ಬೆಂಗಳೂರು: ಬಸ್ ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಮಹಿಳೆ ಮೇಲೆ ಬಸ್‌ನ ಹಿಂಬದಿ ಚಕ್ರ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಡಿವಾಳ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಿಂಗಸಿಂದ್ರ ನಿವಾಸಿ ಸೀಮಾ (22) ಮೃತ ಮಹಿಳೆ.
ಆಕೆಯ ಪತಿ ಗುರುಮೂರ್ತಿ ಹಾಗೂ ಒಂದೂವರೆ ವರ್ಷದ ಹೆಣ್ಣು ಮಗುವಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬುಧವಾರ ಸಂಜೆ 6.45ರ ಸುಮಾರಿಗೆ ಬೊಮ್ಮನಹಳ್ಳಿ ಕಡೆಯಿಂದ ನಗರದ ಕಡೆಗೆ ಬರುವ ಮಾರ್ಗ ಮಧ್ಯೆ ಸಿಲ್ಕ್ ಬೋರ್ಡ್ ಜಂಕ್ಷನ್ ಮೇಲ್ಸೇತುವೆಯ ಅಪ್ಪರ್ ರ್‍ಯಾಂಪ್‌ನಲ್ಲಿ ದುರ್ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದರು.
ಬಳ್ಳಾರಿ ಮೂಲದ ಗುರುಮೂರ್ತಿ ಸಿಂಗಸಂದ್ರದ ಬೆಸ್ಕಾಂ ಕಚೇರಿಯಲ್ಲಿ ಲೈನ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಬುಧವಾರ ಸಂಜೆ ಪತ್ನಿ ಸೀಮಾ ಹಾಗೂ ಮಗು ಜತೆ ದ್ವಿಚಕ್ರ ವಾಹನದಲ್ಲಿ ಬೊಮ್ಮನಹಳ್ಳಿಯಿಂದ ನಗರದ ಕಡೆ ಬರುತ್ತಿದ್ದರು. ಈ ವೇಳೆ ಸಿಲ್ಕ್ ಬೋರ್ಡ್ ಜಂಕ್ಷನ್‌ನ ಅಪ್ಪರ್ ರ್‍ಯಾಂಪ್‌ನಲ್ಲಿ ಹಿಂದಿನಿಂದ ವೇಗವಾಗಿ ಬಂದ ಬಿಎಂಟಸಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ.
ಪರಿಣಾಮ ಸವಾರ ಗುರುಮೂರ್ತಿ, ಮಗು ಎಡಭಾಗಕ್ಕೆ ಬಿದ್ದರೆ, ಪತ್ನಿ ಸೀಮಾ ಬಲ ಭಾಗಕ್ಕೆ ಬಿದ್ದಿದ್ದಾರೆ. ಈ ವೇಳೆ ಬಸ್‌ನ ಹಿಂಬದಿ ಚಕ್ರ ಸೀಮಾ ದೇಹದ ಮೇಲೆಯೇ ಉರುಳಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುರುಮೂರ್ತಿ, ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತಕ್ಕೆ ಬಿಎಂಟಿಸಿ ಬಸ್ ಚಾಲಕನ ಅತೀ ವೇಗ, ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.