ಲಕ್ನೋ: ಹಾವುಗಳೆಂದರೆ ಯಾರಿಗೆ ತಾನೇ ಭಯ ತರಿಸೋದಿಲ್ಲ…ಅದರಲ್ಲೂ ವಿಷಪೂರಿತ ಹಾವಾದರೆ ಭಯ ಇನ್ನಷ್ಟು ಜಾಸ್ತಿ…ಆದರೆ ಉತ್ತರಪ್ರದೇಶದ ಮಹೋಬಾದಲ್ಲಿ ಮಹಿಳೆಯೊಬ್ಬರು ದಿಢೀರನೆ ಎಚ್ಚರವಾಗಿ ನೋಡಿದಾಗ ಕಾಲಿಗೆ ಕಾಳಿಂಗ ಸರ್ಪ ಸುತ್ತಿಕೊಂಡಿದ್ದನ್ನು ಕಂಡು ದಂಗು ಬಡಿದು ಹೋಗಿದ್ದರು. ಕೊನೆಗೆ ಆಕೆ ಗಟ್ಟಿ ಧೈರ್ಯ ಮಾಡಿ ಸುಮಾರು ಮೂರು ಗಂಟೆಗಳ ಕಾಲ ಅಲುಗಾಡದೇ ದೇವರ ಪ್ರಾರ್ಥನೆಯಲ್ಲಿ ತೊಡಗಿದ್ದು, ಅಂತೂ ಹಾವು ಆಕೆಗೆ ಯಾವ ತೊಂದರೆಯನ್ನು ಮಾಡದೆ ಹೊರಟು ಹೋದ ಘಟನೆ ನಡೆದಿದೆ.
ಇದನ್ನೂ ಓದಿ:Aamir Khan: 2 ವರ್ಷದ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ಆಮಿರ್ ಖಾನ್; ಯಾವ ಸಿನಿಮಾ?
ಉತ್ತರಪ್ರದೇಶದ ದಹ್ರಾ ಗ್ರಾಮದ ತನ್ನ ತಾಯಿಯ ಮನೆಯಲ್ಲಿದ್ದ ಮಿಥ್ಲೇಶ್ ಯಾದವ್ ಎಂಬಾಕೆಗೆ ತನ್ನ ಒಂದು ಕಾಲಿಗೆ ಏನೋ ಸುತ್ತಿಹಾಕಿಕೊಂಡಂತಿದೆ ಎಂದು ಅನುಭವಕ್ಕೆ ಬಂದಾಗ ದಿಢೀರನೆ ಎಚ್ಚರಗೊಂಡಿದ್ದರು. ಆಗ ತನ್ನ ಒಂದು ಕಾಲಿಗೆ ಕಾಳಿಂಗ ಸರ್ಪ ಸುತ್ತಿ ಹಾಕಿಕೊಂಡಿರುವುದು ಗಮನಕ್ಕೆ ಬಂದಿತ್ತು. ಈ ಸಂದರ್ಭದಲ್ಲಿ ಧೈರ್ಯ ಕಳೆದುಕೊಳ್ಳದ ಆಕೆ ತನ್ನ ಕೈಗಳನ್ನು ಜೋಡಿಸಿ ತನಗೆ ಏನು ಹಾನಿ ಮಾಡದೇ ಹೊರಟು ಹೋಗುವಂತೆ ಪ್ರಾರ್ಥನೆಯಲ್ಲಿ ತೊಡಗಿಕೊಂಡಿದ್ದಳು ಎಂದು ವರದಿ ತಿಳಿಸಿದೆ.
“ತನ್ನ ಇಬ್ಬರು ಮಕ್ಕಳ ಜೊತೆ ನಿದ್ರಿಸುತ್ತಿದ್ದೆ. ಬೆಳಗ್ಗೆ ನನಗೆ ದಿಢೀರನೆ ಎಚ್ಚರವಾದಾಗ ನನ್ನ ಒಂದು ಕಾಲಿಗೆ ಕಾಳಿಂಗ ಸರ್ಪ ಸುತ್ತಿ ಹಾಕಿಕೊಂಡಿದ್ದನ್ನು ನೋಡಿದೆ. ಆಗ ನಾನು ಕೆಲವು ಗಂಟೆಗಳ ಕಾಲ ಮಕ್ಕಳನ್ನು ದೂರ ಕರೆದೊಯ್ಯುವಂತೆ ತಾಯಿಗೆ ಹೇಳಿರುವುದಾಗಿ” ಮಿಥ್ಲೇಶ್ ಇಂಡಿಯಾ ಟುಡೇ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
ಮೂರು ಗಂಟೆಗಳ ಕಾಲ ಅಲುಗಾಡದೇ ಕುಳಿತಿದ್ದ ವೇಳೆ ನಿಮ್ಮ ಮನಸ್ಸಿನ ಸ್ಥಿತಿ ಹೇಗಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಆಕೆ, ನನಗೆ ಬೇರೆ ದಾರಿ ಇಲ್ಲವಾಗಿತ್ತು..ನಾನು ಭಗವಾನ್ ಶಿವನನ್ನು ಪ್ರಾರ್ಥಿಸುತ್ತಿದ್ದೆ. ಹಾವು ಯಾವುದೇ ತೊಂದರೆ ಮಾಡದೇ ನನ್ನ ಕಾಲಿನ ಹಿಡಿತ ಬಿಟ್ಟು ಹೋಗಲಿ ಎಂದು ಬೇಡಿಕೊಳ್ಳತೊಡಗಿದ್ದೆ. ಒಂದು ವೇಳೆ ನಾನು ಹಾವಿನ ಕಡಿತಕ್ಕೊಳಗಾಗಿ ಸಾವನ್ನಪ್ಪಿದರೆ, ನನ್ನ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಭಯ ಕಾಡಲು ಶುರುವಾಗಿತ್ತು. ನನ್ನ ಜೊತೆ ಕುಟುಂಬದ ಸದಸ್ಯರು ಕೂಡಾ ದೇವರನ್ನು ಪ್ರಾರ್ಥಿಸತೊಡಗಿದ್ದರು. ನೆರೆ ಹೊರೆಯವರು ಕೂಡಾ ಬಂದು ಮನೆಯೊಳಗೆ ಪೂಜೆಯನ್ನು ಮಾಡಿ, ಪ್ರಾರ್ಥನೆ ಸಲ್ಲಿಸಿದ್ದರು ಎಂದು ಮಿಥ್ಲೇಶ್ ಮಾಹಿತಿ ನೀಡಿದ್ದಾರೆ.
ಈ ಎಲ್ಲಾ ಗಾಬರಿಯ ನಡುವೆ ಕುಟುಂಬ ಸದಸ್ಯರು ಪೊಲೀಸರಿಗೆ ಸುದ್ದಿಯನ್ನು ಮುಟ್ಟಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸ್ಥಳೀಯ ಉರಗ ತಜ್ಞರ ನೆರವನ್ನು ಪಡೆದು, ಕಾಳಿಂಗ ಸರ್ಪ ಆಕೆಯ ಕಾಲಿನ ಹಿಡಿತ ಬಿಟ್ಟು ಮನೆಯೊಳಗೆ ಸೇರಿಕೊಂಡ ಕೂಡಲೇ ಅದನ್ನು ಹಿಡಿದು ಕಾಡಿಗೆ ಸುರಕ್ಷಿತವಾಗಿ ಬಿಟ್ಟಿರುವುದಾಗಿ ಎಂದು ವರದಿ ತಿಳಿಸಿದೆ.