ಬೆಂಗಳೂರು: ಗುತ್ತಿಗೆದಾರರೊಬ್ಬರನ್ನು “ಹನಿಟ್ರ್ಯಾಪ್’ಗೆ ಬೀಳಿಸಿದ ಮಹಿಳೆಯೊಬ್ಬಳು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾಳೆ. ಅನ್ನಪೂರ್ಣಶ್ವೇರಿನಗರದ ನಿವಾಸಿ ಸಿವಿಲ್ ಗುತ್ತಿಗೆದಾರ ಲೋಹಿತ್ (38) ಇವರ ಜತೆ ಸಲುಗೆ ಬೆಳೆಸಿ ಇಬ್ಬರು ಒಟ್ಟಿಗಿರುವ ಖಾಸಗಿ ದೃಶ್ಯಾವಳಿಗಳನ್ನು ಸೆರೆಹಿಡಿದು ಒಂದು ಕೋಟಿ ರೂ.ಗೆ ಬೇಡಿಕೆಯಿಟ್ಟು ಹನಿಟ್ರ್ಯಾಪ್ ಬಲೆ ಹೆಣೆದಿದ್ದ ವಿಜಯನಗರದ ನಿವಾಸಿ ವಿದ್ಯಾ (32) ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಸಿವಿಲ್ ಗುತ್ತಿಗೆದಾರ ನೀಡಿದ ದೂರು ಆಧರಿಸಿ ಮಹಿಳೆಯನ್ನು ಬಂಧಿಸಿರುವ ಪೊಲೀಸರು, ಹನಿಟ್ರ್ಯಾಪ್‌ಗೆ ನೆರವು ನೀಡಿದ್ದ ಇಬ್ಬರು ಯುವಕರ ಪತ್ತೆಗೆ ಶೋಧ ನಡೆಸಿದ್ದಾರೆ. ಮೂರು ತಿಂಗಳ ಹಿಂದೆ ಸಿವಿಲ್ ಗುತ್ತಿಗೆದಾರ ಲೋಹಿತ್ ನಾಗರಬಾವಿಯ ನಮ್ಮೂರ ತಿಂಡಿ ಹೋಟೆಲ್ ಮುಂಭಾಗದ ರಸ್ತೆಯಲ್ಲಿ ನಿಂತಿದ್ದರು. ಈ ವೇಳೆ ಅವರ ಬಳಿ ಬಂದ ಇಬ್ಬರು ಯುವಕರು, ನಮ್ಮ ಬಳಿ ಇರುವ ಹರ್ಬಲ್ ಲೈಫ್ ಉತ್ಪನ್ನಗಳನ್ನು ತೆಗೆದುಕೊಂಡರೆ ನೀವು ಬೇಗ ಸಣ್ಣಗಾಗುತ್ತೀರಿ ಎಂದು ನಂಬಿಸಿದ್ದರು.
ನಂತರ ಆರೋಪಿಗಳು ವಿದ್ಯಾ ಮೊಬೈಲ್ ನಂಬರ್ ಕೊಟ್ಟು ನೀವು ಈ ನಂಬರ್‌ಗೆ ಕರೆ ಮಾಡಿ ಮಾತನಾಡಿ ಎಂದಿದ್ದರು. ಅದರಂತೆ ವಿದ್ಯಾಗೆ ಕರೆ ಮಾಡಿದ್ದ ಲೋಹಿತ್ ಹರ್ಬಲ್ ಲೈಫ್ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆದು ಅದನ್ನು ಖರೀದಿಸಿದ್ದರು. ನಂತರ ಆಗಾಗ ಲೋಹಿತ್‌ಗೆ ಕರೆ ಮಾಡುತ್ತಿದ್ದ ವಿದ್ಯಾ ಸಲುಗೆ ಬೆಳೆಸಿಕೊಂಡಿದ್ದಳು. ಅದರಂತೆ ಆಕೆ ಇತ್ತೀಚೆಗೆ ಕನಕಪುರ ರಸ್ತೆಯಲ್ಲಿರುವ ರೆಸಾರ್ಟ್‌ಗೆ ಲೋಹಿತ್‌ನನ್ನು ಕರೆದುಕೊಂಡು ಹೋಗಿದ್ದಳು.
