Advertisement

ಕಲೆಯ ನೀರೆಯನು ಕಲೆಗೆ ಚೆಲ್ಲಿ…

06:00 AM Oct 10, 2018 | |

“To err is human’ ಎಂಬ ಒಂದು ಮಾತಿದೆ. “ತಪ್ಪು ಮಾಡುವುದು ಮಾನವ ಸಹಜ ಗುಣ’ ಎನ್ನುವುದು ಅದರ ಭಾವಾರ್ಥ. ಆದರೆ ಕೆಲ ಸಂದರ್ಭಗಳಲ್ಲಿ ಮನುಷ್ಯನಿಗೆ ತನ್ನ ತಪ್ಪುಗಳನ್ನು ಮೀರುವ, ನೂರಕ್ಕೆ ನೂರು ಪ್ರತಿಶತ ಪರ್ಫೆಕ್ಷನ್‌ ಅನ್ನು ಸಾಧಿಸುವ ಅದಮ್ಯ ಉತ್ಸಾಹ ಬರುತ್ತದೆ. ಕೋಲಿನ ಸಹಾಯ ಇಲ್ಲದೆಯೇ ಬಾನೆತ್ತರದಲ್ಲಿ ಕಟ್ಟಿದ ಹಗ್ಗದ ಮೇಲೆ ನಡೆಯುವ ಉತ್ಸಾಹವದು. ಮೂರನೇ ಗಾಲಿಯ ನೆರವಿಲ್ಲದೆಯೇ ಸೈಕಲ್‌ ತುಳಿಯಲೆತ್ನಿಸುವ ಪುಟ್ಟ ಮಗುವಿನ ಹುಂಬ, ದಿವ್ಯ ಉತ್ಸಾಹ ಅದು. ಅಂಥ ಒಂದು ಪ್ರಯತ್ನದಲ್ಲಿ ಕಲಾವಿದನೊಬ್ಬನಿಂದ ಏನನ್ನು ಸೃಷ್ಟಿಸಲು ಸಾಧ್ಯ ಎನ್ನುವುದಕ್ಕೆ ಅಪ್ರತಿಮ ನಿದರ್ಶನ, ಹಲ್ದಾನ್ಕರ್‌ ಅವರ “ದೀಪದ ಮಹಿಳೆ’ (ಗ್ಲೋ ಆಫ್ ಹೋಪ್‌) ಕಲಾಕೃತಿ. ಶ್ರೀಮಂತ ಕಲಾಪರಂಪರೆಯನ್ನು ಹೊಂದಿರುವ ಕರುನಾಡು ದಸರಾ ಹಬ್ಬಕ್ಕೆ ಅಣಿಯಾಗುತ್ತಿರುವ ಈ ಹೊತ್ತಿನಲ್ಲಿ “ದೀಪದ ಮಹಿಳೆ’ ಏಕೆ ಮಾಸ್ಟರ್‌ ಪೀಸ್‌ ಎಂಬುದನ್ನು ಹಿರಿಯ ಕಲಾವಿದ ಚಂದ್ರನಾಥ ಆಚಾರ್ಯ ಅವರಿಲ್ಲಿ ವಿಶ್ಲೇಷಿಸಿದ್ದಾರೆ…

