ಮುಂಬೈ: ಹೆಣ್ಣು ಪದವೀಧರೆಯಾಗಿದ್ದಾಳೆ ಎನ್ನುವ ಕಾರಣಕ್ಕೆ ಅವಳಿಗೆ ಕೆಲಸಕ್ಕೆ ಹೋಗಲು ಒತ್ತಾಯಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ಅಭಿಪ್ರಾಯ ವ್ಯಕ್ತಪಡಿಸಿದೆ.
2010ರಲ್ಲಿ ಮದುವೆಯಾಗಿ, 2013ರಲ್ಲಿ ಗಂಡನಿಂದ ದೂರವಾದ ಪತ್ನಿಯೊಬ್ಬಳು, ಗಂಡನಿಂದ ಜೀವನವೆಚ್ಚ ಕೊಡಿಸುವಂತೆ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿದ್ದಳು. ನ್ಯಾಯಾಲಯವು ಪತ್ನಿಗೆ ತಿಂಗಳಿಗೆ 5000 ರೂ. ಹಾಗೂ ಮಗಳಿಗೆ 7000 ರೂ. ಕೊಡುವಂತೆ ಪತಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಆತ ಹೈಕೋರ್ಟ್ ಮೆಟ್ಟಿಲೇರಿದ್ದು, ಶುಕ್ರವಾರ ಅದರ ವಿಚಾರಣೆ ನಡೆಸಿದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
“ಕುಟುಂಬದ ಆರ್ಥಿಕತೆಗೆ ಹೆಣ್ಣು ಪಾಲು ಕೊಡಬೇಕು ಎನ್ನುವುದನ್ನು ನಮ್ಮ ಸಮಾಜ ಇನ್ನೂ ಒಪ್ಪಿಲ್ಲ. ಆಕೆ ಕೆಲಸಕ್ಕೆ ಅರ್ಹಳು ಎನ್ನುವ ಒಂದೇ ಕಾರಣಕ್ಕೆ ಅವಳನ್ನು ಕೆಲಸಕ್ಕೆ ಹೋಗುವಂತೆ ಒತ್ತಾಯಿಸಲಾಗದು. ಅದು ಅವಳ ಆಯ್ಕೆಯಾಗಿರುತ್ತದೆ’ ಎಂದು ನ್ಯಾಯಮೂರ್ತಿ ಭಾರತಿ ದಾಂಗ್ರೆ ತಿಳಿಸಿದ್ದಾರೆ.
ಅರ್ಜಿಯ ಬಗ್ಗೆ ಪ್ರತಿಕ್ರಿಯಿಸಲು ಮಹಿಳೆಯ ಪರ ವಕೀಲರು ಕಾಲಾವಕಾಶ ಕೇಳಿದ್ದು, ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ.