Advertisement

ಸಿಬಂದಿ ಉಡಾಫೆಗೆ ಮಹಿಳೆಯಿಂದ ಹೋರಾಟ; ಎಟಿಎಂನಲ್ಲಿ ಹಣ ಹಾಕಿದರೂ ರಸೀದಿ ಬಾರದೆ ಕಂಗಾಲು

01:43 AM Jun 08, 2022 | Team Udayavani |

ಸುರತ್ಕಲ್‌: ತುರ್ತಾಗಿ ಚಿಕಿತ್ಸೆಗೆಂದು ಬ್ಯಾಂಕ್‌ಗೆ ಹಣ ಹಾಕಲು ಬಂದ ಮಹಿಳೆಗೆ ಬ್ಯಾಂಕ್‌ ಸಿಬಂದಿ ತೋರಿದ ಉಡಾಫೆ ವರ್ತನೆಯಿಂದ ತೀವ್ರ ಆಕ್ರೋಶಗೊಂಡು ಹೋರಾಟಕ್ಕಿಳಿದು ಹಣ ಪಡೆದುಕೊಂಡ ಘಟನೆ ಸುರತ್ಕಲ್‌ನಲ್ಲಿ ನಡೆದಿದೆ.

Advertisement

ಚಿಕಿತ್ಸೆಗೆ ದಾಖಲಾಗಿದ್ದ ಕುಟುಂಬವೊಂದಕ್ಕೆ ನೆರವಾಗುವ ಸಲುವಾಗಿ ಅವರು ನೀಡಿದ ಹಣವನ್ನು ತನ್ನ ಖಾತೆಯ ಮೂಲಕ ಅವರಿಗೆ ಹಾಕಲು ಸುರತ್ಕಲ್‌ ರಾಷ್ಟ್ರೀಯ ಬ್ಯಾಂಕ್‌ನ ಶಾಖೆಯೊಂದಕ್ಕೆ ಹೋದ ಸಂದರ್ಭ ಸಿಬಂದಿ ಹಣವನ್ನು ಎಟಿಎಂ ಯಂತ್ರದ ಮೂಲಕ ಪಾವತಿಸುವಂತೆ ಸೂಚಿಸಿದರು.

ಮಹಿಳೆ ಎಟಿಎಂ ಬಳಿಯ ಯಂತ್ರದಲ್ಲಿ ಹಣ ಹಾಕಿ ರಶೀದಿಗಾಗಿ ಕಾಯುತ್ತಾ ನಿಂತರೂ ಪ್ರೊಸೆಸ್‌ ಎಂಬುದಷ್ಟೇ ಬಂದಿತ್ತು. ಖಾತೆಗೆ ಹಣ ವರ್ಗಾವಣೆ ಆಗದೆ ಯಂತ್ರ ಕೈಕೊಟ್ಟಿತ್ತು. ಇದನ್ನು ತಿಳಿದು ಗಾಬರಿಯಾದ ಮಹಿಳೆ ಹಣದ ಅಗತ್ಯವಿದ್ದು ತತ್‌ಕ್ಷಣ ಹಣ ಖಾತೆಗೆ ಹಾಕುವಂತೆ ಮನವಿ ಮಾಡಿದರು. ಇದಕ್ಕೆ ಸರಿಯಾಗಿ ಸ್ಪಂದಿಸದ ಸಿಬಂದಿ ಮ್ಯಾನೇಜರ್‌ ಇಲ್ಲ, ಇದರ ಬಗ್ಗೆ ಮುಖ್ಯ ಕಚೇರಿಗೆ ಹೋಗಿ ತಿಳಿಸಿ. ಈ ಸಮಸ್ಯೆ ಬಗೆಹರಿಸಲು ಎರಡು ಮೂರು ದಿನ ತಗಲುತ್ತದೆ ಎಂದಾಗ ಮಹಿಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಆಸ್ಪತ್ರೆಗೆ ಹಣ ಕಟ್ಟಲೆಂದು ಬಂದಿದ್ದೆ.

ನೇರವಾಗಿ ನಗದು ಪಡೆದುಕೊಂಡು ಖಾತೆಗೆ ಹಾಕಬಹುದಿತ್ತು. ನಿಮ್ಮ ನಿರ್ಲಕ್ಷéದಿಂದ ಸಮಸ್ಯೆ ಆಗಿದೆ. ಹಣ ವರ್ಗಾವಣೆ ಮಾಡಲೇಬೇಕೆಂದು ಪಟ್ಟು ಹಿಡಿದು ಕುಳಿತರು. ಸ್ಥಳೀಯರು ಜಮಾಯಿಸಿ ಮಹಿಳೆಗೆ ಬೆಂಬಲ ಸೂಚಿಸಿ ಈ ಶಾಖೆಯಲ್ಲಿ ಗ್ರಾಹಕರಿಗೆ ಸ್ಪಂದನೆಯೇ ದೊರಕುತ್ತಿಲ್ಲ ಎಂದು ಕಿಡಿಕಾರಿದರು.

ಸಿಬಂದಿ ಕಂಪ್ಯೂಟರ್‌ನಲ್ಲಿ ಪರಿಶೀಲಿಸಿದಾಗ ಹಣ ಹಾಕಿರುವುದು ರುಜುವಾಗಿತ್ತು. ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಬ್ಯಾಂಕ್‌ನಿಂದ ಹಣ ದೊರಕಿಸಿ, ತಾಂತ್ರಿಕವಾಗಿ ಹಣ ವಿಳಂಬವಾಗಿ ಬಂದರೆ ಮರುಕಳಿಸಲಾಗುವುದು ಎಂದು ಮಹಿಳೆಯಿಂದ ಮುಚ್ಚಳಿಕೆ ಪತ್ರ ಕೊಡಿಸಿ ಪ್ರಕರಣ ಸುಖಾಂತ್ಯಗೊಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next