Winter Session: ಇಂದಿನಿಂದ “ಉತ್ತರ’ ಅಧಿವೇಶನ; 3 ದಿನ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆ
ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸದೆ ಸದನದ ದಿಕ್ಕುತಪ್ಪಿಸುತ್ತಿರುವ ಸರಕಾರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
Team Udayavani, Dec 16, 2024, 7:40 AM IST
ಬೆಂಗಳೂರು: ಉತ್ತರ ಕರ್ನಾಟಕ ಭಾಗದ ಸಮಸ್ಯೆ ಹಾಗೂ ಅಭಿವೃದ್ಧಿಯ ಕುರಿತು ಸೋಮವಾರದಿಂದ 3 ದಿನಗಳ ಕಾಲ ವಿಧಾನಸಭೆಯಲ್ಲಿ ಚರ್ಚೆ ಆರಂಭವಾಗಲಿದ್ದು, ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನರ ಚಿತ್ತ ವಿಧಾನಸಭೆಯ ಚರ್ಚೆಯತ್ತ ನೆಟ್ಟಿದೆ.
ಗಡಿನಾಡು ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣ ಆದಾಗಿನಿಂದಲೂ ಚಳಿಗಾಲದ ಅಧಿವೇಶನವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ನೂರಾರು ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಎಲ್ಲಿ ಅಧಿವೇಶನ ನಡೆದರೂ ಉತ್ತರ ಕರ್ನಾಟಕ ಮಾತ್ರ ಅಭಿವೃದ್ಧಿಯಲ್ಲಿ ಹಿಂದುಳಿಯುವುದು ತಪ್ಪಿಲ್ಲ ಎನ್ನುವ ಭಾವನೆ ಈಗಲೂ ಇದೆ.
ಹೀಗಾಗಿ ಈ ಬಾರಿಯ ಅಧಿವೇಶನದ ಬಗ್ಗೆ ಜನರ ನಿರೀಕ್ಷೆ ಹೆಚ್ಚಾಗಿದ್ದು, 3 ದಿನಗಳ ಕಾಲ ಉತ್ತರ ಕರ್ನಾಟಕ ಅಭಿವೃದ್ಧಿಯ ಚರ್ಚೆಗೆಂದೇ ಮೀಸಲಿಡಲಾಗಿದೆ. ಈಗಾಗಲೇ ವಿಧಾನಪರಿಷತ್ತಿನಲ್ಲಿ ಈ ಭಾಗದ ನೀರಾವರಿ ಯೋಜನೆಗಳ ಕುರಿತಂತೆ ಚರ್ಚೆ ಆರಂಭವಾಗಿದ್ದು, ಸೋಮವಾರದಿಂದ ವಿಧಾನಸಭೆಯಲ್ಲೂ ಸಮಗ್ರ ಅಭಿವೃದ್ಧಿ ಬಗ್ಗೆ ಶಾಸಕರು ಬೆಳಕು ಚೆಲ್ಲಲಿದ್ದಾರೆ.
ಕಲ್ಯಾಣ ಕರ್ನಾಟಕಕ್ಕೂ ಪ್ಯಾಕೇಜ್?
ಇತ್ತೀಚೆಗೆ ಕಲಬುರಗಿಯಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಸರಕಾರವು, ಕಲ್ಯಾಣ ಕರ್ನಾಟಕ ಭಾಗದ ಹತ್ತಾರು ಅಭಿವೃದ್ಧಿ ಕಾಮಗಾರಿಗಳಿಗೆ ಸಾವಿರಾರು ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಿತ್ತು. ಅದೇ ರೀತಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕಾಮಗಾರಿಗಳಿಗೂ ಅನುದಾನ ನೀಡಬೇಕು ಎನ್ನುವ ಬೇಡಿಕೆಯನ್ನು ಶಾಸಕರು ಸರಕಾರದ ಮುಂದಿಡಲಿದ್ದಾರೆ.
ನೀರಾವರಿ ಯೋಜನೆಗಳು ಒಂದೆಡೆಯಾದರೆ, ಮೂಲಸೌಕರ್ಯದ ಅಭಿವೃದ್ಧಿಗೂ ವೇಗ ಸಿಗಬೇಕಿದೆ. ಅದರಲ್ಲೂ ಗಡಿ ಭಾಗದ ಜಿಲ್ಲೆಗಳ ಪಾಲಿಗೆ ಅಭಿವೃದ್ಧಿ ಎಂಬುದು ಮರೀಚಿಕೆಯೇ ಆಗಿಬಿಟ್ಟಿದೆ. ಸಮತೋಲಿತ ಅಭಿವೃದ್ಧಿಯತ್ತ ಸರಕಾರ ಗಮನ ಹರಿಸಬೇಕಿದೆ. ಉತ್ತರ ಕರ್ನಾಟಕ ಭಾಗದ ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಪ್ರವಾಸೋದ್ಯಮದಂತಹ ಕ್ಷೇತ್ರಗಳ ಮೇಲೂ ಸರಕಾರ ಸಾಕಷ್ಟು ಗಮನ ಕೊಡಬೇಕಿದೆ. ಇದೆಲ್ಲದರ ಬಗ್ಗೆ ಶಾಸಕರು ಪಕ್ಷಾತೀತವಾಗಿ ಗಟ್ಟಿಧ್ವನಿಯಲ್ಲಿ ಸರಕಾರವನ್ನು ಎಚ್ಚರಿಸುವ ಕಾರ್ಯವನ್ನು ವಿಧಾನಸಭೆಯಲ್ಲಿ ಈ 3 ದಿನಗಳು ಮಾಡುವ ನಿರೀಕ್ಷೆ ಇದೆ.
