ಬೆಂಗಳೂರು: ಚಿಲ್ಲರೆ ವಿಚಾರಕ್ಕೆ ಬಿಎಂಟಿಸಿ ನಿರ್ವಾಹಕ, ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಜತೆ ಜಟಾಪಟಿ ನಡೆಸಿರುವ ಘಟನೆ ನಾಗರಬಾವಿಯಲ್ಲಿ ಸೋಮವಾರ ಮಧ್ಯಾಹ್ನ ನಗರದಲ್ಲಿ ನಡೆದಿದ್ದು, ಆ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಗೊರಗುಂಟೆಪಾಳ್ಯದಿಂದ ಬನಶಂಕರಿಗೆ ಹೋಗುವ ಬಸ್‌ನಲ್ಲಿ ಘಟನೆ ನಡೆದಿದೆ. ಆದರೆ, ಇದುವರೆಗೂ ಯಾರೊಬ್ಬರೂ ದೂರು ನೀಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಮಧ್ಯಾಹ್ನ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಚಿಲ್ಲರೆ ಕೊಡಬೇಕಾದ ನಿರ್ವಾಹಕ, ಇಳಿಯುವ ಸ್ಥಳದಲ್ಲಿ ಕೊಡುವುದಾಗಿ ಟಿಕೆಟ್ ಹಿಂಭಾಗದಲ್ಲಿ ಬಾಕಿ ಚಿಲ್ಲರೆ ಬರೆದುಕೊಟ್ಟಿದ್ದ. ಅದರಂತೆ ಮಹಿಳೆ ನಾಗರಬಾವಿ ಬಳಿ ಇಳಿಯುವಾಗ ನಿರ್ವಾಹಕನಿಗೆ ಚಿಲ್ಲರೆ ಕೊಡುವಂತೆ ಕೇಳಿದ್ದಾರೆ.
ಈ ವೇಳೆ ಮಹಿಳೆ ಜತೆ ಜಗಳ ತೆಗೆದ ಆತ, ವಾಗ್ವಾದ ನಡೆಸಿದ್ದು, ಒಂದು ಹಂತದಲ್ಲಿ ಹಲ್ಲೆ ಕೂಡ ನಡೆಸಿದ್ದಾನೆ ಎನ್ನಲಾಗಿದೆ. ಇದರಿಂದ ಕುಪಿತಗೊಂಡ ಮಹಿಳೆ, ನಿರ್ವಾಹಕನ ಕೊರಳ ಪಟ್ಟಿ ಹಿಡಿದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ಕೊನೆಗೆ ಬಸ್‌ನ ಸಹ ಪ್ರಯಾಣಿಕರು ಮಹಿಳೆ ಹಾಗೂ ನಿರ್ವಾಹಕರನ್ನು ಸಮಾಧಾನ ಪಡಿಸಿದ್ದಾರೆ.ಈ ಮಧ್ಯೆ ನಿರ್ವಾಹಕ ಮತ್ತು ಮಹಿಳೆ ನಡುವಿನ ಜಗಳದ ದೃಶ್ಯವನ್ನು ಸಹ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದು, ಇದೀಗ ಎಲ್ಲೆಡೆ ವೈರಲ್ ಆಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಬಿಎಂಟಿಸಿ ಅಧಿಕಾರಿಯೊಬ್ಬರು, ವೈರಲ್ ವಿಡಿಯೋ ಸಿಕ್ಕಿದ್ದು, ಆದರೆ, ಬಸ್ ನಂಬರ್ ಆಗಲಿ, ಡಿಪೋ ನಂಬರ್ ಆಗಲಿ ತಿಳಿದು ಬಂದಿಲ್ಲ. ಅಲ್ಲದೆ ಇದುವರೆಗೂ ಯಾರೊಬ್ಬರೂ ದೂರು ಸಹ ನೀಡಿಲ್ಲ. ವಿಡಿಯೋವನ್ನು ಹಿರಿಯ ಅಧಿಕಾರಿಗಳಿಗೆ ಕಳುಹಿಸಲಾಗಿದ್ದು, ಅವರ ಸೂಚನೆ ಮೇರೆಗೆ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.