Advertisement

ನಮ್ಮ ನಡುವೆ “ದೀಪದ ಮಹಿಳೆ’ ಎಂದೇ ಪ್ರಸಿದ್ಧವಾಗಿರುವ ಈ ಕಲಾಕೃತಿಯನ್ನು ಹಲ್ದಾನ್ಕರ್‌ ಅವರು ಹ್ಯಾಂಡ್‌ಮೇಡ್‌ ಪೇಪರ್‌ ಬಳಸಿ ಜಲವರ್ಣ (ವಾಟರ್‌ ಕಲರ್‌) ಬಳಸಿ ಚಿತ್ರಿಸಿದ್ದರು. ವಾಟರ್‌ ಕಲರ್‌ ಅನ್ನೇ ಬಳಸಲು ಮುಖ್ಯವಾದ ಕಾರಣವೊಂದಿತ್ತು. ತೈಲವರ್ಣದಲ್ಲಿ ತಪ್ಪುಗಳನ್ನು ಮುಚ್ಚಬಹುದಿತ್ತು, ಸರಿಪಡಿಸಬಹುದಿತ್ತು. ಅದು ಹಲ್ದಾನ್ಕರ್‌ ಅವರಿಗೆ ಬೇಕಿರಲಿಲ್ಲ. ಈ ಬಾರಿ ತಮ್ಮಿಂದ ಯಾವುದೇ ತಪ್ಪುಗಳಾಗಕೂಡದೆಂದು ಮನದಲ್ಲಿಯೇ ಅವರು ದೃಢ ನಿಶ್ಚಯ ಮಾಡಿಕೊಂಡಿದ್ದರು. ಅದೊಂದು ತಪಸ್ಸು. ಅಲ್ಲದೇ ಹೋಗಿದ್ದರೆ ಇಂಥಾ ಮಾಸ್ಟರ್‌ ಪೀಸ್‌ ರಚಿಸಲು ಖಂಡಿತ ಸಾಧ್ಯವಾಗುತ್ತಿರಲಿಲ್ಲ. ಇದಕ್ಕೆ ರೂಪದರ್ಶಿಯಾಗಿದ್ದ ಅವರ ಮಗಳು ಸುಮಾರು 3 ತಾಸುಗಳ ಕಾಲ ದೀಪ ಹಿಡಿದು ನಿಲ್ಲಬೇಕಾಗಿ ಬಂದಿತ್ತು ಅಂತ ಎಲ್ಲೋ ಓದಿದ ನೆನಪು. ಆದರೆ, ಇಂಥದ್ದೊಂದು ಕಲಾಕೃತಿ ಕಾಗದದ ಮೇಲೆ ಒಡಮೂಡುವುದಕ್ಕೆ ಮುನ್ನವೇ, ಬಣ್ಣ ಪಡೆಯುವ ಮೊದಲೇ ದಿವ್ಯ ದೃಷ್ಟಿಯಿಂದ ಸಾಕ್ಷಾತ್ಕರಿಸಿಕೊಂಡಿದ್ದರಲ್ಲ ಆ ಮಹಾನುಭಾವ, ಅದು ಎಲ್ಲಕ್ಕಿಂತ ದೊಡ್ಡದು. ಎಲ್ಲಾ ಕಲಾಸೃಷ್ಟಿಗೂ ಆ ಭಾಗ್ಯ ದೊರೆಯದು. ಸಮಯ, ಘಳಿಗೆ ಅಷ್ಟೇ ಏಕೆ ಇಡೀ ಜಗತ್ತೇ ಆ ಒಂದು ಕ್ಷಣದಲ್ಲಿ ಕೂಡಿ ಬಂದಿರಬೇಕು. 

ಮೊದಲು ನೋಡಿದಾಗ… 
ಮಹಾರಾಜರ ಮೈಸೂರು ದಸರಾ ಪರಂಪರೆಯಲ್ಲಿ ಕಲಾಚಿತ್ರ ಪ್ರದರ್ಶನಕ್ಕೆ ಅದರದ್ದೇ ಆದ ಮಹತ್ವವಿದೆ, ಗಾಂಭೀರ್ಯವಿದೆ. ಕಲೆಗೆ ರಾಜರು ತುಂಬಾ ಮನ್ನಣೆ ನೀಡುತ್ತಿದ್ದರು. ಅಂದಿನ ಚಿತ್ರಕಲಾ ಪ್ರದರ್ಶನಗಳಲ್ಲಿ ಭಾರತದ ಪ್ರಸಿದ್ಧ ಕಲಾವಿದರು ತಮ್ಮ ಚಿತ್ರಗಳನ್ನು ಕಳಿಸುತ್ತಿದ್ದರು. ಅದನ್ನು ನೋಡಲೆಂದೇ ದಕ್ಷಿಣ ಭಾರತದಾದ್ಯಂತ ಜನರು ಬರುತ್ತಿದ್ದರು. ಪ್ರದರ್ಶನದಲ್ಲಿ ಆಯ್ಕೆಯಾದ ಕಲಾಚಿತ್ರಗಳಿಗೆ ಪಾರಿತೋಷಕಗಳನ್ನು ನೀಡಿ ಆ ಚಿತ್ರಗಳಿಗೆ ತಮ್ಮ ಸಂಗ್ರಹದಲ್ಲಿ ಸ್ಥಾನ ಕಲ್ಪಿಸುತ್ತಿದ್ದರು. ಚಿತ್ರಕಲೆಯನ್ನೂ ಆಸ್ತಿಯೆಂಬಂತೆ ಜತನದಿಂದ ಕಾಪಿಟ್ಟುಕೊಂಡಿರುವುದು ರಾಜರ ಹಿರಿಮೆ. ಚಿತ್ರಕಲಾ ಪ್ರದರ್ಶನಗಳನ್ನು ನಡೆಸುವುದರಲ್ಲಿ ಆಗಿದ್ದ ಶ್ರದ್ಧೆ ಈಗ ಕಾಣುತ್ತಿಲ್ಲ ಎನ್ನುವುದು ಬೇಸರದ ಸಂಗತಿ. 60ರ ದಶಕದ ಅಂತ್ಯದಲ್ಲಿ ನಾನು “ಮಲ್ಲಿಗೆ’ ಮಾಸಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೆ. ಮೈಸೂರು ಮಹಾರಾಜರ ನೇತೃತ್ವದಲ್ಲಿ ನಡೆದ ಕಡೆಯ ದಸರಾ ಆ ಸಮಯದಲ್ಲೇ ಜರುಗಿತು. ಅದಕ್ಕೆ ಸಾಕ್ಷಿಯಾಗಿದ್ದು ನನ್ನ ಪುಣ್ಯ. ಮೊದಲ ಬಾರಿ ದೀಪದ ಮಹಿಳೆಯನ್ನು ನೋಡಿದಾಗ ಬೆರಗಾಗಿ ಹೋಗಿದ್ದೆ. ಅದರಲ್ಲಿನ ಚಿಕ್ಕ ಚಿಕ್ಕ ಡೀಟೇಲ್ಸ್‌ ಕೂಡಾ ಪರಿಪಕ್ವವಾಗಿ ಮೂಡಿಬಂದಿರುವುದನ್ನು ಕಂಡು ಮೂಕವಿಸ್ಮಿತನಾಗಿದ್ದೆ.

