Advertisement

ಅವ್ಯವಸ್ಥೆಗೆ ಸಾಕ್ಷಿಯಾದ ಜಂಬೂಸವಾರಿ ಮೆರವಣಿಗೆ

11:44 AM Oct 20, 2018 | Team Udayavani |

ಮೈಸೂರು: ಎಲ್ಲೆಂದರಲ್ಲಿ ಹೋಗುತ್ತಿದ್ದ ಕಲಾತಂಡಗಳು… ಜನರ ನಡುವೆಯೇ ಸಿಲುಕಿದ ಸ್ತಬ್ಧಚಿತ್ರಗಳು… ಮೆರವಣಿಗೆ ದಾರಿಯಲ್ಲಿ ಗೊತ್ತುಗುರಿ ಇಲ್ಲದೆ ಅಡ್ಡಾಡುತ್ತಿದ್ದ ನೂರಾರು ಮಂದಿ ಅಪರಿಚಿತರು… ಫೋಟೋ, ವೀಡಿಯೋ ತೆಗೆಯುವುದರಲ್ಲಿ ತಲ್ಲೀನರಾಗಿದ್ದ ಪೊಲೀಸರು. ಇಂತಹ ಹಲವು ಅವ್ಯವಸ್ಥೆಗಳಿಗೆ ಈ ಬಾರಿಯ ಜಂಬೂಸವಾರಿ ಮೆರವಣಿಗೆ ಸಾಕ್ಷಿಯಾಯಿತು. 

Advertisement

ನಾಡಿನ ಕಲೆ, ಸಂಸ್ಕೃತಿಗೆ ಸಾಕ್ಷಿಯಾಗುತ್ತಿದ್ದ ವಿಶ್ವವಿಖ್ಯಾತ ದಸರಾ ಜಂಬೂಸವಾರಿ ಮೆರವಣಿಗೆ ಈ ಬಾರಿ ಅವ್ಯವಸ್ಥೆಯ ಆಗರವಾಗುವ ಜತೆಗೆ ಭಾರೀ ಭದ್ರತಾ ಲೋಪ ಕಂಡುಬಂತು. ಪ್ರತಿವರ್ಷ ಪೊಲೀಸ್‌ ಸರ್ಪಗಾವಲಿನಲ್ಲಿ ಸಾಗುತ್ತಿದ್ದ ಮೆರವಣಿಗೆಯಲ್ಲಿ ಪೊಲೀಸರಿಗಿಂತ ಅನಗತ್ಯವಾಗಿ ಓಡಾಡುತ್ತಿದ್ದವರೇ ಹೆಚ್ಚಾಗಿ ಕಾಣಿಸಿಕೊಂಡರು.

ಅದರಲ್ಲೂ ಚಿನ್ನದ ಅಂಬಾರಿ ಹೊತ್ತು ಸಾಗಿದ ಅರ್ಜುನನ ಸುತ್ತಮುತ್ತಲೂ ನೂರಾರು ಮಂದಿ ಅಪರಿಚಿತರುನಿರಾಯಾಸವಾಗಿ ಹೆಜ್ಜೆ ಹಾಕಿದರು. ಅಂಬಾರಿ ಹೊತ್ತ ಅರ್ಜುನ ಅರಮನೆಯಿಂದ ಹೊರಬರುತ್ತಿದ್ದಂತೆ ಕರ್ತವ್ಯದಲ್ಲಿದ್ದ ಅಧಿಕಾರಿಗಳು, ಪೊಲೀಸರು, ಮಾಧ್ಯಮದವರ ಹೊರತಾಗಿಯೂ ಅನೇಕರು ಅಂಬಾರಿಯೊಂದಿಗೆ ಕಾಣಿಸಿಕೊಂಡರು. 

ಮೊದಲೇ ಬಂದ ಅಂಬಾರಿ: ಪ್ರತಿಬಾರಿ ಜಂಬೂಸವಾರಿಯಲ್ಲಿ ಕಲಾತಂಡಗಳು, ಸ್ತಬ್ಧಚಿತ್ರಗಳು ಸಾಗಿದ ನಂತರ ಮೆರವಣಿಗೆಯ ಕೊನೆಯಲ್ಲಿ ಅಂಬಾರಿ ಹೊತ್ತ ಅರ್ಜುನ ಕಾಣಿಸಿಕೊಳ್ಳುತ್ತಿದ್ದ. ಆದರೆ ಈ ಬಾರಿ ಅಂಬಾರಿ ಹೊತ್ತ ಅರ್ಜುನ ಆನೆ ಮೆರವಣಿಗೆಯ ಅರ್ಧದಲ್ಲೇ ಸ್ತಬ್ಧಚಿತ್ರ, ಕಲಾತಂಡಗಳ ನಡುವೆಯೇ ಕಾಣಿಸಿಕೊಂಡಿದ್ದು ಎಲ್ಲರ ಅಚ್ಚರಿಗೆ ಕಾರಣವಾಯಿತು.

