ಮಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ನಾಗ ಸಾನ್ನಿಧ್ಯದ ಕ್ಷೇತ್ರ ಪುಣ್ಯಭೂಮಿ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಸುಮಾರು 4 ಕೋ. ರೂ. ವೆಚ್ಚದಲ್ಲಿ ಶಿಲಾಮಯ ಅದಿಷ್ಠಾನ ಹಾಗೂ ಸ್ತಂಭಗಳ ಮುಖೇನ ಕೆಂಪು ಕಲ್ಲಿನ ವಿಶೇಷ ಕೆತ್ತನೆಯ ಗೋಡೆಯೊಂದಿಗೆ ಸುತ್ತುಪೌಳಿ ನಿರ್ಮಾಣ ನಡೆಯು ತ್ತಿದೆ. ದಾರು ಶಿಲ್ಪಗಳನ್ನು ಹೊಂದಿರುವ ಮರದ ಮೇಲ್ಛಾವಣಿ ಜತೆಗೆ ದೇವಸ್ಥಾನದ ಸುತ್ತಲೂ ತಾಮ್ರದ ಮುಚ್ಚಿಗೆ ಯೊಂದಿಗೆ ವಿಶೇಷ ವಿನ್ಯಾಸದ ಸುತ್ತು ಪೌಳಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ಮುಂದಿನ ವರ್ಷದ ಫೆ. 18ರಿಂದ 25ರ ವರೆಗೆ ಶ್ರೀ ಕ್ಷೇತ್ರದಲ್ಲಿ ವೈಭವದ ಬ್ರಹ್ಮಕಲಶೋತ್ಸವ ನಡೆಸಲು ತೀರ್ಮಾನಿಸಿದ್ದು, ಸುತ್ತುಪೌಳಿ ಮತ್ತು ಪೂರ್ವ ದಿಕ್ಕಿನ ಗೋಪುರ ನಿರ್ಮಾಣ ಹಾಗೂ ಇತರ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಅಗ್ರಸಭಾ ಅಥವಾ ಎದುರು ಗೋಪುರದ ಮೇಲಿನ ಅಂತಸ್ತಿನಲ್ಲಿ ತಿರುವಾಂಕೂರು ಶೈಲಿಯ ಕುದುರೆ ಮಾಳಿಗೆಯನ್ನು ಹೋಲುವ ದಾರುಶಿಲ್ಪ ವಿನ್ಯಾಸ ಕುಡುಪು ಕ್ಷೇತ್ರದಲ್ಲಿ ವಿಶೇಷವಾಗಿ ಮೂಡಿಬರಲಿದೆ. ಇದು ರಾಜ್ಯದಲ್ಲಿಯೇ ಅಪರೂಪದ್ದಾಗಿದ್ದು, ಕೇರಳ ಹಾಗೂ ಇತರ ಭಾಗಗಳಿಂದ ಆಗಮಿಸಿರುವ ಕಾಷ್ಠ ಶಿಲ್ಪಿಗಳು ಕಳೆದ ಹಲವು ತಿಂಗಳುಗಳಿಂದ ಇದರ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದಾರೆ.
ಕ್ಷೇತ್ರದಲ್ಲಿ ಒಟ್ಟು ಸುಮಾರು 8 ಕೋ.ರೂ. ವೆಚ್ಚದಲ್ಲಿ ಜೀರ್ಣೋದ್ಧಾರದ ಮಹಾಕಾರ್ಯ ಕೈಗೆತ್ತಿಕೊಳ್ಳಲಾಗಿದೆ. 2 ಕೋ.ರೂ. ವೆಚ್ಚದಲ್ಲಿ ಶಿಲಾಮಯ ಮತ್ತು ಕಾಷ್ಠ ಶಿಲ್ಪ- ಕೆತ್ತನೆಯನ್ನೊಳ ಗೊಂಡ ವಿನೂತನ ಗರ್ಭಗುಡಿ ಹಾಗೂ 75 ಲಕ್ಷ ರೂ. ವೆಚ್ಚದಲ್ಲಿ ರಾಜ್ಯದಲ್ಲಿಯೇ ಅಪರೂಪದ ಭೂಪುರ ಆಕೃತಿಯ ಭದ್ರಾಸರಸ್ವತಿ ತೀರ್ಥ ಸರೋವರ, 50 ಲಕ್ಷ ರೂ. ವೆಚ್ಚದಲ್ಲಿ ಕ್ಷೇತ್ರದ ಆರಾಧ್ಯ ದೈವಗಳಿಗೆ ನೂತನ ದೈವಸ್ಥಾನ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ.
ತುಳುನಾಡಿನ ಶಿಲ್ಪಕಲೆಯ ದೃಷ್ಟಿಯಿಂದ ಮಹತ್ವದ ಮೈಲುಗಲ್ಲಾಗಿ ಕುಡುಪು ಕ್ಷೇತ್ರ ನಿರ್ಮಾಣ ಗೊಳ್ಳುತ್ತಿದೆ. ಕ್ಷೇತ್ರದ ನೂತನ ಗರ್ಭಗುಡಿಯ ದಾರುಶಿಲ್ಪ ವೈಭವ ಗಮನಾರ್ಹವಾಗಿದೆ. ಕಲಶ ಬಂಧ ಅಧಿಷ್ಠಾನದ ಮೇಲೆ ಮರದ ದೀಪಾಗಾರದ ಅಡಿಪಾಯದ ಮರದ ಹಲಗೆ ಯಲ್ಲಿ 36ಕ್ಕೂ ಮಿಕ್ಕಿ ಯಕ್ಷಮೂರ್ತಿಗಳಿವೆ. ಸಾಗು ವಾನಿ ಮರದಿಂದ ನಿರ್ಮಿತ ದೀಪಾಗಾರದಲ್ಲಿ ಪ್ರಧಾನವಾಗಿ 4 ಮೂಲೆಗಳ ಕಂಬವಿದ್ದು, ಸೂಕ್ಷ್ಮ ರೀತಿಯ ಕೆತ್ತನೆಗಳು ಗಮನಸೆಳೆಯುತ್ತಿವೆ. ದೀಪಾಗಾರದಲ್ಲಿ ಒಟ್ಟು 4 ಬಗೆಯ ಅಡ್ಡಸಾಲಿನ ಪಟ್ಟಿಗಳಿದ್ದು, ಮೇಲಿನ ಪಟ್ಟಿಯಲ್ಲಿ ಪವಿತ್ರ ಗಂಟಿನ ರಚನೆ, ನಡುವಣ 2 ಪಟ್ಟಿಗಳಲ್ಲಿ ಹೂವಿನ ಬಳ್ಳಿ ಹಾಗೂ ಹೆಡೆ ಬಿಚ್ಚಿದ ನಾಗನ ರಚನೆ ಹಾಗೂ ಕೆಳಪಟ್ಟಿಯಲ್ಲಿ ಹೊಯ್ಸಳ ಶೈಲಿಯ ಬಳ್ಳಿಯ ರಚನೆ ಮೂಡಿಬಂದಿದೆ.
ನಾಲ್ಕು ಪಟ್ಟಿಗಳ ಮಧ್ಯೆ ಆಯತಾಕಾರದ ಸಾಗುವಾನಿ ಹಲಗೆಗಳಿವೆ. ದಾರುಶಿಲ್ಪಿ ಉದುಮ ಪುಷ್ಪರಾಜ ಆಚಾರ್ಯ ಮತ್ತು ತಂಡದಿಂದ ದಾರುಶಿಲ್ಪ- ಕೆತ್ತನೆ ಸೂಕ್ಷ್ಮವಾಗಿ ಮೂಡಿಬಂದಿದೆ. ಮಧ್ಯದ ಆಯತಾಕಾರದ ಹಲಗೆಯಲ್ಲಿ ವಿಷ್ಣುವಿನ ದಶಾವತಾರದ ಕೆತ್ತನೆ, ಶಿವನ ವಿವಿಧ ರೂಪಗಳು, ಸುಬ್ರಹ್ಮಣ್ಯನ ವಿವಿಧ ರೂಪಗಳು ಸೇರಿದಂತೆ 16 ಪವಿತ್ರ ನಾಗಮಂಡಲ ರಚನೆಗಳಿವೆ. ಮಧ್ಯದ 2ನೇ ಸಾಲಿನ ಆಯತಾಕಾರದ ಹಲಗೆಯಲ್ಲಿ ಕುಡುಪು ಕ್ಷೇತ್ರದ ಸ್ಥಳಪುರಾಣ ಕಥೆಯ 54 ಸನ್ನಿವೇಶಗಳ ಕೆತ್ತನೆ ಗಮನಸೆಳೆಯುತ್ತಿದೆ. ತಳಭಾಗದ ಆಯತಾಕಾರದ ಹಲಗೆಯಲ್ಲಿ ಶ್ರೀ ದೇವರ ಅಷ್ಟೋತ್ತರ (108) ಶತನಾಮಗಳನ್ನು ಬೆಳ್ಳಿಯ ಅಕ್ಷರಗಳಲ್ಲಿ ಮೂಡಿಸಿ ಜೋಡಿಸಲಾಗಿದೆ. ಇದೂ ಜಿಲ್ಲೆಯ ದೇವಾಲಯಗಳ ಪೈಕಿ ಹೊಸತು ಎನ್ನಲಾಗುತ್ತಿದೆ. ಮರದ ವಿಶಿಷ್ಟ ಕೆತ್ತನೆ-ಶಿಲ್ಪ ಒಳಗೊಂಡ ದೇವ ಸ್ಥಾನವಾಗಿ ಶ್ರೀಕ್ಷೇತ್ರ ಕುಡುಪು ಮೂಡಿಬರಲಿದೆ.
