Advertisement

ಚಳಿಗಾಲಕ್ಕಾಗಿ ವಿಶೇಷ ಫೇಸ್‌ಪ್ಯಾಕ್‌ಗಳು

03:45 AM Jan 20, 2017 | |

ಚಳಿಗಾಲದಲ್ಲಿ ಅದರಲ್ಲೂ ಚಳಿಗಾಲದ ಕೊನೆಯ ತಿಂಗಳಲ್ಲಿ ಅಧಿಕ ಒಣಹವೆ, ರೂಕ್ಷ ಚರ್ಮದಿಂದಾಗಿ ಮೊಗದ ಅಂದ ಕಳೆಗುಂದುವುದು ಮಾತ್ರವಲ್ಲ ಒಣ ಚರ್ಮದಿಂದಾಗಿ ಗುಳ್ಳೆ , ತುರಿಕೆ, ಚರ್ಮದ ತೊಂದರೆಗಳು ಕಾಣಿಸಿಕೊಳ್ಳುವುದು ಸರ್ವೇಸಾಮಾನ್ಯ.

Advertisement

ನಿತ್ಯ ಬಳಸುವ ಫೇಸ್‌ಪ್ಯಾಕ್‌ಗಳ ಬದಲಾಗಿ ಚಳಿಗಾಲಕ್ಕಾಗಿಯೇ ವಿಶೇಷ ಫೇಸ್‌ಪ್ಯಾಕ್‌ಗಳಿಂದ ಆರೈಕೆ ಮಾಡಿದರೆ ತ್ವಚೆ ಮೃದುವಾಗಿ, ಚರ್ಮದ ತೊಂದರೆಗಳು ನಿವಾರಣೆಯಾಗುತ್ತದೆ. ಜೊತೆಗೆ ಚಳಿಗಾಲದಲ್ಲೂ ಮುಖ ಗುಲಾಬಿ ಹೂವಿನಂತೆ ಮೃದುವಾಗಿ ಹೊಳೆಯುತ್ತಾ ಆಕರ್ಷಣೀಯವಾಗುತ್ತದೆ.

ಹಾಲಿನ ಕೆನೆ-ಜೇನಿನ ಫೇಸ್‌ಪ್ಯಾಕ್‌
2 ಚಮಚ ಹಾಲಿನ ಕೆನೆಗೆ 2 ಚಮಚ ಶುದ್ಧ ಜೇನು ಬೆರೆಸಿ ಚೆನ್ನಾಗಿ ಕಲಕಬೇಕು. ಈ ಮಿಶ್ರಣವನ್ನು ಮುಖಕ್ಕೆ ಲೇಪಿಸಿ 15 ನಿಮಿಷ ಬಿಡಬೇಕು. ತದನಂತರ ತುದಿ ಬೆರಳುಗಳಿಗೆ ಹಾಲು ಲೇಪಿಸಿ ಅದರಿಂದ ಮುಖವನ್ನು ಮೃದುವಾಗಿ ಮಾಲೀಶು ಮಾಡಬೇಕು. ಪುನಃ ಇಡೀ ಮುಖಕ್ಕೆ ಹಾಲಿನಿಂದ ಮಾಲೀಶು ಮಾಡಿದ ನಂತರ, 10 ನಿಮಿಷ ಬಿಟ್ಟು ತಣ್ಣೀರಿನಲ್ಲಿ ಮುಖ ತೊಳೆಯಬೇಕು.

ಇದು ಒಣ ಚರ್ಮವನ್ನು ನಿವಾರಣೆ ಮಾಡುತ್ತದೆ. ಚರ್ಮದಲ್ಲಿ ತೇವಾಂಶ ವೃದ್ಧಿಯಾಗುತ್ತದೆ ಹಾಗೂ ತುರಿಕೆ, ನೆರಿಗೆಗಳು ನಿವಾರಣೆಯಾಗುತ್ತದೆ. ಎಲ್ಲಾ ಚರ್ಮದವರಿಗೂ ಈ ಫೇಸ್‌ಪ್ಯಾಕ್‌ ಸೂಕ್ತ. ಅದರಲ್ಲೂ ಒಣಚರ್ಮ ಹಾಗೂ ಮಧ್ಯಮ ವಿಧದ ಸಹಜ ಚರ್ಮದವರಿಗೆ ಚಳಿಗಾಲದಲ್ಲಿ ಬಹಳ ಉಪಯುಕ್ತವಾಗಿದೆ.