ವಕ್ಫ್ ವಿವಾದಕ್ಕೆ ಇಂದು ಸಿಎಂ ಉತ್ತರ
ಸರಕಾರಕ್ಕೆ ಮುಜುಗರ ಉಂಟು ಮಾಡಿರುವ ವಕ್ಫ್ ನೋಟಿಸ್ ವಿಷಯ ವಿಧಾನಸಭೆಯಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದ್ದು, ಸೋಮವಾರ ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ, ವಕ#… ಸಚಿವ ಜಮೀರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಲಿದ್ದಾರೆ.
1977ರ ಅಧಿಸೂಚನೆಯಲ್ಲಿ ಉಲ್ಲೇಖವಿದ್ದ ವಕ್ಫ್ ಆಸ್ತಿಗಳ ಸಂರಕ್ಷಣೆ ಸಂಬಂಧ ಸಮಿತಿಯೊಂದನ್ನು ರಚಿಸಿ ಸದ್ಯದ ವಿವಾದದಿಂದ ತಪ್ಪಿಸಿಕೊಳ್ಳಲು ಸರಕಾರ ಚಿಂತನೆ ನಡೆಸಿದೆ. ವಿಪಕ್ಷ ಬಿಜೆಪಿಯು ತುರ್ತು ವಿಚಾರ ನಿಯಮ 68ರ ಅಡಿ ವಕ್ಫ್ ಆಸ್ತಿ ವಿವಾದ ಕುರಿತು ವಿಷಯ ಪ್ರಸ್ತಾವಿಸಿತ್ತು.
ಈ ಸಂದರ್ಭದಲ್ಲಿ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸಹಿತ ಹಲವು ನಾಯಕರು ಈ ವಿವಾದದ ವಿರುದ್ಧ ಗುಡುಗಿದ್ದರು. ಒಂದು ವೇಳೆ ಉತ್ತರ ತೃಪ್ತಿಕರ ಆಗದಿದ್ದರೆ, ಅದು ಮತ್ತೆ ವಾಗ್ವಾದಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇದೆ. ಆಗ ಉತ್ತರ ಕರ್ನಾಟಕ ಚರ್ಚೆಗೂ ಕತ್ತರಿ ಬೀಳಬಹುದು ಎನ್ನಲಾಗಿದೆ.
ಬೆಳಗಾವಿ ಅಧಿವೇಶನದಲ್ಲಿ ನೀರಾವರಿ ಸೇರಿ ಉತ್ತರ ಕರ್ನಾಟಕದ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ನಾವು ಸಿದ್ಧರಿದ್ದೇವೆ. ಆದರೆ ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯವಾಗಿದೆ.
–ಡಿ.ಕೆ. ಶಿವಕುಮಾರ್, ಡಿಸಿಎಂ
ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸರಕಾರ ಸಿದ್ಧವಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ, ಬಾಣಂತಿಯರು, ಶಿಶುಗಳ ಸಾವು, ಪಂಚಮಸಾಲಿ ಹೋರಾಟಗಾರರ ಮೇಲೆ ನಡೆದ ಲಾಠಿಪ್ರಹಾರ ಸಹಇತ ಹಲವು ವಿಚಾರಗಳಲ್ಲಿ ಸರಕಾರ ತಪ್ಪು ಮಾಡಿದೆ. ಎಲ್ಲದಕ್ಕೂ ಸರಕಾರ ಉತ್ತರ ಕೊಡಲೇಬೇಕು.
-ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಚರ್ಚೆಗೆ ಮುನ್ನವೇ ಬಿಜೆಪಿ-ಕಾಂಗ್ರೆಸ್ ಜಟಾಪಟಿ
ಬೆಂಗಳೂರು/ ಹುಬ್ಬಳ್ಳಿ: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಸೋಮವಾರದಿಂದ 3 ದಿನ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆ ನಿಗದಿಯಾಗಿದೆ. ಇದಕ್ಕೆ ಒಂದು ದಿನ ಮುಂಚೆ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿ ಮಧ್ಯೆ ಈ ವಿಚಾರದಲ್ಲಿ ಜಟಾಪಟಿ ಆರಂಭವಾಗಿದೆ.
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ತಯಾರಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿಯೇ ಚರ್ಚೆಗೆ ತಯಾರಿಲ್ಲ. ಅವರಲ್ಲಿ ಯಾವುದೇ ಒಗ್ಗಟ್ಟು ಇಲ್ಲ ಎಂದು ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.
