Advertisement

ಆಪರೇಷನ್‌ ಗುಮ್ಮ, ಪ್ರತಿಭಟನೆ ಆತಂಕ

06:00 AM Dec 09, 2018 | Team Udayavani |

ಬೆಳಗಾವಿ: ಸುವರ್ಣಸೌಧದಲ್ಲಿ ಚಳಿಗಾಲದ ವಿಧಾನಮಂಡಲ ಅಧಿವೇಶನಕ್ಕೆ ಸಜ್ಜಾಗಿರುವ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರಕ್ಕೆ ಆಪರೇಷನ್‌ ಕಮಲ ಭೀತಿ, ಕಬ್ಬು ಬೆಳೆಗಾರರ ಬಾಕಿ ಪಾವತಿ ಗೊಂದಲ ನಿವಾರಣೆಯಾಗದ ಕಾರಣ ಪ್ರತಿಭಟನೆಯ ಆತಂಕ
ಎದುರಾಗಿದೆ.

Advertisement

ಸರ್ಕಾರ ರಚನೆಯಾದ ದಿನದಿಂದ “ತೋಳ ಬಂತು ತೋಳ’ ಕಥೆಯಂತಾಗಿರುವ ಆಪರೇಷನ್‌ ಕಮಲ ಕಾರ್ಯಾಚರಣೆ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಮತ್ತೆ ಚಾಲನೆ ಸಿಗಲಿದೆ. ಸಂಪುಟ ವಿಸ್ತರಣೆಗಾಗಿ ಕಾದು ಕುಳಿತವರ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿದ್ದು  ಅಧಿವೇಶನ ಸಂದರ್ಭದಲ್ಲಿ ಸ್ಫೋಟವಾಗಬಹುದು ಎಂದು ರಾಜಕೀಯ ವಲಯಗಳಲ್ಲಿ ಚರ್ಚೆಗಳು ನಡೆದಿದೆ.

ಸಚಿವಾಕಾಂಕ್ಷಿಗಳು ಒಮ್ಮೆಲೆ ಸರ್ಕಾರಕ್ಕೆ ಆಪತ್ತು ತರದಿದ್ದರೂ ಮುಜುಗರ ಸೃಷ್ಟಿಸಲು ಪ್ರಯತ್ನಿಸಬಹುದು. ಈಗಾಗಲೇ ಅದರ ಮುನ್ಸೂಚನೆ ಎಂಬಂತೆ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಅಪಸ್ವರ ತೆಗೆದು ಸೀನಿಯರ್ ಬೇಡ ಎಂದಾದರೆ ಒಬ್ಬರಿಗೊಂದು ನ್ಯಾಯ, ಮತ್ತೂಬ್ಬರಿಗೊಂದು ನ್ಯಾಯ ಯಾಕೆ ಎಂದು ಪ್ರಶ್ನಿಸಿದ್ದಾರೆ. ಇದು ಅವರೊಬ್ಬರ ಬೇಸರವಲ್ಲ, ರೋಷನ್‌ಬೇಗ್‌, ಎಂ.ಬಿ.ಪಾಟೀಲ್‌,  ಎಚ್‌.ಕೆ.ಪಾಟೀಲ್‌ ಸೇರಿದಂತೆ ಸಚಿವರಾಗಲು ಕಾಯುತ್ತಿರುವ ಎಲ್ಲರ ಧ್ವನಿ ಎಂಬ ಮಾತುಗಳು ಕೇಳಿಬರುತ್ತಿವೆ.

ವಿಧಾನಮಂಡಲ ಅಧಿವೇಶನದಲ್ಲಿ ಪ್ರತಿಪಕ್ಷ ಬಿಜೆಪಿಯನ್ನು ಎದುರಿಸುವ ವಿಚಾರ ಅಥವಾ ಇನ್ಯಾವುದೇ ಪ್ರಮುಖ ತೀರ್ಮಾನಗಳ ಸಂದರ್ಭದಲ್ಲಿ ಗೈರು ಹಾಜರಿ, ತಟಸ್ಥ ಧೋರಣೆ ತಾಳಿ ಸದನದ ಹೊರಗೆ ಅನಗತ್ಯ , ವಿವಾದಯುತ ಸರ್ಕಾರಕ್ಕೆ ಮುಜುಗರ ಸೃಷ್ಟಿಸುವ ಹೇಳಿಕೆ ನೀಡಿದರೆ ಅದು ಪರೋಕ್ಷವಾಗಿ ಸರ್ಕಾರದ ಮೇಲೆ ಪರಿಣಾಮ ಬೀರಲಿದೆ.
ಈ ಮಧ್ಯೆ, ಸತೀಶ್‌ ಜಾರಕಿಹೊಳಿ ಐದಾರು ಶಾಸಕರು ಬಿಜೆಪಿ ಹೋಗಬಹುದು ಆದರೆ ಸರ್ಕಾರಕ್ಕೆ ತೊಂದರೆಯಿಲ್ಲ ಎಂಬ ಹೇಳಿಕೆ ಮತ್ತಷ್ಟು ನಿಗೂಢವಾಗಿದೆ. ಐದಾರು ಶಾಸಕರ ರಾಜೀನಾಮೆಗೆ ಮಹೂರ್ತ ಅಧಿವೇಶನ ಸಂದರ್ಭದಲ್ಲಿಯೇ ಇಡಲಾಗಿದೆ ಎಂದು ಹೇಳಲಾಗುತ್ತಿದೆ.ಹೀಗಾಗಿ, ಆಪರೇಷನ್‌ ಕಮಲ ಗುಮ್ಮ ಅಧಿವೇಶನದುದ್ದಕ್ಕೂ ಸಮ್ಮಿಶ್ರ ಸರ್ಕಾರ ಅದರಲ್ಲೂ ಎಚ್‌.ಡಿ.ಕುಮಾರಸ್ವಾಮಿಯವರನ್ನು ಕಾಡುವುದು ಖಚಿತ.

ಪಂಚರಾಜ್ಯಗಳ ಫ‌ಲಿತಾಂಶದ ಬಗ್ಗೆಯೂ ಒಂದು ಕಡೆ ಆತಂಕ ಇತ್ತಾದರೂ ಮತದಾನೋತ್ತರ ಸಮೀಕ್ಷೆಗಳು ಮುಖ್ಯಮಂತ್ರಿ ಕುಮಾರಸ್ವಾಮಿ  ಹಾಗೂ ಕಾಂಗ್ರೆಸ್‌ ನಾಯಕರಿಗೆ ಸ್ವಲ್ಪ ಮಟ್ಟಿಗೆ ನಿರಾಳ ತಂದಿವೆ. ಆದರೂ ಫ‌ಲಿತಾಂಶದ ನಂತರದ ಬೆಳವಣಿಗೆಗಳು ಏನಾಗುವುದೋ ಎಂಬ ಅಳುಕು ಇದ್ದೇ ಇದೆ. ಪಂಚರಾಜ್ಯಗಳ ಫ‌ಲಿತಾಂಶ ಏನೇ ಆದರೂ ಅದರ ಪರಿಣಾಮ ಕರ್ನಾಟಕದ ಮೇಲೂ ಬೀರಲಿದೆ.

Advertisement

ರೈತರ ತಲೆಬಿಸಿ
ಇನ್ನು, ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತರ ನಡುವೆ ಕಬ್ಬು ಪೂರೈಕೆಯ ಬಾಕಿ ಪಾವತಿ ಹಾಗೂ  ಎಫ್ಆರ್‌ಪಿ ದರ ವಿಚಾರದಲ್ಲಿ ಉಂಟಾಗಿರುವ ಗೊಂದಲ ಇನ್ನೂ ಬಗೆಹರಿದಿಲ್ಲ. ಕಾರ್ಖಾನೆ ಮಾಲೀಕರ ವಿರುದ್ಧ ರಾಜ್ಯ ಸರ್ಕಾರ ಗಟ್ಟಿಯಾಗಿ ಕ್ರಮ ಕೈಗೊಳ್ಳುವ ಧೈರ್ಯ ತೋರಲು ಹಿಂದೇಟು ಹಾಕುತ್ತಿದೆ. ಯಾಕೆಂದರೆ  ಉತ್ತರ ಕರ್ನಾಟಕ ಭಾಗದಲ್ಲಿ ಬಹುತೇಕ ಸಕ್ಕರೆ ಕಾರ್ಖಾನೆ ಮಾಲೀಕರು ರಾಜಕಾರಣಿಳು. ಸಚಿವ ಸಂಪುಟದಲ್ಲೂ ಸಕ್ಕರೆ ಕಾರ್ಖಾನೆ ಮಾಲೀಕರಿದ್ದಾರೆ. ಹೀಗಾಗಿ, ಸರ್ಕಾರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವ ವಿಶ್ವಾಸದಲ್ಲೇ ಇದೆ.

ರೈತರ ಸಮಸ್ಯೆ ಆಲಿಸಲು ನಾನೇ ಬೆಳಗಾವಿಗೆ ಬರುತ್ತೇನೆ ಎಂದು ಹೇಳಿದ್ದ ಮುಖ್ಯಮಂತ್ರಿಯವರು  ನಂತರ ನೀವೇ ವಿಧಾನಸೌಧಕ್ಕೆ ಬನ್ನಿ ಎಂದು ಆಹ್ವಾನಿಸಿದ್ದರೂ ಕೆಲವು ಮುಖಂಡರು ಬಂದಿರಲಿಲ್ಲ.  ಇದೀಗ ಮುಖ್ಯಮಂತ್ರಿಯವರೇ ಬೆಳಗಾವಿಗೆ ಬರುತ್ತಿದ್ದಾರೆ. ಜತೆಗೆ ಅಧಿವೇಶನ ಸಂದರ್ಭದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಸಭೆ ನಡೆಸುವುದಾಗಿಯೂ ಹೇಳಿದ್ದಾರೆ. ರೈತರು ಸಮಾಧಾನವಾಗದಿದ್ದರೆ ಬೆಳಗಾವಿ ವಿಧಾನಸಭೆ ಅಧಿವೇಶನ ಸಂದರ್ಭದಲ್ಲಿ ಮತ್ತೆ ರೈತರ ಪ್ರತಿಭಟನೆ ಶುರುವಾಗಲಿದ್ದು ಸರ್ಕಾರಕ್ಕೆ ತಲೆಬಿಸಿ ತಪ್ಪಿದ್ದಲ್ಲ.
ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ರೈತರ ಸಾಲ ಮನ್ನಾ ವಿಚಾರದಲ್ಲಿ ರಾಜಕೀಯ ಲಾಭ ಪಡೆಯಲು ಪ್ರತಿಪಕ್ಷ ಬಿಜೆಪಿ ತಂತ್ರಗಾರಿಕೆಯಲ್ಲಿ ತೊಡಗಿದ್ದು ಮೊದಲ ದಿನವೇ ಒಂದು ಲಕ್ಷ ರೈತರ ಪ್ರತಿಭಟನೆ ಹಮ್ಮಿಕೊಂಡಿದೆ. ಎರಡೂ ವಿಚಾರಗಳಲ್ಲಿ  ಮುಖ್ಯಮಂತ್ರಿ  ಎಚ್‌.ಡಿ. ಕುಮಾರಸ್ವಾಮಿ ಯಾವ ರೀತಿ ನಿಭಾಯಿಸುತ್ತಾರೆ ಎಂಬುದರ ಮೇಲೆ ಸುಗಮ ಅಧಿವೇಶನ ಹಾಗೂ ಸುಸೂತ್ರ ಕಲಾಪ ನಿಂತಿದೆ.

ಏಕೆಂದರೆ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಅಧಿವೇಶನ ಸಂದರ್ಭದಲ್ಲಿ ರೈತ ವಿಠಲ್‌ ಅರಬಾವಿ ಸುವರ್ಣಸೌಧ ಮುಂಭಾಗದಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಪ್ಪು ಚುಕ್ಕೆಯಾಗಿ ಉಳಿದುಹೋಗಿದೆ. ರೈತರ ಪ್ರತಿಭಟನೆ ಜೋರಾದರೆ ಸುವರ್ಣಸೌಧದಲ್ಲಿ ಕಲಾಪ ನಡೆಸುವುದು ಕಷ್ಟವಾಗಬಹುದು. ಹೀಗಾಗಿ, ಪ್ರತಿ ಹೆಜ್ಜೆ ಜಾಗರೂಕತೆಯಿಂದಲೇ ಇಡಬೇಕಾಗಿದೆ.

ಎಚ್‌ಡಿಕೆ ಕಾರ್ಯತಂತ್ರ ಕುತೂಹಲ
ಆಪರೇಷನ್‌ ಕಮಲ ಕಾರ್ಯಾಚರಣೆಗೆ ನಿರಂತರ ಪ್ರಯತ್ನ ನಡೆಯುತ್ತಿರುವುದು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಕೆಲವು ಶಾಸಕರು ಅತೃಪ್ತರಾಗಿರುವುದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಗುಪ್ತಚರ ಅಧಿಕಾರಿಗಳ ಮೂಲಕ ಅವರೂ ಕೆಲವೊಂದು ಮಾಹಿತಿ ಕಲೆ ಹಾಕಿದ್ದಾರೆ. ಸಂಪುಟ ವಿಸ್ತರಣೆಯಾದರೆ ಅಧಿವೇಶನದಲ್ಲಿ ಕಷ್ಟ ತಪ್ಪಿದ್ದಲ್ಲ ಎಂಬ ಮಾಹಿತಿ ಹಿನ್ನೆಲೆಯಲ್ಲಿಯೇ ಸಂಪುಟ ವಿಸ್ತರಣೆ ಮುಂದೂಡಲಾಯಿತು ಎಂಬುದು ಬಹಿರಂಗ ಸತ್ಯ. ಹೀಗಾಗಿ, ಹತ್ತು ದಿನಗಳ ಅಧಿವೇಶನ ಒಂದು ರೀತಿಯ ಸವಾಲಾಗಿದ್ದು, ಕುಮಾರಸ್ವಾಮಿಯವರು ಬಿಜೆಪಿಯ ಅಸ್ತ್ರಗಳಿಗೆ ಪ್ರತ್ಯುತ್ತರ ನೀಡಲು ರೂಪಿಸಿರುವ ಕಾರ್ಯತಂತ್ರದ ಬಗ್ಗೆಯೂ ಕುತೂಹಲವಿದೆ. ಇನ್ನು, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಅವರು ಸಂಕಷ್ಟ ಸಂದರ್ಭಗಳಲ್ಲಿ ಸಹ ಎಷ್ಟರ ಮಟ್ಟಿಗೆ ಸಮ್ಮಿಶ್ರ ಸರ್ಕಾರದ ನೆರವಿಗೆ ಬರಲಿದ್ದಾರೆ ಎಂಬುದೂ ಕಾದು ನೋಡಬೇಕಾಗಿದೆ. ಏಕೆಂದರೆ ಅಧಿವೇಶನ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ನಾಲ್ಕು ದಿನ ಮಲೇಷಿಯಾ ಪ್ರವಾಸ ಕೈಗೊಳ್ಳುತ್ತಿರುವುದು ನಾನಾ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

– ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next