ರೋಸ್‌ವಾಟರ್‌-ಸ್ಟ್ರಾಬೆರಿ ಹಣ್ಣಿನ ಮಾಸ್ಕ್
ಚೆನ್ನಾಗಿ ಕಳಿತ ಮೂರು ಸ್ಟ್ರಾಬೆರಿ ಹಣ್ಣುಗಳನ್ನು ಚೆನ್ನಾಗಿ ಮಸೆದು ತದನಂತರ ಅದಕ್ಕೆ ಶುದ್ಧ ಗುಲಾಬಿ ಜಲ 15-20 ಚಮಚ ಬೆರೆಸಿ ಚೆನ್ನಾಗಿ ಪೇಸ್ಟ್‌ ತಯಾರಿಸಬೇಕು. ಈ ಮಿಶ್ರಣವನ್ನು ಮುಖಕ್ಕೆ ಲೇಪಿಸಿ 1/2 ಗಂಟೆಯ ಬಳಿಕ ತಣ್ಣೀರಿನಲ್ಲಿ ತೊಳೆದರೆ ಮುಖ ತಾಜಾ, ಶುಭ್ರವಾಗಿ ಹಾಗೂ ಮೃದುವಾಗಿ ಹೊಳೆಯುತ್ತದೆ.

Advertisement

ಸೌತೆಕಾಯಿ-ಸಕ್ಕರೆಯ ಫೇಸ್‌ಪ್ಯಾಕ್‌
ಚಳಿಗಾಲದ ಸಮಯದಲ್ಲಿ ಬೆಳಿಗ್ಗೆ ಏಳುವಾಗ ಮೊಗವು ಒಣಗಿರುತ್ತದೆ. ಇದರ ನಿವಾರಣೆಗೆ ಈ ಮಾಸ್ಕ್ ಉಪಯುಕ್ತ. 
ಅರ್ಧ ಸೌತೆಕಾಯಿಯನ್ನು ಕತ್ತರಿಸಿ ಅರೆದು ಅದಕ್ಕೆ ಒಂದೂವರೆ ಚಮಚ ಸಕ್ಕರೆ ಬೆರೆಸಬೇಕು. ಈ ಲೇಪವನ್ನು ಹಚ್ಚಿ 1/2 ಗಂಟೆಯ ಬಳಿಕ ತೊಳೆಯಬೇಕು. ಸೌತೆಕಾಯಿಯ ತೇವಾಂಶಜನಕ ಹಾಗೂ ಪೋಷಕಾಂಶಗಳನ್ನು ಮೊಗದ ಚರ್ಮಕ್ಕೆ ಒದಗಿಸಿದರೆ, ಸಕ್ಕರೆಯು ಒಣಗಿದ, ಮೃತ ಚರ್ಮದ ಅಂಶವನ್ನು ನಿವಾರಣೆ ಮಾಡುತ್ತದೆ.ಚಳಿಗಾಲದಲ್ಲಿ ವಾರಕ್ಕೆ 2-3 ಬಾರಿ ಈ ಫೇಸ್‌ಪ್ಯಾಕ್‌ ಬಳಸಿದರೆ ಉಪಯುಕ್ತ.

ಆಲೂಗಡ್ಡೆ ಹಾಗೂ ಮೊಸರಿನ ಫೇಸ್‌ಮಾಸ್ಕ್
ಒಂದು ಸಿಪ್ಪೆ ತೆಗೆದ ಆಲೂಗಡ್ಡೆಯನ್ನು ಕತ್ತರಿಸಿ, ನಯವಾಗಿ ಅರೆಯಬೇಕು. ಅದಕ್ಕೆ ಮೂರು ಚಮಚ ಮೊಸರನ್ನು ಬೆರೆಸಿ ಚೆನ್ನಾಗಿ ಮಿಶ್ರ ಮಾಡಬೇಕು. ಇದನ್ನು ಮುಖಕ್ಕೆ ಲೇಪಿಸಿ ಮೃದುವಾಗಿ ಮಾಲೀಶು ಮಾಡಬೇಕು. 40 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಿಂದ ತೊಳೆದು ತೆಗೆಯಬೇಕು.

