ನವದೆಹಲಿ: ದೇಶದಲ್ಲಿ ಸದ್ಯ ಚರ್ಚೆಗೆ ಗ್ರಾಸವಾಗಿರುವ ಬಿಟ್ ಕಾಯಿನ್ ನಿಷೇಧಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನ.29ರಿಂದ ಶುರುವಾಗುವ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಕ್ರಿಪ್ಟೋ ಕರೆನ್ಸಿ ಮತ್ತು ಅಧಿಕೃತ ದಿಜಿಟಲ್ ಕರೆನ್ಸಿ ವಿಧೇಯಕ 2021ರಲ್ಲಿ ಈ ಅಂಶ ಉಲ್ಲೇಖಗೊಂಡಿದೆ.
ಸದ್ಯ ಖಾಸಗಿಯಾಗಿ ಚಾಲ್ತಿಯಲ್ಲಿರುವ ಕ್ರಿಪ್ಟೋ ಕರೆನ್ಸಿಗಳಿಗೆ ನಿಷೇಧ ಹೇರಿ, ಈಗಾಗಲೇ ಚರ್ಚೆಯಲ್ಲಿರುವಂತೆ ಭಾರತೀಯ ರಿಸರ್ವ್ ಬ್ಯಾಂಕ್‌ನಿಂದಲೇ ಕ್ರಿಪ್ಟೋ ಕರೆನ್ಸಿ ಜಾರಿ ಮಾಡುವ ಬಗ್ಗೆಯೂ ಅದರಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರದ ವತಿಯಿಂದಲೇ ಕ್ರಿಪ್ಟೋ ಕರೆನ್ಸಿ ಜಾರಿ ಮಾಡುವ ಬಗ್ಗೆ ಹಿಂದಿನ ಹಲವು ಸಂದರ್ಭಗಳಲ್ಲಿ ಚರ್ಚೆಯಾಗಿದ್ದರೂ, ಹೆಚ್ಚಿನ ಪ್ರಗತಿಯಾಗಿರಲಿಲ್ಲ.
ಇದನ್ನೂ ಓದಿ:ಉತ್ತರ ಪ್ರದೇಶಕ್ಕೆ ಸಿಗಲಿದೆ ಐದನೇ ಅಂ.ರಾ. ವಿಮಾನ ನಿಲ್ದಾಣ
ಕಳೆದ ವಾರ ನಡೆದಿದ್ದ ಸಂಸತ್‌ನ ವಿತ್ತೀಯ ವಿಚಾರಗಳಿಗಾಗಿನ ಸಂಸತ್‌ನ ಸ್ಥಾಯಿ ಸಮಿತಿ ಸಭೆಯಲ್ಲಿ ಕ್ರಿಪ್ಟೋ ಕರೆನ್ಸಿಯನ್ನು ಪೂರ್ಣ ಪ್ರಮಾಣದಲ್ಲಿ ನಿಷೇಧಿಸಲು ಸಾಧ್ಯವಿಲ್ಲ. ಅವುಗಳ ವಹಿವಾಟುಗಳ ಮೇಲೆ ನಿಯಂತ್ರಣ ಹೇರುವುದು, ಬಿಟ್ ಕಾಯಿನ್ ವಹಿವಾಟು ನಡೆಸುವ ಕಂಪನಿಗಳಿಗೆ ಇ-ಕಾಮರ್ಸ್ ಮಾನ್ಯತೆ ನೀಡಬೇಕು ಹಾಗೂ ಶೇ.1ರ ದರದಲ್ಲಿ ಜಿಎಸ್‌ಟಿ ವಿಧಿಸುವ ಬಗ್ಗೆಯೂ ಪ್ರಸ್ತಾಪಿಸಲಾಗಿತ್ತು.
ಪ್ರಧಾನಿ ಮೋದಿಯವರೂ ಕೂಡ ಬಿಟ್ ಕಾಯಿನ್ ದುರುಪಯೋಗ ತಪ್ಪಿಸುವ ಬಗ್ಗೆ ಮಾತನಾಡಿದ್ದರು. ಇದರ ಜತೆಗೆ ವಿದ್ಯುತ್ (ತಿದ್ದುಪಡಿ) ವಿಧೇಯಕ 2021 ಸೇರಿದಂತೆ 26 ವಿಧೇಯಕಗಳು ಮಂಡನೆಯಾಗುವ ಸಾಧ್ಯತೆಗಳಿವೆ.