ಸುಳ್ಯ: ಕಾಡಿನಲ್ಲಿ ಸಿಗುವ ಮೈರೋಳ್ ಎಂಬ ಹಣ್ಣನ್ನು ಸೇವಿಸಬಹುದಾದ ಹಣ್ಣು ಎಂದು ಭಾವಿಸಿ ಮನೆಗೆ ತಂದು ಶರಬತ್ತು (ಜ್ಯೂಸ್) ಮಾಡಿ ಕುಡಿದ ಇಬ್ಬರಲ್ಲಿ ಓರ್ವರು ಮೃತಪಟ್ಟಿರುವ ಘಟನೆ ಅ.2ರಂದು ಸುಳ್ಯದಲ್ಲಿ ಸಂಭವಿಸಿದೆ.
ಅಮರಪಡ್ನೂರು ಗ್ರಾಮದ ಕುಳ್ಳಾಜೆ ಜಗನ್ನಾಥ ನಾಯ್ಕ ದೊಡ್ಡೇರಿ ಅವರ ಪತ್ನಿ ಲೀಲಾವತಿ (35) ಮೃತರು. ಮೃತರು ತಂದೆ, ತಾಯಿ, ಪತಿ, ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ.
ವಾರದ ಹಿಂದೆ ಲೀಲಾವತಿ ಹಾಗೂ ಅವರ ತಂದೆ ಕಾಡಿನಿಂದ ಮೈರೋಳ್ ಹಣ್ಣನ್ನು ತಂದು ರಸ ತೆಗೆದು ಶರಬತ್ತು ಮಾಡಿ ಕುಡಿದಿದ್ದು, ಪರಿಣಾಮವಾಗಿ ತಂದೆ ಹಾಗೂ ಮಗಳು ಅಸ್ವಸ್ಥರಾಗಿದ್ದರು.
ಲೀಲಾವತಿ ಅವರಿಗೆ ವಾಂತಿ, ಭೇದಿ ಆರಂಭವಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾದರು. ಆದರೆ ಅಸೌಖ್ಯ ತೀವ್ರಗೊಂಡು ಅ. 2ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯುವಾಗ ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.
ಆಸ್ಪತ್ರೆಗೆ ದಾಖಲಾಗಿದ್ದರೂ ವೈದ್ಯರಲ್ಲಿ ಮೂರು ದಿನಗಳ ವರೆಗೆ ಘಟನೆಗೆ ಕಾಡು ಹಣ್ಣಿನ ಜ್ಯೂಸ್ ಮಾಡಿ ಸೇವಿಸಿದ್ದರ ಬಗ್ಗೆ ಮನೆಯವರು ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ.