Advertisement

Winter Session: ಮೊದಲ ದಿನವೇ ಕದನ ಆರಂಭ; ಸರಕಾರ, ವಿಪಕ್ಷ ನಡುವೆ ಬಿಸಿ ಬಿಸಿ ವಾಗ್ವಾದ

01:05 AM Dec 10, 2024 | Team Udayavani |

ಬೆಳಗಾವಿ: ಚಳಿಗಾಲ ಅಧಿವೇಶನದ ಮೊದಲ ದಿನವೇ ವಿಪಕ್ಷ ಬಿಜೆಪಿಯು ವಕ್ಫ್ ಮಂಡಳಿಯ ನೋಟಿಸ್‌ ಹಾಗೂ ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡುವ ವಿಷಯ ಪ್ರಸ್ತಾವಿಸಿ ಸರಕಾರಕ್ಕೆ ಬಿಸಿ ಮುಟ್ಟಿಸುವ ಪ್ರಯತ್ನ ನಡೆಸಿತು.

Advertisement

ಈ ವೇಳೆ ವಿಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ಭಾರೀ ವಾಗ್ವಾದ ನಡೆಯಿತು. ವಕ್ಫ್ ಅಧಿಕಾರ ಮೊಟಕು, ಪಂಚಮಸಾಲಿ ಮೀಸಲು ವಿಷಯವಾಗಿ ಮೇಲ್ಮನೆ ಮತ್ತು ಕೆಳಮನೆಯಲ್ಲಿ ಭಾರೀ ಗದ್ದಲ ಏರ್ಪಟ್ಟಿದ್ದು, ರಾಜ ಕೀಯ ಮೇಲಾಟಕ್ಕೆ ಸಾಕ್ಷಿಯಾಯಿತು.

ಸೋಮವಾರ ಬೆಳಗ್ಗೆ ವಿಧಾನಸಭೆಯಲ್ಲಿ ಸಂತಾಪ ಸೂಚನೆ ನಿರ್ಣಯ ಮುಗಿಯುತ್ತಿದ್ದಂತೆ, “ವಕ್ಫ್ ವಿಷಯವಾಗಿ ಚರ್ಚಿಸಲು ನಿಲುವಳಿ ಸೂಚನೆ ಪ್ರಸ್ತಾವನೆ ಸಲ್ಲಿಸಿದ್ದೇನೆ, ಅವಕಾಶ ನೀಡಬೇಕು’ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಹೇಳಿದರು.

ಅಷ್ಟರಲ್ಲಿ ಬಸನಗೌಡ ಪಾಟೀಲ್‌ ಯತ್ನಾಳ್‌ ಸಹಿತ ಬಿಜೆಪಿಯ ಕೆಲವು ಶಾಸಕರು ಪಂಚಮಸಾಲಿಗಳಿಗೆ 2ಎ ಮೀಸಲಾತಿ ಕಲ್ಪಿಸಬೇಕೆಂದು ಹೋರಾಟಕ್ಕೆ ಅನುಮತಿ ಕೇಳಿದರೆ ಕೊಡುತ್ತಿಲ್ಲ. ಇದೇನು ತುಘಲಕ್‌ ಆಳ್ವಿಕೆಯೇ, ಹಿಟ್ಲರ್‌ ಆಡಳಿತವೇ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಇದ್ಯಾವುದಕ್ಕೂ ಬಗ್ಗದ ಸ್ಪೀಕರ್‌ ಯು.ಟಿ. ಖಾದರ್‌, ಸಭಾಧ್ಯಕ್ಷರ ನವೀಕೃತ ಪೀಠ, ಅನುಭವ ಮಂಟಪದ ತೈಲವರ್ಣ ಚಿತ್ರಗಳ ಬಗ್ಗೆ ಸದನಕ್ಕೆ ಮಾಹಿತಿ ನೀಡಿ, ಪ್ರಶ್ನೋತ್ತರ ಕಲಾಪಕ್ಕೆ ಮುಂದಾದರು. ಇದರಿಂದ ಅಸಮಾಧಾನಗೊಂಡ ಯತ್ನಾಳ್‌ ಮತ್ತಿತರ ಶಾಸಕರು ಸ್ಪೀಕರ್‌ ಪೀಠದ ಮುಂದೆ ಧರಣಿ ಆರಂಭಿಸಿದರು. ಈ ಗದ್ದಲದಿಂದಾಗಿ ಸ್ಪೀಕರ್‌ ಅವರು ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

Advertisement

ಸಿಎಂ ಮಧ್ಯಪ್ರವೇಶ
ಭೋಜನ ವಿರಾಮದ ಅನಂತರ ಕಲಾಪ ಸಮಾವೇಶಗೊಂಡಾಗಲೂ ವಿಪಕ್ಷದ ಧರಣಿ ಮುಂದುವರಿಯಿತು. ಗೃಹಸಚಿವ ಡಾ. ಪರಮೇಶ್ವರ್‌ ಉತ್ತರಕ್ಕೂ ತೃಪ್ತರಾಗದ ಧರಣಿನಿರತ ಬಿಜೆಪಿಯು ಬಳಿಕ ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶದ ಅನಂತರ ಧರಣಿಯನ್ನು ಕೈಬಿಟ್ಟಿತು. ವಿಪಕ್ಷ ನಾಯಕ ಆರ್‌. ಅಶೋಕ್‌ ಅವರು ಮತ್ತೆ ವಕ್ಫ್ ಬಗೆಗಿನ ನಿಲುವಳಿ ಸೂಚನೆ ಕುರಿತು ನೆನಪಿಸಿದಾಗ ಮಂಗಳವಾರ ಅವಕಾಶ ನೀಡುವುದಾಗಿ ಸ್ಪೀಕರ್‌ ಭರವಸೆ ನೀಡಿದರು. ಮಂಗಳವಾರವೂ ಈ ವಿಷಯ ಕೆಳಮನೆಯಲ್ಲಿ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ.

