ಲಕ್ನೋ: ಬಿಜೆಪಿಯನ್ನು ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಲೇಬೇಕೆಂದು ಪಣ ತೊಟ್ಟಿದ್ದರೂ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಬಿರುಕು ಮೂಡತೊಡಗಿದ್ದು, ಮೈತ್ರಿಕೂಟ ತೂಗುಯ್ನಾಲೆಯಲ್ಲಿದೆ.
ಮುಖ್ಯಮಂತ್ರಿ, ಎಸ್‌ಪಿ ಅಧ್ಯಕ್ಷ ಅಖೀಲೇಶ್ ಯಾದವ್ ಶುಕ್ರವಾರ ಕಾಂಗ್ರೆಸ್ಸಿಗೆ ಒಂದು ಮಾತೂ ಹೇಳದೇ 191 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದಾರೆ. ಇದರಲ್ಲಿ 9 ಹಾಲಿ ಕಾಂಗ್ರೆಸ್ ಶಾಸಕರ ಸ್ಥಾನಗಳೂ ಸೇರಿವೆ. ಇನ್ನು ಗಾಂಧಿ ಕಟುಂಬದ ಭದ್ರಕೋಟೆಯಾದ ಅಮೇಠಿಯಲ್ಲೂ ಎಸ್‌ಪಿ ಅಭ್ಯರ್ಥಿ ಕಣಕ್ಕಿಳಿಯುತ್ತಿದ್ದಾರೆ. ಇದು ಕಾಂಗ್ರೆಸ್‌ನಲ್ಲಿ ಅಸಮಾಧಾನ ಸೃಷ್ಟಿಸಿದೆ.
“403 ಸ್ಥಾನಗಳಲ್ಲಿ ಕಾಂಗ್ರೆಸ್‌ಗೆ ನಾವು 85 ಸ್ಥಾನಗಳನ್ನು ಬಿಟ್ಟುಕೊಡಲು ಸಿದ್ಧರಿದ್ದೇವೆ. ಆದರೆ ಇಲ್ಲಿಯವರೆಗೆ ಕಾಂಗ್ರೆಸ್‌ನಿಂದ ಸಕಾರಾತ್ಮಕ ಸ್ಪಂದನೆಗಳು ಲಭಿಸಿಲ್ಲ’ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಕಿರಣ್ಮಯ್ ನಂದಾ ಹೇಳಿದ್ದಾರೆ. ಕಾಂಗ್ರೆಸ್ ಸುಮಾರು 100 ಸ್ಥಾನಗಳಿಗೆ ಲಾಬಿ ನಡೆಸುತ್ತಿದ್ದು, 15 ಕಮ್ಮಿ ಸ್ಥಾನಗಳು ದೊರಕಿರುವುದು ಅಸಮಾಧಾನ ಸೃಷ್ಟಿಸಿದೆ.
“ಕಾಂಗ್ರೆಸ್‌ಗೆ ಬಿಜೆಪಿಯನ್ನು ಸೋಲಿಸಲೇಬೇಕೆಂಬ ಆಸಕ್ತಿಯಿದ್ದರೆ ಅದು ನಮ್ಮ ಸ್ಥಾನ ಹಂಚಿಕೆಯ ಸೂತ್ರವನ್ನು ಪಾಲಿಸಬೇಕು. ಸಮಾಜವಾದಿ ಪಕ್ಷ ಎಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ಎಲ್ಲಿ ಮೂರು, ನಾಲ್ಕು, ಐದನೆ ಸ್ಥಾನದಲ್ಲಿದೆ ಎಂಬುದನ್ನು ಗಮನಿಸಿ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ಇದನ್ನು ಪರಿಗಣಿಸಿ ಕಾಂಗ್ರೆಸ್‌ಗೆ 54 ಸ್ಥಾನ ನೀಡಲು ನಾವು ಸಿದ್ಧ. ಕಾಂಗ್ರೆಸ್ ಬಹಳ ಗಂಭೀರವಾಗಿ ಮಾತುಕತೆ ನಡೆಸಿದರೆ ಇನ್ನೂ 25ರಿಂದ 30 ಹೆಚ್ಚಿನ ಸ್ಥಾನಗಳನ್ನು ನೀಡಲು ಸಿದ್ಧರಿದ್ದೇವೆ’ ಎಂದು ಕಿರಣ್ಮಯ್ ನಂದಾ ತಿಳಿಸಿದ್ದಾರೆ.
ರಾಹುಲ್-ಪ್ರಿಯಾಂಕಾ ಸಭೆ: ಸಮಾಜವಾದಿ ಪಕ್ಷ ಕೈಕೊಡುವ ಲಕ್ಷಣ ಕಾಣುತ್ತಿರುವ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸಭೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖಂಡ ಅಜಯ್ ಮಾಕನ್, “9 ಹಾಲಿ ಕಾಂಗ್ರೆಸ್ ಶಾಸಕರ ಕ್ಷೇತ್ರದಲ್ಲಿ ಎಸ್‌ಪಿ ಅಭ್ಯರ್ಥಿ ಘೋಷಣೆ ನೋವು ತಂದಿದೆ’ ಎಂದರು.