ನನ್ನ ಪ್ರಶ್ನೆ- ಹೆಣ್ಣಿಗೆ ಆರ್ಥಿಕ ಸ್ವಾತಂತ್ರ್ಯ ಬೇಕು ಅಂದದ್ದು – ಸಂಸಾರ ನಿಭಾವಣೆಗೆ ಹಣ ಹೊಂದಿಸಲೆಂದೆ ಅಥವಾ ಆಕೆಯ ಯೋಚನೆಯಲ್ಲಿ ಬದಲಾವಣೆ ತರಲೆಂದೆ?ಯೋಚನೆಗಳ ಬದಲಾವಣೆ, ಯೋಜನೆಗಳ ಅನುಷ್ಠಾನ ಇವುಗಳಿಗೆಲ್ಲ ಆರ್ಥಿಕ ಸ್ವಾತಂತ್ರ್ಯದ ಮನಃಸ್ಥಿತಿ ಬೇಕು. ಅಂದರೆ ಹಣದ ನಿರ್ವಹಣೆ ಹೆಣ್ಣಿನ ಕೈ ಯಲ್ಲಿ ಇರಬೇಕಲ್ಲವೆ? ಡಿಗ್ರಿ ತೆಗೆದುಕೊಂಡು ದುಡಿದು, ಮನೆಗೆ ಸಂಬಳ ತರುವಲ್ಲಿಗೆ ಅದು ನಿಂತರೆ ಹೇಗೆ?

ಹೆಣ್ಣುಮಕ್ಕಳಲ್ಲಿ ಚಾರ್ಟರ್ಡ್‌ ಅಕೌಂಟೆಂಟ್‌ಗಳಿದ್ದಾರೆ. ದೊಡ್ಡ ಆರ್ಥಿಕ ವ್ಯವಹಾರಗಳನ್ನು ನೋಡಬಹುದಾದ ಹೆಣ್ಣಿಗೆ ಮನೆಯ ಹಣದ ಲೆಕ್ಕಾಚಾರ ನಡೆಸಲು ಸಾಧ್ಯವಿಲ್ಲವೆ? ಸಂಸಾರದ ನಿರ್ವಹಣೆಯಲ್ಲಿ, ಜವಾಬ್ದಾರಿಗಳನ್ನು ವಿಭಾಗಿಸುವುದು ಆವಶ್ಯಕ. ಆದರೆ ಹಣದ ಕುರಿತ ಜಾಗ್ರತೆ ಮತ್ತು ನಿರ್ವಹಣೆ ಗಂಡಿಗಷ್ಟೇ ಸೀಮಿತವಲ್ಲ ಅನ್ನುವುದಷ್ಟೇ ನನ್ನ ಮಾತು.

– ರಶ್ಮಿ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next