ಪರಿಷತ್ತಿನಲ್ಲೂ ಗದ್ದಲ
ಇತ್ತ ವಿಧಾನ ಪರಿಷತ್ತಿನಲ್ಲಿ ಮಧ್ಯಾಹ್ನ ಭೋಜನ ವಿರಾಮದ ಅನಂತರ ವಕ್ಫ್ ನೋಟಿಸ್‌ ವಿರುದ್ಧ ನಿಲುವಳಿ ಪ್ರಸ್ತಾವನೆಗೆ ಅವಕಾಶ ಕೋರಿ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪಟ್ಟು ಹಿಡಿದರು. ಆದರೆ ಇದಕ್ಕೆ ಅವಕಾಶ ಕೊಡಬಾರದು, ನಿಯಮದಂತೆ ಕಲಾಪ ನಡೆಸಬೇಕು ಎಂದು ಆಡಳಿತಾರೂಢ ಕಾಂಗ್ರೆಸ್‌ ಶಾಸಕರು ಹೇಳುತ್ತಿದ್ದಂತೆ ಆಡಳಿತ ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ಆರಂಭವಾಯಿತು. ಸಿ.ಟಿ. ರವಿ ಮಾತನಾಡಿ, ವಕ್ಫ್ ಮೂಲಕ ಕಾಂಗ್ರೆಸ್‌ ಸರಕಾರವು ನಾಡಿನ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ವಕ್ಫ್ ವಿರುದ್ಧ ಹರಿಹಾಯ್ದರು. ಇದಕ್ಕೆ ಮುಸ್ಲಿಂ ಸಮುದಾಯದ ಕೆಲವು ಶಾಸಕರು ಪ್ರತಿರೋಧ ಒಡ್ಡಲು ಮುಂದಾಗುತ್ತಿದ್ದಂತೆ ಗದ್ದಲ ಮತ್ತಷ್ಟು ತಾರಕಕ್ಕೇರಿ ಕಲಾಪವನ್ನು ಮಂಗಳವಾರಕ್ಕೆ ಮುಂದೂಡುವಂತಾ ಯಿತು. ಒಟ್ಟಾರೆ ಮೊದಲ ದಿನದ ಉಭಯ ಸದನಗಳೂ ಗದ್ದಲದೊಂದಿಗೆ ಆರಂಭಗೊಂಡಿದ್ದು, ಡಿ. 19ರವರೆಗೆ ಕಲಾಪಗಳು ಯಾವ ಹಾದಿ ಹಿಡಿಯ ಲಿವೆ ಎಂಬ ಸಣ್ಣ ಸುಳಿವವನ್ನು ನೀಡಿತು.

ನಡೆದದ್ದೇನು?
1.ವಕ್ಫ್ ನಿಲುವಳಿಗೆ ಜಟಾಪಟಿ
ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಆರ್‌. ಅಶೋಕ್‌ ಅವರು ವಕ್ಫ್ ಚರ್ಚೆಗೆ ಬೇಡಿಕೆ ಇಟ್ಟರು. ಆದರೆ ನಿಲುವಳಿ ಸೂಚನೆ ಮಂಡಿಸುವ ಅಶೋಕ್‌ ಬೇಡಿಕೆಗೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅವಕಾಶ ನೀಡಲಿಲ್ಲ. ಇತ್ತ ಪರಿಷತ್‌ನಲ್ಲೂ ಬಿಜೆಪಿ ಶಾಸಕರು ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಅನ್ವರ್‌ ಮಾಣಿಪ್ಪಾಡಿ ವರದಿ ಜಾರಿಗೆ ಆಗ್ರಹಿಸಿದರು. ಇದಕ್ಕೆ ಕಾಂಗ್ರೆಸ್‌ ಶಾಸಕರು ತಿರುಗೇಟು ನೀಡುವ ಪ್ರಯತ್ನ ಮಾಡಿದರು.

2.ಪಂಚಮಸಾಲಿ ಹೋರಾಟ ಗದ್ದಲ
ವಿಧಾನಸಭೆಯಲ್ಲಿ ಶಾಸಕ ಯತ್ನಾಳ್‌ ಸಹಿತ ಹಲವರು ಪಂಚಮಸಾಲಿಗಳಿಗೆ 2ಎ ಮೀಸಲು ಹೋರಾಟ ಪ್ರಸ್ತಾವಿಸಿದರು. ಇದಕ್ಕೆ ಸ್ಪೀಕರ್‌ ಅನುಮತಿ ನೀಡದ್ದು ಸಾಕಷ್ಟು ಗದ್ದಲಕ್ಕೆ ಕಾರಣವಾಯಿತು. ಶಾಸಕರು ಪ್ರತಿಭಟನೆಗೂ ಮುಂದಾದರು. ಇದರಿಂದಾಗಿ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು. ಬಳಿಕ ಗೃಹ ಸಚಿವರು ಉತ್ತರ ನೀಡಿದರೂ ಗದ್ದಲ ಕಡಿಮೆಯಾಗಲಿಲ್ಲ. ಮಂಗಳವಾರ ಮುಖ್ಯಮಂತ್ರಿ ಈ ಕುರಿತು ಉತ್ತರ ನೀಡುವುದಾಗಿ ಹೇಳಿದ ಬಳಿಕ ವಿಪಕ್ಷ ಶಾಸಕರು ಪ್ರತಿಭಟನೆಯನ್ನು ಕೈಬಿಟ್ಟರು.

 

Advertisement

Udayavani is now on Telegram. Click here to join our channel and stay updated with the latest news.

Next