Advertisement

ಅಧಿವೇಶನ ಹತ್ತು ದಿನಗಳ ಜಾತ್ರೆಯಾಗಬಾರದು

01:52 AM Dec 25, 2021 | Team Udayavani |

ಕೋವಿಡ್ ರೂಪಾಂತರಿ ಒಮಿಕ್ರಾನ್‌ ಆತಂಕದ ನಡುವೆಯೇ ಕುಂದಾ ನಗರಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಎರಡು ವಾರಗಳ ರಾಜ್ಯ ವಿಧಾನಮಂಡಲ ಅಧಿವೇಶನ ಮುಗಿದಿದೆ.

Advertisement

ಅಧಿವೇಶನದ ನಡುವೆಯೇ ಕನ್ನಡ ಬಾವುಟಕ್ಕೆ ಅವಮಾನ, ಸಂಗೊಳ್ಳಿ ರಾಯಣ್ಣ, ಶಿವಾಜಿ ಪ್ರತಿಮೆಗೆ ಹಾನಿ ಮಾಡಿದ ಪುಂಡಾಟಿಕೆ ಯಂತಹ ಘಟನೆಗಳು ನಡೆದಿದ್ದು ಬೇಸರದ ಸಂಗತಿಯಾದರೂ, ರಾಜ್ಯ ಸರಕಾರವು ಅಧಿವೇಶನದ ಮೂಲಕವೇ ಕಠಿನವಾದ ಸಂದೇಶ ರವಾನೆ ಮಾಡಿತು. ಮೂರೂ ರಾಜಕೀಯ ಪಕ್ಷಗಳದ್ದು ಈ ವಿಚಾರದಲ್ಲಿ ನಾಡಿನ ಪರ ಒಂದೇ ಧ್ವನಿಯಾಗಿತ್ತು.

ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಯ ಆಶಯ ದೊಂದಿಗೆ ಸುವರ್ಣ ವಿಧಾನಸೌಧ ನಿರ್ಮಾಣ ಮಾಡಿ ಪ್ರತೀ ವರ್ಷ ಅಧಿವೇಶನ ನಡೆಸುವ ತೀರ್ಮಾನ ಕೈಗೊಳ್ಳಲಾಗಿತ್ತು. ಇದುವರೆಗೂ ಹತ್ತು ಅಧಿವೇಶನ ನಡೆದಿದ್ದು ಕೆಲವೊಂದು ಸಂದರ್ಭ ಹೊರತು ಪಡಿಸಿದರೆ ಉಳಿದಂತೆ ಅರ್ಥಪೂರ್ಣ ಚರ್ಚೆ ನಡೆದಿದೆ. ಹತ್ತು ಅಧಿವೇಶನಗಳಲ್ಲಿ ಹಲವು ಮಹತ್ತರ ತೀರ್ಮಾನಗಳನ್ನೂ ಕೈಗೊಳ್ಳಲಾಗಿದೆ.

ಅಧಿವೇಶನ ಸಂದರ್ಭ ಹೊರತುಪಡಿಸಿ ಉಳಿದ ದಿನ ಸುವರ್ಣ ವಿಧಾನಸೌಧ ಖಾಲಿ ಖಾಲಿ, ಈ ಭಾಗಕ್ಕೆ ಸೇರಿದ ಇಲಾಖೆಗಳ ಕಚೇರಿ ಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರ ಮಾಡಬೇಕು ಎಂಬ ಬೇಡಿಕೆ ಇದುವರೆಗೂ ಈಡೇರಿಲ್ಲ. ವರ್ಷಕ್ಕೊಮ್ಮೆ ಇಲ್ಲಿ ಸಾಂಕೇತಿಕವಾಗಿ ಅಧಿವೇಶನ ಶಾಸ್ತ್ರ ಮಾಡಿ ಮುಗಿಸುವುದು ಬೇಡ. ಅಧಿವೇಶನ ಹತ್ತು ದಿನಗಳ ಜಾತ್ರೆ ಆಗುವುದು ಬೇಡ ಎಂಬುದು ಬಹುತೇಕ ಜನಪ್ರತಿ ನಿಧಿಗಳ ಅನಿಸಿಕೆಯೂ ಹೌದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರ ಕರ್ನಾಟಕ ಭಾಗದವರೇ ಆಗಿದ್ದಾರೆ. ಈಗಲಾ ದರೂ ಈ ಕುರಿತು ಕ್ರಮ ಕೈಗೊಳ್ಳಬೇಕು. ಸುವರ್ಣ ವಿಧಾನಸೌಧದಲ್ಲಿ ಸರಕಾರಿ ಸಭೆ, ಸಮಾರಂಭ, ಇಲಾಖಾ ಕಚೇರಿಗಳ ಕಾರ್ಯನಿರ್ವಹಣೆ ಮೂಲಕ ಸದಾ ಚಟುವಟಿಕೆ ನಡೆಯುವಂತೆ ನೋಡಿಕೊಂಡರೆ ಇಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದಕ್ಕೂ ಸಾರ್ಥಕವಾಗಲಿದೆ.

ಇದನ್ನೂ ಓದಿ:ಕೃಷಿ ವಿವಿಗಳಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಶೇ.50 ಭರ್ತಿಗೆ ಕ್ರಮ: ಬಿ.ಸಿ.ಪಾಟೀಲ್‌

Advertisement

ಅಧಿವೇಶನದಲ್ಲಿ ಕೈಗೊಂಡ ತೀರ್ಮಾನ ಹಾಗೂ ನಿರ್ಣಯ, ಇಲ್ಲಿ ನೀಡಿದ ಭರವಸೆಗಳ ಈಡೇರಿಕೆಗೆ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು.

ಜತೆಗೆ ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಒಂದು ನೀಲನಕ್ಷೆ ರೂಪಿಸಬೇಕು ಎಂಬ ಬೇಡಿಕೆಯೂ ಇದ್ದು ಆ ಬಗ್ಗೆಯೂ ಸರಕಾರ ಗಮನಹರಿಸಬೇಕಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಅಭಿ ವೃದ್ಧಿಗೆ ಬಜೆಟ್‌ನಲ್ಲಿ ನಿಗದಿಪಡಿಸಿರುವ ಅನುದಾನ ಆಯಾ ವರ್ಷ ಪೂರ್ಣ ಪ್ರಮಾಣದಲ್ಲಿ ವೆಚ್ಚ ಆಗುವಂತೆ ನಿಗಾ ವಹಿಸಬೇಕಾಗಿದೆ.
ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ವಿಚಾರದಲ್ಲಿ ಅಲ್ಲಿನ ಜನಪ್ರತಿನಿಧಿಗಳ ಹೊಣೆಗಾರಿಕೆಯೂ ಹೆಚ್ಚಾಗಿದೆ.

ರಾಜ್ಯ ಸರಕಾರದ ಮೇಲೆ ಪಕ್ಷಾತೀತವಾಗಿ ಒತ್ತಡವನ್ನು ಹೇರಿ ಯೋಜನೆಗಳ ಅನುಷ್ಠಾನ ವಾಗುವಂತೆ ನೋಡಿಕೊಳ್ಳಬೇಕಾಗಿದೆ. ಅದರಲ್ಲೂ ಹಲವು ಶಾಸಕರ ಗೈರು ಹಾಜರಿ ಇಡೀ ಅಧಿವೇಶನದ ಅಗತ್ಯವನ್ನೇ ಅಣಕಿಸುವಂತಿತ್ತು. ಕಾಟಾಚಾರಕ್ಕೆ ಒಂದೆರಡು ದಿನಗಳ ಮಟ್ಟಿಗೆ ಕಲಾಪಕ್ಕೆ ಹಾಜರಾದವರೂ ಇದ್ದಾರೆ. ಶಾಸಕರು ಕಲಾಪವನ್ನು ಗಂಭೀರವಾಗಿ ಪರಿಗಣಿಸದೆ ಇದ್ದರೆ ಸರಕಾರದ ಎಲ್ಲ ಶ್ರಮಗಳೂ ವ್ಯರ್ಥವಾಗುತ್ತವೆೆ.

Advertisement

Udayavani is now on Telegram. Click here to join our channel and stay updated with the latest news.

Next