ಅದೇಕೆ ಮಾಸ್ಟರ್‌ಪೀಸ್‌?
ದೀಪದ ಮಹಿಳೆಯ ರಚನೆಯಲ್ಲಿ ಹಲ್ದಾನ್ಕರ್‌ ಅವರು ವಾಶ್‌ ಎಂಬ ತಂತ್ರವನ್ನು ಬಳಸಿದ್ದಾರೆ. ಅದು ತುಂಬಾ ಹಳೆಯದು. ಈಗಂತೂ ಯಾರೂ ಅದನ್ನು ಮಾಡುವುದೇ ಇಲ್ಲ. ಔಟ್‌ಡೇಟೆಡ್‌ ಅಂತ ಅಲ್ಲ, ಅದನ್ನು ಮಾಡಲು ತುಂಬಾ ತಾಳ್ಮೆ ಮತ್ತು ಪರಿಶ್ರಮ ಬೇಕು. ಒಂದೇ ಪೆಟ್ಟಿಗೆ ಮಾಡಿ ಮುಗಿಸುವುದಕ್ಕೆ ಆಗುವುದಿಲ್ಲ. ಹಲವು ಹಂತಗಳನ್ನು ಅದು ಒಳಗೊಂಡಿದೆ. ಈಗಾಗಲೇ ಹೆಸರು ಮಾಡಿರುವ ಕಲಾವಿದನ ಚಿತ್ರ, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಇದ್ದಂತೆ. ಅದನ್ನು ಹೇಗೆ ತಯಾರಿಸಿರಬಹುದೆಂದು ಕಲ್ಪಿಸಿಕೊಳ್ಳುತ್ತಾ, ಊಹಿಸುತ್ತಾ, ಉತ್ತರಗಳನ್ನು ಕಂಡುಕೊಳ್ಳುತ್ತಾ ವಿದ್ಯಾರ್ಥಿ ಬೆಳೆಯುತ್ತಾ ಹೋಗುತ್ತಾನೆ. ನನಗಾಗಿದ್ದೂ ಅದೇ. ಬೆಳಗಿನ ದೃಶ್ಯಗಳನ್ನು ಕಾಗದದ ಮೇಲೆ ಮೂಡಿಸುವುದಕ್ಕಿಂತ, ರಾತ್ರಿಯನ್ನು ಹಿಡಿದಿಡುವುದು ಕಲಾವಿದರಿಗೆ ದೊಡ್ಡ ಸವಾಲು. ಬೆಳಕಿನ ತೀವ್ರತೆ ಬಗ್ಗೆ ಗೊತ್ತಿರಬೇಕಾಗುತ್ತದೆ. ರಾತ್ರಿ, ಬೆಳಕಿನ ಮೂಲವನ್ನು ಕಂಡುಕೊಂಡು ಅದರ ಪ್ರಭೆಯನ್ನು ಗಮನದಲ್ಲಿರಿಕೊಂಡು ಯಾವ ಯಾವ ವಸ್ತುಗಳು ಹೇಗೆ ಹೇಗೆ ಕಾಣಿಸುತ್ತವೆ, ಹೇಗೆ ಬೆಳಕನ್ನು ಪ್ರತಿಫ‌ಲಿಸುತ್ತವೆ ಎಂಬಿತ್ಯಾದಿ ವಿವರಗಳೆಲ್ಲವೂ ಕರಾರುವಕ್ಕಾಗಿ ಕಲಾವಿದನಿಗೆ ತಿಳಿದಿರಬೇಕಾಗುತ್ತದೆ. ಆ ಕ್ಷೇತ್ರದಲ್ಲಿ ಹಲ್ದಾನ್ಕರ್‌ ವಿಶೇಷ ಪರಿಣತಿ ಸಂಪಾದಿಸಿದ್ದರು. ಕತ್ತಲು ಬೆಳಕಿನ ಮೇಲೆ ಅವರಿಗಿದ್ದ ಹಿಡಿತ ಅಸಾಧಾರಣವಾದುದು.