ಈ ವೇಳೆ ಇಬ್ಬರೂ ಖಾಸಗಿಯಾಗಿ ಕಾಲ ಕಳೆದಿದ್ದಾರೆ. ಕೆಲ ಸಮಯದ ಬಳಿಕ ವಿದ್ಯಾ ಮಾದಕ ವಸ್ತು ಸೇವಿಸಿ ರೆಸಾರ್ಟ್ ಸಿಬ್ಬಂದಿ ಜತೆ ಜಗಳ ಮಾಡಿದ್ದಳು. ಆಕೆಯನ್ನು ಲೋಹಿತ್ ಸಮಾಧಾನಪಡಿಸಿದರೂ ಆಕೆ ಕೇಳದಾಗ ವಿದ್ಯಾಳನ್ನು ಅಲ್ಲಿಯೇ ಬಿಟ್ಟು ಲೋಹಿತ್ ಮನೆಗೆ ಬಂದಿದ್ದರು.
ಪೆನ್‌ಡ್ರೈವ್ ಕೊಟ್ಟು 1 ಕೋಟಿ ರೂ.ಗೆ ಬೇಡಿಕೆ: ಸೆ.29ರಂದು ವಿದ್ಯಾ, ಲೋಹಿತ್‌ಗೆ ಕರೆ ಮಾಡಿ ನಾಗರಬಾವಿ ಬಳಿ ಬರುವಂತೆ ಸೂಚಿಸಿದ್ದಳು. ಲೋಹಿತ್ ಆಕೆಯನ್ನು ಭೇಟಿಯಾದಾಗ ಇವರಿ ಬ್ಬರೂ ರೆಸಾರ್ಟ್‌ನಲ್ಲಿ ಕಳೆದಿದ್ದ ಖಾಸಗಿ ಫೋಟೋ ಗಳನ್ನು ತೋರಿಸಿ 1 ಕೋಟಿ ರೂ. ಕೊಡುವಂತೆ ಬ್ಲಾಕ್ ಮೇಲ್ ಮಾಡಿದ್ದಳು. ಇದರಿಂದ ಆತಂಕಗೊಂಡ ಲೋಹಿತ್ ಆರಂಭದಲ್ಲಿ 2 ಲಕ್ಷ ರೂ. ಕೊಟ್ಟಿದ್ದರು. ಇದಾದ ಕೆಲ ದಿನಗಳ ಬಳಿಕ ವಿದ್ಯಾ ಮತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದಳು.
ಇದನ್ನೂ ಓದಿ:- ಅಂಬೇಡ್ಕರ್ ಕನಸಿನ ಭಾರತ ನಿರ್ಮಿಸೋಣ: ಪೆರ್ಲ
ಈ ಮಧ್ಯೆ ಕೆಲ ದಿನಗಳ ಹಿಂದೆ ಇಬ್ಬರು ಅಪರಿಚಿತ ಹುಡುಗರು ಲೋಹಿತ್‌ನನ್ನು ಭೇಟಿಯಾಗಿ ಪೆನ್‌ಡ್ರೈವ್ ಕೊಟ್ಟು ಇದರಲ್ಲಿ ಇರುವುದನ್ನು ನೋಡಿ ಎಂದು ಹೇಳಿ ಹೋಗಿದ್ದರು. ಪೆನ್‌ಡ್ರೈವ್‌ನಲ್ಲಿ ಏನಿದೆ ಎಂದು ನೋಡಿದಾಗ ವಿದ್ಯಾ ಮತ್ತು ಲೋಹಿತ್ ರೆಸಾರ್ಟ್‌ನಲ್ಲಿ ಕಳೆದ ಖಾಸಗಿ ದೃಶ್ಯಗಳಿದ್ದವು. ವಿದ್ಯಾಗೆ ಕರೆ ಮಾಡಿದ ಲೋಹಿತ್ ಈ ಬಗ್ಗೆ ಪ್ರಶ್ನಿಸಿದ್ದರು. 1 ಕೋಟಿ ರೂ. ಕೊಡದಿದ್ದರೆ, ವಿವಾಹವಾಗುವುದಾಗಿ ನಂಬಿಸಿ ವಂಚಿಸಿರುವುದಾಗಿ ನಿಮ್ಮ ವಿರುದ್ಧ ಪೊಲೀಸರಿಗೆ ದೂರು ಕೊಡುತ್ತೇನೆ ಎಂದು ಆಕೆ ಬೆದರಿಕೆ ಹಾಕಿದ್ದಳು.
ಇದರಿಂದ ಆತಂಕಗೊಂಡ ಲೋಹಿತ್ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ವಿದ್ಯಾ ಹನಿಟ್ರ್ಯಾಪ್ ನಡೆಸಿರುವುದು ಪತ್ತೆಯಾಗಿತ್ತು. ಆಕೆಯನ್ನು ಬಂಧಿಸಿದ ಪೊಲೀಸರು ಈಕೆಗೆ ಸಹಕರಿಸುತ್ತಿದ್ದ ಇಬ್ಬರು ಹುಡುಗರಿಗೆ ಶೋಧ ಮುಂದುವರೆಸಿದ್ದಾರೆ.