Advertisement
ಹಿಂದೆ ಮಕ್ಕಳ ಲಾಲನೆ-ಪಾಲನೆ, ಮನೆ ಕೆಲಸದಲ್ಲಿ ಮಹಿಳೆಯರ ಸಮಯ ಕಳೆದು ಹೋಗುತ್ತಿತ್ತು. ಆದರೆ ಇಂದು ಮಹಿಳೆ ಕುಟುಂಬ ನಿರ್ವಹಣೆಯ ಆದ್ಯತೆಯ ಜತೆಗೆ ಕಚೇರಿ ಕೆಲಸಗಳನ್ನೂ ನಾಜೂಕಾಗಿ ನಿಭಾಯಿಸುವ ಚಾಕಚಕ್ಯತೆ ಮೆರೆದಿದ್ದಾಳೆ. ಸಾಮಾಜಿಕ, ಧಾರ್ಮಿಕ, ರಾಜಕೀಯ ಮತ್ತು ಆರ್ಥಿಕವಾಗಿ ಮಹಿಳೆ ಸಬಲಳಾಗುತ್ತಿದ್ದಾಳೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳು ಸಾಕ್ಷಿಯಾಗಿವೆ. ಬುದ್ಧಿವಂತಿಕೆ, ಪರಿಶ್ರಮ, ಕ್ರೀಯಾಶೀಲ ಗುಣದಿಂದ ಜೀವನದ ಪ್ರತಿಯೊಂದು ಸಮಸ್ಯೆಯನ್ನೂ ಪರಿಹರಿಸಿಕೊಳ್ಳುವ ಶಕ್ತಿ ತನ್ನಲ್ಲೂ ಇದೆ ಎಂದು ಮಹಿಳೆ ತೋರಿಸಿಕೊಟ್ಟಿದ್ದಾಳೆ. ಜತೆಗೆ ವೃತ್ತಿ, ಸಂಸಾರ, ಸಂಘಟನೆ, ನಾಯಕತ್ವ ಹೀಗೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಬಲ್ಲೆ ಎಂದು ತೋರಿಸಿಕೊಟ್ಟಿದ್ದಾಳೆ.
ಮಹಿಳೆಯರು ಭಯಮುಕ್ತ ಬದುಕಿಗೆ ಪಣತೊಡಬೇಕಿದೆ. ಬಟ್ಟೆಬರೆ, ಸೌಂದರ್ಯದಿಂದ ಜೀವನ ಬದಲಾಯಿಸಲಾಗದು. ಅದು ಮನೋಸ್ಥೈರ್ಯ ಮತ್ತು ವಿಶ್ವಾಸದಿಂದ ಮಾತ್ರ ಸಾಧ್ಯ. ಹಾಗಾಗಿ ಕಾಲಕ್ಕೆ ತಕ್ಕಂತೆ ಬದಲಾಗಿ, ಆಧುನಿಕತೆ, ಸಂಪ್ರದಾಯ ಗಳನ್ನು ರೂಢಿಸಿಕೊಂಡು ಮುನ್ನಡೆದಾಗ ಬದುಕಿನಲ್ಲಿ ನೆಮ್ಮದಿಯನ್ನು ಕಾಣಬಹುದು. ಅಲ್ಲದೆ ಸಶಕ್ತ ಸ್ತ್ರೀ ಸಮಾಜ ನಿರ್ಮಾಣ ಸಾಧ್ಯ.
Related Articles
ಮಹಿಳೆಯರು ಆತ್ಮವಿಶ್ವಾಸ ತಮ್ಮ ಬಳಿ ಇರುವ ಅತ್ಯಮೂಲ್ಯ ಆಸ್ತಿ ಎಂದು ತಿಳಿದು ಅದನ್ನು ರಕ್ಷಿಸುತ್ತಾ, ಪೋಷಿಸುತ್ತಾ, ಸದ್ಬಳಕೆ ಮಾಡಿದರೆ ಅದು ಅವರನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ. ಅದಕ್ಕಾಗಿ ಸ್ತ್ರೀಯರು ಸಕಾರಾತ್ಮಕ ಗುಣ ಬೆಳೆಸಿಕೊಳ್ಳುವುದು ಪೂರಕ. ಧನಾತ್ಮಕ ಚಿಂತನೆಯುಳ್ಳವರು ಸದಾ ತನ್ನ ಗುರಿಯತ್ತ ಪ್ರಯತ್ನ ಶೀಲರಾಗಿ ರುತ್ತಾರೆ. ಇದರಿಂದ ಅಂತಹವರು ಬಹಳ ಬೇಗನೆ ಯಶಸ್ಸು ಸಾಧಿಸಬಲ್ಲರು.
Advertisement
ಗಣೇಶ ಕುಳಮರ್ವ