ಬೆಳಕಿನ ವರ್ತನೆ ಗೊತ್ತಿರಬೇಕು…
ಯಾವತ್ತಾದರೂ ಟಾರ್ಚ್‌ ಬೆಳಕಿಗೆ ಅಂಗೈಯನ್ನು ಅಡ್ಡವಾಗಿ ಹಿಡಿದಿದ್ದೀರಾ? ಹಿಡಿದಿದ್ದರೆ ಬೆಳಕು ಹೇಗೆ ಕೈಯ ಸುತ್ತಲೂ, ನರನಾಡಿಯ ನಡುವೆ ಹರಿಯುತ್ತಾ ಕೆಂಪುಬಣ್ಣವನ್ನು ಚೆಲ್ಲುತ್ತದೆ ಎಂಬುದು ಗೊತ್ತಿರುತ್ತದೆ. ಚಿತ್ರದಲ್ಲಿ ದೀಪಕ್ಕೆ ಅಡ್ಡವಾಗಿ ಕೈಗಳನ್ನು ಗಮನಿಸಿ, ಎಷ್ಟು ಸೊಗಸಾಗಿ ಹಲ್ದಾನ್ಕರ್‌ ಅದನ್ನು ಕಟ್ಟಿಕೊಟ್ಟಿದ್ದಾರೆ. ಅದಕ್ಕೆ ಯಾವ ಬಣ್ಣವನ್ನು ಬಳಸಿದರೆ ಚೆನ್ನ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಸಾಮಾನ್ಯವಾಗಿ ಕ್ಯಾಡ್ಮಿಯಂ ರೆಡ್‌ ಎಂಬ ಬಣ್ಣವನ್ನು ಬಳಸುತ್ತಾರೆ. ಅದು ತುಸು ದುಬಾರಿ. ಯುರೋಪಿಯನ್‌ ಕಲಾವಿದರ ಚಿತ್ರಗಳಲ್ಲಿ ಇದು ಹೆಚ್ಚು ಕಾಣಲು ಸಿಗುತ್ತದೆ. 

Advertisement

   ಒಬ್ಬ ಕಲಾವಿದ, ಜೀವಶಾಸ್ತ್ರಜ್ಞನಾಗಿರುತ್ತಾನೆ, ವಿಜ್ಞಾನಿಯಾಗಿರುತ್ತಾನೆ, ರಾಸಾಯನಿಕ ತಜ್ಞನಾಗಿರುತ್ತಾನೆ, ವೈದ್ಯನೂ ಆಗಿರುತ್ತಾನೆ. ಆತನಿಗೆ ಫಿಸಿಕ್ಸ್‌ ಗೊತ್ತಿರಬೇಕಾಗುತ್ತದೆ, ಬೆಳಕು ಹೇಗೆ ವರ್ತಿಸುತ್ತದೆ ಎನ್ನುವುದನ್ನು ತಿಳಿದಿರಬೇಕಾಗುತ್ತದೆ. ಬಟ್ಟೆಯ ಮಟೀರಿಯಲ್‌ ಅನ್ನು ಒಡಮೂಡಿಸುವಾಗ ಫ್ಯಾಷನ್‌ ಡಿಸೈನರ್‌ ಕೂಡಾ ಆಗುತ್ತಾನೆ. ಇವೆಲ್ಲಾ ಆದಾಗ ಮಾತ್ರ ದೀಪದ ಮಹಿಳೆಯಂಥ ಕಲಾಸೃಷ್ಟಿ ಸಾಧ್ಯ.
     
ಮೊದಲ ಬಾರಿ ದೀಪದ ಮಹಿಳೆಯನ್ನು ನೋಡಿದಾಗ ಬೆರಗಾಗಿ ಹೋಗಿದ್ದೆ. ಅದರಲ್ಲಿನ ಚಿಕ್ಕ ಚಿಕ್ಕ ಡೀಟೇಲ್ಸ್‌ ಕೂಡಾ ಪರಿಪಕ್ವವಾಗಿ ಮೂಡಿಬಂದಿರುವುದನ್ನು ಕಂಡು ಮೂಕವಿಸ್ಮಿತನಾಗಿದ್ದೆ.
– ಚಂದ್ರನಾಥ ಆಚಾರ್ಯ, ಚಿತ್ರಕಲಾವಿದ

ನಿರೂಪಣೆ: ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next