ಇದು ಸಹಜ ಚರ್ಮದವರಿಗೂ ಹಾಗೂ ಸ್ನಿಗ್ಧ ವಿಧದ ಚರ್ಮದವರಿಗೂ, ಮೊಡವೆ ಕಲೆ ಹಾಗೂ ಚಳಿಗಾಲದ ಒರಟು ಚರ್ಮದ ಕಳಾಹೀನತೆಯನ್ನು ನಿವಾರಣೆ ಮಾಡಲು ಉಪಯುಕ್ತ. ಚಳಿಗಾಲದಲ್ಲಿ ವಾರಕ್ಕೆ 2-3 ಬಾರಿ ಈ ಫೇಸ್‌ಮಾಸ್ಕ್ ಬಳಸಿದರೆ ಪರಿಣಾಮಕಾರಿ.

ಚಳಿಗಾಲದಲ್ಲಿ ಒಣಗಿದ ಚರ್ಮದ ತುರಿಕೆಯನ್ನು ನಿವಾರಣೆ ಮಾಡುವ ಫೇಸ್‌ಪ್ಯಾಕ್‌ 2 ಚಮಚ ಹಾಲಿನ ಹುಡಿ, 1 ಚಮಚ ಬಾರ್ಲಿ ಹುಡಿ, 3 ಚಮಚ ತುಳಸೀರಸ, 1 ಚಮಚ ಚಂದನದ ಹುಡಿ ಅಥವಾ 2 ಚಮಚ ಗೋಪೀ ಚಂದನದ ಪೇಸ್ಟ್‌ , 2 ಚಮಚ ಮೆಂತ್ಯೆ-ಇವೆಲ್ಲವನ್ನೂ ಚೆನ್ನಾಗಿ ಬೆರೆಸಿ ಕಲಕಬೇಕು. ಮುಖವನ್ನು ತೊಳೆದ ಬಳಿಕ, ಈ ಫೇಸ್‌ಪ್ಯಾಕ್‌ ಹಚ್ಚಿ 20 ನಿಮಿಷ ಬಿಡಬೇಕು. ತದನಂತರ ಬೆಚ್ಚಗೆ ನೀರಿನಲ್ಲಿ ಮುಖ ತೊಳೆದರೆ, ಚಳಿಗಾಲದಲ್ಲಿ ಚರ್ಮದಲ್ಲಿ ಉಂಟಾಗುವ ತುರಿಕೆ, ಕಜ್ಜಿ, ಒಣ ಚರ್ಮದ ನೆರಿಗೆ ಇತ್ಯಾದಿಗಳು ನಿವಾರಣೆಯಾಗುತ್ತದೆ.ಇದನ್ನು ಮುಖಕ್ಕೆ ಮಾತ್ರವಲ್ಲ ಕೈಕಾಲುಗಳಿಗೂ ಬಳಸಬಹುದು. ಕೈಕಾಲುಗಳ ಚರ್ಮ ಅಧಿಕ ಒಣಗಿದ್ದು, ಒರಟಾಗಿದ್ದರೆ ತಾಜಾ ಕೊಬ್ಬರಿ ಎಣ್ಣೆ ಅಥವಾ ಆಲಿವ್‌ ತೈಲವನ್ನು ಈ ಫೇಸ್‌ಪ್ಯಾಕ್‌ ತಯಾರಿಸುವಾಗ 1-2 ಚಮಚದಷ್ಟು ಬೆರೆಸಿದರೆ ಅಧಿಕ ಪರಿಣಾಮಕಾರಿ.

ಹೀಗೆ ಚಳಿಗಾಲದ ಕುಳಿರ್ಗಾಳಿ, ಒಣ ಹವೆ, ರೂಕ್ಷತೆಯ ನಡುವೆಯೂ ಸ್ನಿಗ್ಧ , ಮೃದು ವದನ ಹೊಂದಬಹುದು.

– ಡಾ| ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next