ಮೈಸೂರು: ರಾಜ್ಯ ಸರ್ಕಾರ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಡಿ.ಕೆ. ಶಿವಕುಮಾರ್ ವಿರುದ್ಧದ ಕೇಸ್ ತನಿಖೆ ವಾಪಸ್ ತೆಗೆದುಕೊಂಡಿರುವುದು, ಅದನ್ನು ಸಮರ್ಥಿಸಿಕೊಳ್ಳುವುದು ಸರಿಯಲ್ಲ. ಅಧಿಕಾರಕ್ಕೆ ಬಂದ ಮೇಲೆ ತಮ್ಮ ಮೇಲಿನ ಮೊಕದ್ದಮೆ ವಾಪಸ್ ಪಡೆದರೆ ಹೇಗೆ? ಬಲಾಡ್ಯವಿದ್ದರೆ ಏನೇ ಮಾಡಿದರೂ ಮಾಫಿ ಎಂದಾಗುತ್ತದೆ. ಇದಕ್ಕೆ ಸಿದ್ದರಾಮಯ್ಯ ಒಪ್ಪಿದ್ದು ಸರಿಯಲ್ಲ. ಒಪ್ಪಿಗೆ ನೀಡಿದ್ದು ಅವರ ರಾಜಕೀಯ ಜೀವನದ ಕರಾಳ ಅಧ್ಯಾಯ. ನಿಮ್ಮ ಮೇಲೆ ದೆಹಲಿ ನಾಯಕರ ರಾಜಕೀಯ ಒತ್ತಡ ಇರಬಹುದು. ಆದರೆ ನೀವು ತೆಗೆದುಕೊಂಡ ತೀರ್ಮಾನ ದುರದೃಷ್ಟಕರ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ರಾಜ್ಯ ಶಿಕ್ಷಣ ನೀತಿ ಹೆಸರಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಜತೆ ಆಟವಾಡುತ್ತಿದೆ. ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಲಕ್ಷಾಂತರ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಕೌಶಲ್ಯದ ತರಬೇತಿ ಮೂಲಕ ಸ್ವಾವಲಂಬನೆಯ ಚಿಂತನೆಯಡಿ ಎನ್‌ಇಪಿ ರೂಪಿಸಲಾಗಿದೆ. ಪ್ರಾಥಮಿಕ ಶಿಕ್ಷಣ ಮಾತೃ, ಪ್ರಾದೇಶಿಕ ಭಾಷೆಯಲ್ಲಿ ಇರಬೇಕು ಎಂಬ ಅಂಶವನ್ನು ಸೇರಿಸಲಾಗಿದೆ ಎಂದರು.
ಕರ್ನಾಟಕ ತಮಿಳು, ತೆಲಗು, ಮಲಯಾಳ ನಡುವೆ ಜಗಳ ಇಲ್ಲದಂತೆ ಎನ್‌ಇಪಿ ರೂಪಿಸಲಾಗಿದೆ. ಯಾವ ಅಂಶದ ಆಧಾರದ ಮೇಲೆ ರಾಜ್ಯ ಸರ್ಕಾರ ಎನ್‌ಇಪಿ ವಿರೋಧ ಮಾಡುತ್ತಿದೆ? ನರೇಂದ್ರ ಮೋದಿ ಜಾರಿಗೊಳಿಸಿದ್ದಾರೆ ಅನ್ನುವ ಕಾರಣಕ್ಕೆ ವಿರೋಧ ಮಾಡುತ್ತಿದ್ದೀರೆ ಎಂದು ಪ್ರಶ್ನಿಸಿದರು.
ಕಾಂತರಾಜ್ ವರದಿ ಜಾರಿ ವಿಚಾರದಲ್ಲಿ ಕೆರೆ ಕಲಕಿ ಮೀನು ಹಿಡಿಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಇದರಲ್ಲಿ ಕಾಂಗ್ರೆಸ್ ನಡೆ ಅನುಮಾನ ಮೂಡಿಸುತ್ತಿದೆ. 2014 ರಲ್ಲಿ ಕಾಂಗ್ರೆಸ್ ಸರ್ಕಾರವೇ ಕಾಂತರಾಜ್ ಸಮಿತಿ ನೇಮಕ ಮಾಡಿತ್ತು. 3 ವರ್ಷಗಳಲ್ಲಿ ವರದಿ ಸಿದ್ದವಾಗಿತ್ತು, ಆದರೂ ಜಾರಿಯಾಗುತ್ತಿಲ್ಲ. ಇವರಿಗೆ ವರದಿ ಜಾರಿ ಮಾಡುವ ಉದ್ದೇಶವೇ ಕಾಣುತ್ತಿಲ್ಲ. ಇದನ್ನು ಮುಂದಿಟ್ಟುಕೊಂಡು ಜಾತಿ ಜಾತಿ ನಡುವೆ ಕಲಹ ತರುವ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಜಾತಿ, ಜಾತಿ ಕಲಕಿ ಮತ ಎಂಬ ಮೀನನ್ನು ಪಡೆಯುವ ಕೆಲಸ ಮಾಡುತ್ತಿದೆ. ಜನ ಹಿಂದೂ ಎಂದರೆ ಬಿಜೆಪಿಗೆ ಮತ ಹಾಕಿಬಿಡುತ್ತಾರೆ. ಹಾಗಾಗಿ ನಿಮ್ಮ ಜಾತಿಗೆ ಅನ್ಯಾಯ ಆಗುತ್ತದೆಂದು ಬಿಂಬಿಸಿ ಮತ ಪಡೆಯಲು ಹೊರಟಿದ್ದಾರೆ. ಹೀಗಾಗಿಯೇ ಅವರಲ್ಲೇ ಒಬ್ಬೊಬ್ಬರು ಒಂದು ಮಾತಾಡುತ್ತಿದ್ದಾರೆ ಎಂದು ಸಿ.ಟಿ ರವಿ ಹೇಳಿದ್ದಾರೆ.