Advertisement
ಘಟನೆ ವಿವರ:ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಣ ಸಂಗ್ರಹಕ್ಕಾಗಿ ಪ್ರತಿ ಬುಧವಾರ ಕುಂದಾಪುರ ಕಚೇರಿಯಿಂದ ವಾಹನದಲ್ಲಿ ಸಿಬಂದಿಯೋರ್ವರು ರಟ್ಟಾಡಿಗೆ ತೆರಳುತ್ತಾರೆ. ಹಾಗೆಯೇ ನಗದು ಗುಮಾಸ್ತೆ ಪ್ರೀತಿ ಕೊಕ್ಕರ್ಣೆ (23) ಅವರು ಕೂಡ ರಟ್ಟಾಡಿಯ ಸೇವಾನಿರತರ ಕಚೇರಿಗೆ ಹಣ ಸಂಗ್ರಹಕ್ಕಾಗಿ ಕುಂದಾಪುರದಿಂದ ಯೋಜನೆಯ ವಾಹನದಲ್ಲಿ ತೆರಳಿದ್ದರು. ಯೋಜನೆಯ ವಾಹನವು ಬೆಳಗ್ಗೆ ಯುವತಿಯನ್ನು ಕಚೇರಿಯಲ್ಲಿ ಬಿಟ್ಟು ಮುಂದಿನ ಕಚೇರಿಗೆ ಹಣ ಸಂಗ್ರಹಿಸಲು ಹೋಗಿದ್ದರು. ಕಚೇರಿಯಲ್ಲಿ ಸದಸ್ಯರಿಂದ ರೂ. 2.3ಲಕ್ಷ ರೂ. ಸಂಗ್ರಹಿಸಿದ್ದರು. ಬೆಳಗ್ಗೆ 10 ಗಂಟೆಯ ಸುಮಾರಿಗೆ ಹೆಲ್ಮೆಟ್ ಧರಿಸಿ ಬಂದ ವ್ಯಕ್ತಿಯೋರ್ವ ಕಚೇರಿಗೆ ಬಂದು ಕೃಷಿ ಇಲಾಖೆಯ ಕಚೇರಿ ಎಲ್ಲಿದೆ ಎಂದು ಪ್ರಶ್ನಿಸಿದ. ಈ ಬಗ್ಗೆ ಮಾಹಿತಿ ನೀಡುವ ಸಂದರ್ಭ ಮರದ ತುಂಡಿನಿಂದ ಪ್ರೀತಿ ಅವರ ತಲೆ, ದವಡೆ, ಸೊಂಟದ ಭಾಗದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆನಂತರ ಕಾಲಿನಿಂದ ತುಳಿದು ನಗದು ಕೌಂಟರ್‌ನಲ್ಲಿದ್ದ ಹಣವನ್ನ ದರೋಡೆ ಮಾಡಿಕೊಂಡು ಪರಾರಿಯಾಗಿದ್ದಾನೆ.
ರಟ್ಟಾಡಿಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ನಿರತರ ಕಚೇರಿ ಸುಮಾರು 15 ವರ್ಷಗಳಿಂದ ಇಲ್ಲಿ ಕಾರ್ಯಾಚರಿಸುತ್ತಿದೆ. ಈ ಪ್ರದೇಶವು ನಿರ್ಜನ ಪ್ರದರ್ಶನವಾಗಿದ್ದು, ಕಚೇರಿಯ ಸುತ್ತಲೂ ಕಾಡು ಪ್ರದೇಶಗಳಿಂದ ಕೂಡಿದೆ. ಮನೆ ಹಾಗೂ ಅಂಗಡಿಗಳು ನೂರಕ್ಕೂ ಹೆಚ್ಚು ಮೀಟರ್ ದೂರದಲ್ಲಿದೆ. ಪ್ರತಿ ಬುಧವಾರ ಹಣ ಸಂಗ್ರಹ ಬೆಳಗ್ಗೆ 7 ಗಂಟೆಗೆ ಆರಂಭಗೊಳ್ಳುತ್ತಿತ್ತು. ಕೂಲಿ ಹಾಗೂ ಇತರ ಕೆಲಸಕ್ಕೆ ಹೋಗುವವರು ಇಲ್ಲಿ ಹಣ ಕಟ್ಟಿ ತೆರಳುತ್ತಿದ್ದರು. ಹೀಗಾಗಿ ಬೆಳಗ್ಗೆ 9 ಗಂಟೆಯೊಳಗೆ ಲಕ್ಷಾಂತರ ರೂ. ಸಂಗ್ರಹವಾಗುತ್ತಿತ್ತು. ಈ ಬಗ್ಗೆ ಸರಿಯಾಗಿ ಮಾಹಿತಿಯುಳ್ಳವರೇ ಈ ಕೃತ್ಯ ನಡೆಸಿರಬೇಕೆಂದು ಶಂಕಿಸಲಾಗಿದೆ.
Related Articles
Advertisement
ಆರೋಪಿ ಬೈಕ್‌ನಲ್ಲಿ ಬಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಘಟನೆ ನಡೆದ ಕೆಲವು ಹೊತ್ತಿನ ಬಳಿಕ ಬೈಕೊಂದು ಸ್ಥಳದಿಂದ ತೆರಳಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿದೆ.ಪೊಲೀಸರಿಂದ ತೀವ್ರ ಶೋಧ: ಈ ಘಟನೆ ನಡೆದ ಬಳಿಕ ಪೊಲೀಸರು ಎಲ್ಲೆಡೆ ನಾಕಾಬಂಧಿ ಮಾಡಿದ್ದು, ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ. ಶ್ವಾನ ಘಟನೆ ಸ್ಥಳದಿಂದ ಮುಖ್ಯ ರಸ್ತೆಯವರೆಗೆ ಬಂದು ವಾಪಸಾಗಿದೆ. ಈ ಸ್ಥಳದಲ್ಲಿ ಬೈಕ್‌ನ್ನು ಆರೋಪಿ ನಿಲ್ಲಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.