ಪ್ರಧಾನ ದೇವರ ಶಿಲಾಮಯ ಗರ್ಭಗುಡಿಯ ನಿರ್ಮಾಣ ಹಂತದಲ್ಲಿ ಸಿಮೆಂಟ್ ಅಥವಾ ಇನ್ನಿತರ ಯಾವುದೇ ರಾಸಾಯನಿಕ ವಸ್ತುಗಳನ್ನು ಬಳಸದೆ ಪ್ರಾಚೀನ ಸಂಪ್ರದಾಯವನ್ನು ಅನು ಸರಿಸಿ ನಿರ್ಮಾಣ ಮಾಡುತ್ತಿರುವುದು ದಕ್ಷಿಣ ಕನ್ನಡದಲ್ಲಿ ಪ್ರಥಮ ಎಂದೇ ಹೇಳಲಾಗುತ್ತಿದೆ. ಮರದ ಕೆತ್ತನೆಯ ಕೆಲಸಗಳಲ್ಲಿ ಪರಂಪರಾಗತ ಶಿಲ್ಪ ಸಂಪ್ರದಾಯವನ್ನು ಅತ್ಯಂತ ಸ್ಪಷ್ಟವಾಗಿ ಪಾಲಿಸಿಕೊಂಡು ಬರಲಾಗಿದೆ. ಕಬ್ಬಿಣದ ಬೋಲ್ಟ್, ನಟ್ ಅಥವಾ ಮೊಳೆಗಳನ್ನು ಬಳಸಿಲ್ಲ ಎಂದು ಕ್ಷೇತ್ರದ ಪ್ರಮುಖರು ತಿಳಿಸಿದ್ದಾರೆ.
ಮೊದಲ ಬ್ರಹ್ಮಕಲಶೋತ್ಸವ?
ಕುಡುಪು ಶ್ರೀ ಅನಂತಪದ್ಮನಾಭ ದೇವ ಸ್ಥಾನದ ಈ ಹಿಂದಿನ ಚರಿತ್ರೆ ಹಾಗೂ ಇತ್ತೀಚೆಗೆ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದ ಕುರುಹಿನ ಪ್ರಕಾರ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶ ನಡೆದಿಲ್ಲ. ಈ ಬಗ್ಗೆ ಸ್ಪಷ್ಟವಾದ ಉಲ್ಲೇಖವಿಲ್ಲ ಎಂದು ಕ್ಷೇತ್ರದ ಆಡಳಿತ ಮಂಡಳಿ ತಿಳಿಸಿದೆ. ಹೀಗಾಗಿ ಮುಂದಿನ ಫೆಬ್ರವರಿಯಲ್ಲಿ ಶ್ರೀ ಕ್ಷೇತ್ರ ಕಡುಪುವಿನಲ್ಲಿ ನಡೆಯುತ್ತಿರುವುದು ಮೊದಲ ಬ್ರಹ್ಮಕಲಶೋತ್ಸವ ಎಂದು ಕ್ಷೇತ್ರದ ಪ್ರಮುಖರು ತಿಳಿಸಿದ್ದಾರೆ.
ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಕಳೆದ ಹಲವು ತಿಂಗಳುಗಳಿಂದ ತುರುಸಿನಿಂದ ನಡೆಯುತ್ತಿವೆ. ಸಂಪೂರ್ಣವಾಗಿ ನವೀಕರಣಗೊಂಡ ಆಲಯದಲ್ಲಿ ಶ್ರೀ ಅನಂತ ಪದ್ಮನಾಭ ದೇವರಿಗೆ 2018ರ ಫೆ.18ರಿಂದ 25ರವರೆಗೆ ಎಂಟು ದಿನ ಬ್ರಹ್ಮಕಲಶಾಭಿಷೇಕ ನೆರವೇರಲಿದೆ.
ಕುಡುಪು ಕೃಷ್ಣರಾಜ ತಂತ್ರಿ, ವಾಸ್ತುಶಿಲ್ಪಿ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷರು.