ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಮಹಿಳೆಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಸುದ್ದಗುಂಟೆಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನ್ಯೂಗುರಪ್ಪನಪಾಳ್ಯ ನಿವಾಸಿ ಖತೀಜಾ ಉಲ್ಲಾ (30) ಮೃತ ಗೃಹಿಣಿ. ಈ ಸಂಬಂಧ ಅವರ ಪತಿ ಮೆಹಬೂಬ್ ಷರೀಫ್ ಹಾಗೂ ಇತರರ ವಿರುದ್ಧ ಕಿರುಕುಳದಿಂದ ಮಗಳು ಮೃತಪಟ್ಟಿರುವುದಾಗಿ ಪೋಷಕರು ದೂರು ನೀಡಿದ್ದಾರೆ. ಅದರನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು. ಖತೀಜಾ ಹಾಗೂ ಮೆಹಬೂಬ್ ಷರೀಫ್ 15 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿ ನಾಲ್ವರು ಮಕ್ಕಳಿದ್ದಾರೆ. ಪತಿ ಹಾಗೂ ಇತರರು, ನಿತ್ಯವೂ ಖತೀಜಾಗೆ ಕಿರುಕುಳ ನೀಡುತ್ತಿದ್ದರು. ಅದರಿಂದ ಬೇಸತ್ತ ಖತೀಜಾ ಪೋಷಕರಿಗೆ ದೂರು ನೀಡಿದ್ದರು. ಆಗ ಪೋಷಕರು ಅಳಿಯನಿಗೆ ಬುದ್ಧಿ ಹೇಳಿ ರಾಜಿಸಂಧಾನ ಮಾಡಿದ್ದರು ಎಂದು ಹೇಳಲಾಗಿದೆ.
ಆದರೂ ಪತಿ ಹಾಗೂ ಆತನ ಕುಟುಂಬ ಸದಸ್ಯರು ತೊಂದರೆ ಕೊಡುತ್ತಿದ್ದರು. ಅದರಿಂದ ಬೇಸತ್ತ ಖತೀಜಾ ಭಾನುವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.