ಬೆಂಗಳೂರು: ವೈದ್ಯಕೀಯ ಸೀಟು ಕೊಡಿಸುವ ಆಮಿಷವೊಡ್ಡಿದ್ದ ಇಬ್ಬರು ದುಷ್ಕರ್ಮಿಗಳು, ಮಹಿಳೆ ಬಳಿಯಿದ್ದ 13 ಲಕ್ಷ ರೂ.ಗಳಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾದ ಘಟನೆ ಸದಾಶಿವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಕುರಿತು ಪಟ್ಟೆಗಾರ್ ಪಾಳ್ಯದ ನಿವಾಸಿ ರೇವತಿ ಎಂಬುವವರು ನೀಡಿರುವ ದೂರು ಆಧರಿಸಿ ವಿನೋದ್ ಕುಮಾರ್ ಹಾಗೂ ರಾಕೇಶ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಗೇಟ್ ಬಳಿ ದುಷ್ಕರ್ಮಿಗಳು ಹಣದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದು, ಘಟನಾ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಈ ಸುಳಿವು ಆಧರಿಸಿ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೆಡಿಕಲ್ ಸೀಟು ಆಮಿಷ!: ರೇವತಿ ಅವರಿಗೆ ಪರಿಚಯವಿರುವ ಸಂತೋಷ್ ಕುಮಾರ್ ಎಂಬುವವರು, ತಮ್ಮ ಸಹೋದರಿಗೆ ಫಿಸಿಯೋಥೆರಪಿ (ಎಂಬಿಬಿಎಸ್) ಸೀಟು ಕೊಡಿಸಲು ಪ್ರಯತ್ನಿಸುತ್ತಿದ್ದರು. ಈ ವೇಳೆ ವಿನೋದ್‌ಕುಮಾರ್ ಪರಿಚಯವಾಗಿದೆ.
ತನ್ನ ಸ್ನೇಹಿತ ರಾಕೇಶ್‌ಗೆ ಎಂ.ಎಸ್.ರಾಮಯ್ಯ ಕಾಲೇಜಿನ ಪ್ರಿನ್ಸಿಪಾಲ್ ತುಂಬಾ ಹತ್ತಿರದವರಾಗಿದ್ದು, 13 ಲಕ್ಷ ರೂ. ಕೊಟ್ಟರೆ ಸೀಟುಕೊಡಿಸುತ್ತೇವೆ ಎಂದು ಹೇಳಿದ್ದ. ಆರೋಪಿಯ ಮಾತು ನಂಬಿದ ಸಂತೋಷ್ ಹಾಗೂ ರೇವತಿ 13 ಲಕ್ಷ ರೂ. ತೆಗೆದುಕೊಂಡು ಮಾರ್ಚ್ 26ರಂದು ಕಾಲೇಜಿನ ಹತ್ತಿರ ಬರುವುದಾಗಿ ಹೇಳಿದ್ದಾರೆ.
ಈ ವೇಳೆ ಐಐಎಸ್ಸಿ ಗೇಟ್ ಬಳಿ ಇರುವಂತೆ ಹೇಳಿದ್ದ ವಿನೋದ್, ಮಧ್ಯಾಹ್ನ 2.30ರ ಸುಮಾರಿಗೆ ರಾಕೇಶ್‌ನನ್ನು ಕರೆದುಕೊಂಡು ಹೋಗಿದ್ದಾನೆ. ಸೀಟು ಸಂಬಂಧ ಮಾತನಾಡುತ್ತಿದ್ದ ಆರೋಪಿಗಳು ಕೆಲವೇ ನಿಮಿಷಗಳಲ್ಲಿ ರೇವತಿ ಅವರ ಕೈಲಿದ್ದ ಹಣದ ಬ್ಯಾಗ್ ಕಿತ್ತುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.