ಬೆಂಗಳೂರು: ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತಿಯನ್ನು ಸಂಚು ರೂಪಿಸಿ ಕೊಲೆ ಮಾಡಿದ್ದ ಆರೋಪ ಪ್ರಕರಣದಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಕಣ್ಣಪ್ಪ (29) ಜೂ.22ರಂದು ಕೊಲೆಯಾಗಿದ್ದರು. ಕೊಲೆ ಮಾಡಿದ್ದ ಆತನ ಪತ್ನಿ ಶಾಂತಿ, ಆಕೆಯ ಪ್ರಿಯಕರ ಕಹೀಮುದ್ದೀನ್ ಭಾಬೂಭಾಯ್ ಬಂಧಿತ ಆರೋಪಿಗಳು. ಚಿಕ್ಕಬೇಗೂರಿನ ಬಾಡಿಗೆ ಮನೆಯಲ್ಲಿ ಕಣ್ಣಪ್ಪ ಪತ್ನಿ ಶಾಂತಿ ಹಾಗೂ ಮಗ ವರುಣ್ ಜತೆ ವಾಸಿಸುತ್ತಿದ್ದರು.
ಪಕ್ಕದ ಮನೆಯಲ್ಲಿಯೇ ಅಸ್ಸಾಂ ಮೂಲದ ಕಹೀಮುದ್ದೀನ್ ವಾಸಿಸುತ್ತಿದ್ದು, ಶಾಂತಿ ಜತೆ ಅನೈತಿಕ ಸಂಬಂಧ ಹೊಂದಿದ್ದ. ಈ ವಿಚಾರ ಕಣ್ಣಪ್ಪನಿಗೆ ಗೊತ್ತಾಗಿದ್ದು ಪತ್ನಿಗೆ ಬೈದಿದ್ದ ಹಲವು ಬಾರಿ ದಂಪತಿ ನಡುವೆ ಜಗಳ ನಡೆದಿತ್ತು. ಅನೈತಿಕ ಸಂಬಂಧ ಪ್ರಶ್ನಿಸಿದ್ದ ಪತಿಯನ್ನು ಕೊಲೆಮಾಡಲು ನಿರ್ಧರಿಸಿದ್ದ ಶಾಂತಿ ಪ್ರಿಯಕರ ಕಹೀಮುದ್ದೀನ್‌ಗೆ ತಿಳಿಸಿದ್ದು ಅವನೂ ಒಪ್ಪಿಕೊಂಡಿದ್ದ.
ಅದರಂತೆ ಜೂನ್ 22ರಂದು ಬೆಳಿಗ್ಗೆ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸಕ್ಕೆ ಶಾಂತಿ ಹೋಗಿದ್ದು ಕಣ್ಣಪ್ಪ ಮನೆಯಲ್ಲಿಯೇ ಮಲಗಿದ್ದ. ಇದನ್ನು ಕಹೀಮುದ್ದೀನ್ ತಿಳಿಸಿ ಹೋಗಿದ್ದಳು. ಅಲ್ಲಿಗೆ ತೆರಳಿದ್ದ ಕಹೀಮುದ್ದೀನ್, ಕಣ್ಣಪ್ಪನ ತಲೆಯಮೇಲೆ ಕಲ್ಲು ಎತ್ತಿಹಾಕಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪಕ್ಕದ ಮನೆಯ ಮತ್ತೂಬ್ಬ ಯುವಕ ಅಚಾನಕ್ ಆಗಿ ಅವರ ಮನೆಯ ಬಳಿ ಬಂದಾಗ ಕಣ್ಣಪ್ಪ ರಕ್ತದ ಮಡುವಿನಲ್ಲಿ ಬಿದ್ದಿರುವುದು ಗೊತ್ತಾಗಿತ್ತು. ಕೂಡಲೇ ಆತ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಿಸದೆ ಕಣ್ಣಪ್ಪ ಮೃತಪಟ್ಟಿದ್ದ.
ಈ ಕುರಿತು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾಗ ಕಹೀಮುದ್ದೀನ್ ಮೇಲೆ ಅನುಮಾನವಿತ್ತು. ಹೀಗಾಗಿ, ಆತನನ್ನು ವಶಕ್ಕೆ ಪಡೆದು ವಿಚಾರನೆಗೊಳಪಡಿಸಿದಾಗ ಕೃತ್ಯದ ಬಗ್ಗೆ ಬಾಯಿಬಿಟ್ಟ. ಬಳಿಕ ಶಾಂತಿಯನ್ನು ಬಂಧಿಸಲಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.