ಅಲ್ಲದೇ ಇಡೀ ಮೆರವಣಿಗೆಯಲ್ಲಿ ಅವ್ಯವಸ್ಥೆ ಕಾಣಿಸಿಕೊಳ್ಳಲು ಇದು ಪ್ರಮುಖ ಕಾರಣವಾಯಿತು. ಮೆರವಣಿಗೆಗೆ ಚಾಲನೆ ದೊರೆತು 24 ಸ್ತಬ್ಧಚಿತ್ರ 24 ಕಲಾತಂಡಗಳು ಸಾಗುತ್ತಿದ್ದಂತೆ ಸಮಯದ ಅಭಾವದಿಂದ ಮಧ್ಯದಲ್ಲೇ ಅಂಬಾರಿ ಆನೆ ಅರಮನೆಯಿಂದ ಹೊರಟಿತು. ಇದರಿಂದಾಗಿ ಅರಮನೆಯಲ್ಲಿ ಜಮಾಯಿಸಿದ್ದ ನೂರಾರು ಮಂದಿ ಅಂಬಾರಿ ಆನೆಯೊಂದಿಗೆ ಅರಮನೆಯಿಂದ ಹೊರಬಂದರಲ್ಲದೇ, ಮೆರವಣಿಗೆಯುದ್ದಕ್ಕೂ ಮನಬಂದಂತೆ ಅಡ್ಡಾಡುತ್ತಿದ್ದರು. 

Advertisement

ಸುಮ್ಮನಾದ ಕಲಾವಿದರು: ಅಧಿಕಾರಿಗಳ ಎಡವಟ್ಟಿನಿಂದಾಗಿ ಮೆರವಣಿಗೆಯಲ್ಲಿ ಉಂಟಾದ ಅವ್ಯವಸ್ಥೆಯಿಂದಾಗಿ ಮೆರವಣಿಗೆಯಲ್ಲಿ ಸಾಗಿದ ಕಲಾವಿದರು ನಿರುತ್ಸಾಹದಿಂದ ಹೆಜ್ಜೆಹಾಕಿದರು. ಮೆರವಣಿಗೆಯ ಆರಂಭದಲ್ಲಿ ಹೊರಟಿದ್ದ ಸಾಕಷ್ಟು ಕಲಾತಂಡಗಳು, ಸ್ತಬ್ಧಚಿತ್ರಗಳು ಆಯುರ್ವೇದ ವೃತ್ತದಿಂದ ಕೂಗಳತೆ ದೂರದಲ್ಲಿ ಸಾಗುತ್ತಿದ್ದಂತೆ ಅಂಬಾರಿ ಹೊತ್ತ ಅರ್ಜುನ ಆಯುರ್ವೇದ ವೃತ್ತ ತಲುಪಿದ್ದ.

ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು, ಅಧಿಕಾರಿಗಳು ಕಲಾತಂಡಗಳು ಮತ್ತು ಸ್ತಬ್ಧಚಿತ್ರಗಳಿಗೆ ವೇಗವಾಗಿ ಚಲಿಸುವಂತೆ ಸೂಚಿಸಿದರು. ಇದರಿಂದಾಗಿ ಕಲಾವಿದರು ಯಾವುದೇ ಪ್ರದರ್ಶನ ನೀಡದೆ, ತರಾತುರಿಯಲ್ಲಿ ಬನ್ನಿಮಂಟಪದ ಸಾಗಿದರು. ಇನ್ನು ಕೆಲವೊಂದು ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗುತ್ತಿದ್ದ ವೇಳೆ ಆಗಮಿಸಿದ ಅಂಬಾರಿ ಆನೆ, ಸ್ತಬ್ಧ ಚಿತ್ರಗಳ ನಡುವೆಯೇ ಸಾಗಿತು.

ಮೈಮರೆತ ಪೊಲೀಸರು: ಚಿನ್ನದ ಅಂಬಾರಿ ಹೊತ್ತ ಅರ್ಜುನ ಮೆರವಣಿಗೆಯಲ್ಲಿ ಆಗಮಿಸುತ್ತಿದ್ದಂತೆ ನೂರಾರು ಮಂದಿ ರಸ್ತೆಗಿಳಿದು ಮನಬಂದಂತೆ ಅಡ್ಡಾಡುತ್ತಿದ್ದರು. ಅತ್ಯಂತ ಭದ್ರತೆಯಲ್ಲಿ ಸಾಗಬೇಕಿದ್ದ ಮೆರವಣಿಗೆಯಲ್ಲಿ ಇಷೆಲ್ಲಾ ಅವ್ಯವಸ್ಥೆ ಕಂಡುಬಂದರೂ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ

ಪೊಲೀಸರು ತಮಗೂ ಇದಕ್ಕೂ ಸಂಬಂಧವಿಲ್ಲದಂತೆ ತಮ್ಮಷ್ಟಕ್ಕೆ ಮೆರವಣಿಗೆ ವೀಕ್ಷಿಸುತ್ತಾ, ಮೊಬೈಲ್‌ ಫೋನಿನಲ್ಲಿ ಫೋಟೋ, ವಿಡಿಯೋ ತೆಗೆಯುವುದರಲ್ಲಿ ನಿರತರಾಗಿದ್ದರು. ಇನ್ನೂ ಇಡೀ ಜಂಬೂಸವಾರಿ ಮೆರವಣಿಗೆಯಲ್ಲಿ ಕಾಣಿಸಿದ ಅವ್ಯವಸ್ಥೆಯಿಂದಾಗಿ ಜಂಬೂಸವಾರಿ ವೀಕ್ಷಿಸಲು ಗಂಟೆಗಟ್ಟಲೆ ಕಾದುಕುಳಿದ್ದ ಸಾರ್ವಜನಿಕರು ಅಸಮಾಧಾನಗೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next