ದಿಕ್ಕುತಪ್ಪಿಸುವ ಕೆಲಸ
ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸದೆ ಸದನದ ದಿಕ್ಕುತಪ್ಪಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪತ್ರಿಕಾಗೋಷ್ಠಿಯಲ್ಲಿ ವಾಗ್ಧಾಳಿ ನಡೆಸಿದರು.
ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ತಯಾರಿಲ್ಲ. ಬಾಣಂತಿಯರು, ಶಿಶುಗಳ ಸಾವಿನ ಕುರಿತು ಚರ್ಚಿಸಲು ಮುಂದೆ ಬರುತ್ತಿಲ್ಲ. ಮುಡಾ ಹಗರಣ ಸಂಬಂಧ ಸಿಬಿಐ ತನಿಖೆ ಆಗಬೇಕೆಂಬ ಚರ್ಚೆ ನಡೆದಿದೆ. ಇನ್ನೊಂದೆಡೆ ಇ.ಡಿ. ತನಿಖೆ ನಡೆಯುತ್ತಿದೆ. ಹಾಗಾಗಿ ಮುಖ್ಯಮಂತ್ರಿಗಳು ವಿಚಲಿತರಾದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ಅ ಧಿಕಾರಕ್ಕೆ ಬಂದು 2 ವರ್ಷ ಸಮೀಪಿಸಿದೆ. ಆದರೂ ನಾಡಿನ ಜನರ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇದೀಗ ಕೋವಿಡ್ ಕುರಿತಂತೆ ಮಧ್ಯಂತರ ವರದಿ ತೆಗೆದುಕೊಂಡು ಅದರ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿ, ಅದನ್ನು ಅಧಿವೇಶನದಲ್ಲಿ ಚರ್ಚಿಸಲು ಸರ್ಕಾರ ಬಯಸುತ್ತಿದೆ. ಇಡೀ ಸದನವನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಕುಟುಕಿದರು.
ಸರಕಾರದ ಕುಮ್ಮಕ್ಕಿನಿಂದ ಲಾಠಿಪ್ರಹಾರ
ಸರಕಾರಕ್ಕೆ ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ. ಸಮಸ್ಯೆಗಳಿಂದ ಓಡಿಹೋಗುವ ಪ್ರಯತ್ನ ಮಾಡುತ್ತಿದ್ದಾರೆ. ಬೆಳಗಾವಿಯಲ್ಲಿ ರಾಜ್ಯ ಸರಕಾರದ ಕುಮ್ಮಕ್ಕಿನಿಂದ ಪಂಚಮಸಾಲಿ ಸಮುದಾಯದ ಮೇಲೆ, ಹಿಂದೂಗಳ ಮೇಲೆ ಲಾಠಿಪ್ರಹಾರ ಆಗಿದೆ ಎಂದು ವಿಜಯೇಂದ್ರ ಆರೋಪಿಸಿದರು. ಈ ವಿಚಾರವಾಗಿ ಮುಖ್ಯಮಂತ್ರಿಗಳು, ಗೃಹ ಸಚಿವರು ಸದನದಲ್ಲಿ ಕನಿಷ್ಠ ವಿಷಾದವನ್ನೂ ವ್ಯಕ್ತಪಡಿಸಿಲ್ಲ. ಅಧಿ ಕಾರದ ಮದ ಇವರ ನೆತ್ತಿಗೇರಿದೆ. ಇದು ಸರಿಯಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubballi: ಪತ್ನಿಯ ಕಿರುಕುಳದಿಂದ ಬೇಸತ್ತಿದ್ದೇನೆಂದು ಡೆತ್‌ನೋಟ್ ಬರೆದು ಪತಿ ಆತ್ಮಹ*ತ್ಯೆ!
Run Away: ಗ್ರಾಮಸ್ಥರ ಹೆಸರಲ್ಲಿ 50 ಲಕ್ಷ ರೂ.ಸಾಲ ಪಡೆದು ದಂಪತಿ ಪರಾರಿ!
MUDA; ಸಿದ್ದರಾಮಯ್ಯ ಪತ್ನಿ, ಬೈರತಿ ಸುರೇಶ್ ಗೆ ರಿಲೀಫ್: ಇಡಿ ನೋಟಿಸ್‌ಗೆ ಹೈಕೋರ್ಟ್ ತಡೆ
Republic Day Tableau: ರಾಜ್ಯದ ‘ಲಕ್ಕುಂಡಿ’ ಸ್ತಬ್ಧಚಿತ್ರಕ್ಕೆ ವೋಟ್ ಮಾಡಿ ಗೆಲ್ಲಿಸಿ
MUDA Case: ಸಿಬಿಐಗೆ ವಹಿಸುವ ಅರ್ಜಿ ವಿಚಾರಣೆ: ತೀರ್ಪು ಕಾಯ್ದಿರಿಸಿದ ಧಾರವಾಡ ಹೈಕೋರ್ಟ್