ಲಂಡನ್: ಇದೊಂದು ವಿಚಿತ್ರ ಪ್ರಕರಣ, ಬೇಜವಾಬ್ದಾರಿಯ ಪರಮಾವಧಿ ಎಂದರೂ ತಪ್ಪಲ್ಲ. ಲಂಡನ್‌ನ ಅಪಾರ್ಟ್‌ಮೆಂಟ್‌ನಲ್ಲಿ, ಶೀಲಾ ಸೆಲಿಯೋನ್ (61) ಎಂಬ ಮಹಿಳೆ ಎರಡೂವರೆ ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ.
ವಸ್ತುಸ್ಥಿತಿಯಲ್ಲಿ ಆಕೆ ಏನಾಗಿದ್ದಾರೆ ಎಂದು ಯಾರಿಗೂ ಗೊತ್ತಾಗಿರಲಿಲ್ಲ. ಆಕೆ ನಾಪತ್ತೆ ಎಂದು ಭಾವಿಸಿದ್ದ ಪೀಬಾಡಿ ಟ್ರಸ್ಟ್ ಎಂಬ ಹೌಸಿಂಗ್ ಸೊಸೈಟಿ, ಬಾಡಿಗೆ ವಸೂಲಿ ಮಾಡುವುದನ್ನು ಮುಂದುವರಿಸಿತ್ತು. ಆದರೆ ಆಕೆಗೆ ಏನಾಗಿದೆ ಎಂಬ ಕುರಿತು ಸರಿಯಾಗಿ ತನಿಖೆಯನ್ನೇ ನಡೆಸಿಲ್ಲ. ಇದು ಇಂಗ್ಲೆಂಡ್‌ನಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ.
ಈ ವರ್ಷ ಫೆಬ್ರವರಿಯಲ್ಲಿ ಆಕೆಯ ಶವ ಮನೆಯಲ್ಲಿ ದೊರಕಿದೆ. ಅದೂ ಪೊಲೀಸರು ಬಾಗಿಲೊಡೆದು ಮನೆ ಪ್ರವೇಶಿಸಿದ ನಂತರ. ಆಕೆಯ ಶವವನ್ನು ಪರೀಕ್ಷಿಸಿದ ನಂತರ ಶೀಲಾ 2019 ಆಗಸ್ಟ್‌ನಲ್ಲಿ ಮೃತಪಟ್ಟಿದ್ದಾರೆ ಎಂದು ಗೊತ್ತಾಗಿದೆ.
ಶೀಲಾ 2019ರ ಆಗಸ್ಟ್‌ನಲ್ಲಿ ಬಾಡಿಗೆ ಪಾವತಿಸಿರಲಿಲ್ಲ. 2020, ಮಾರ್ಚ್‌ನಲ್ಲಿ ಪೀಬಾಡಿ ಹೌಸಿಂಗ್ ಸೊಸೈಟಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಆಕೆಗೆ ಸಿಗುವ ಲಾಭಾಂಶದಿಂದ ಬಾಡಿಗೆ ಕತ್ತರಿಸಿಕೊಳ್ಳಲು ಅನುಮತಿ ಪಡೆದಿತ್ತು. ಜೊತೆಗೆ ಗ್ಯಾಸ್ ಸಂಪರ್ಕ ನಿಲ್ಲಿಸಿತ್ತು. ಆದರೆ ಅದೇ ವರ್ಷ ಜೂನ್‌ನಲ್ಲಿ ಮೂವರು ನೆರೆಯವರು ಸತತವಾಗಿ ಪೊಲೀಸರಿಗೆ ಕರೆ ಮಾಡಿ, ಆಕೆ ಕಾಣಿಸುತ್ತಿಲ್ಲ ತನಿಖೆ ಮಾಡಿ ಎಂದು ವಿನಂತಿಸಿದ್ದರು!
ಇಷ್ಟಾದರೂ ಪೊಲೀಸರಾಗಲೀ, ಹೌಸಿಂಗ್ ಸೊಸೈಟಿಯಾಗಲೀ ಎಚ್ಚೆತ್ತುಕೊಳ್ಳಲಿಲ್ಲ. ಪರಿಣಾಮ ಎರಡೂವರೆ ವರ್ಷವಾದ ಮೇಲೆ ಸತ್ತಿದ್ದಾರೆನ್ನುವುದು ಗೊತ್ತಾಗಿದೆ.