Advertisement

ಕಾರ್ಯಕರ್ತರ ಶ್ರಮದಿಂದ ದೊಡ್ಡ ಗೆಲುವು

12:12 PM Jun 04, 2019 | Team Udayavani |

ಹುಬ್ಬಳ್ಳಿ: ಟಿಕೆಟ್ ನೀಡುವುದು ಬೇಡ ಎಂದು ಹೇಳುತ್ತಿದ್ದ ಸಂದರ್ಭದಲ್ಲಿ ಅತೀ ಹೆಚ್ಚು ಮತಗಳ ಅಂತರದ ನನ್ನ ಗೆಲುವಿನ ಹಿಂದೆ ಪಕ್ಷದ ಹಾಗೂ ಆರೆಸ್ಸೆಸ್‌ ಕಾರ್ಯಕರ್ತರ ಪರಿಶ್ರಮ ಬಹುದೊಡ್ಡದಾಗಿದೆ ಎಂದು ಕೇಂದ್ರ ರೈಲ್ವೆ ಸಹಾಯಕ ಸಚಿವ ಸುರೇಶ ಅಂಗಡಿ ಹೇಳಿದರು.

Advertisement

ಗೋಕುಲ ರಸ್ತೆ ಮಾರುತಿ ನಗರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಶವ ಕುಂಜಕ್ಕೆ ಸೋಮವಾರ ಭೇಟಿ ನೀಡಿ ಆರೆಸ್ಸೆಸ್‌ ಸಂಸ್ಥಾಪಕ ಡಾ| ಕೇಶವ ಹೆಡಗೇವಾರ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ರಾಷ್ಟ್ರೀಯವಾದ ವಿಚಾರದ ಮೇಲೆಯೇ ಈ ಲೋಕಸಭೆ ಚುನಾವಣೆ ನಡೆದಿದೆ. ದೇಶದ ಉಜ್ವಲ ಭವಿಷ್ಯಕ್ಕಾಗಿ ನರೇಂದ್ರ ಮೋದಿಯವರನ್ನು ಮತ್ತೂಮ್ಮೆ ಪ್ರಧಾನಿ ಮಾಡಬೇಕು ಎನ್ನುವ ಕಾರಣಕ್ಕೆ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ಈ ಬಾರಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿ ಬೆಂಬಲಿಸಿರುವುದು ವಿಶೇಷವಾಗಿದೆ ಎಂದರು.

ಬೆಳಗಾವಿಯ ರಾಜಕಾರಣ ಅಷ್ಟೊಂದು ಸುಲಭವಲ್ಲ. ಭಾಷೆಯೂ ಕೂಡ ಚುನಾವಣೆಯ ಒಂದು ಅಂಶವಾಗಿದೆ. ಟಿಕೆಟ್ ನೀಡಬಾರದು ಎನ್ನುತ್ತಿದ್ದ ಸಂದರ್ಭದಲ್ಲಿ ಪಕ್ಷದ ನಾಯಕರು ನನ್ನ ಬಗ್ಗೆ ಒಲವು ವ್ಯಕ್ತಪಡಿಸಿ ಅವಕಾಶ ನೀಡಿದರು. ಕ್ಷೇತ್ರದ ಜನರು ನನ್ನ ಕೈಬಿಡಲಿಲ್ಲ. ಯಾರೂ ನಿರೀಕ್ಷೆ ಮಾಡದಷ್ಟು ಮತಗಳ ಅಂತರದಿಂದ ನನಗೆ ಗೆಲುವು ನೀಡಿದ್ದಾರೆ. ಕ್ಷೇತ್ರದ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ಈ ಭಾಗದ ಪ್ರಮುಖ ಸಮಸ್ಯೆಗಳು, ರೈಲ್ವೆ ಯೋಜನೆಗಳ ಸಾಕಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಆರೆಸ್ಸೆಸ್‌ ಪ್ರಾಂತ ಸಹ ಕಾರ್ಯವಾಹ ಶ್ರೀಧರ ನಾಡಿಗೇರ ಮಾತನಾಡಿ, ಹಿಂದೆ ಸಮಾಜ ಒಡೆಯುವಂತಹ, ಪ್ರಾದೇಶಿಕ ಭಾವನೆ ಕೆರಳಿಸುವಂತಹ ರಾಜಕಾರಣವಿತ್ತು. ಕಾಂಗ್ರೆಸ್‌ನ ಈ ರಾಜಕಾರಣದಿಂದ ದೇಶದ ಜನರು ಬೇಸತ್ತು ದೇಶದ ಐಕ್ಯತೆ ಕಾಪಾಡುವ ಬಿಜೆಪಿಗೆ ಆಶೀರ್ವಾದ ನೀಡಿದ್ದಾರೆ. ಧರ್ಮ, ಜಾತಿ, ಉಪ ಜಾತಿಗಳ ಮೂಲಕ ರಾಜಕಾರಣ ಮಾಡಬಾರದು ಎನ್ನುವ ಸಂದೇಶವನ್ನು ಜನತೆ ನೀಡಿದೆ. ಮೋದಿಯವರ ಗುಣಾತ್ಮಕ ಅಂಶಗಳು, ರಾಷ್ಟ್ರೀಯವಾದ ಹಾಗೂ ಉಜ್ವಲ ದೇಶಕ್ಕಾಗಿ ಈ ಚುನಾವಣೆ ನಡೆದಿದೆ. ಸುರೇಶ ಅಂಗಡಿಯವರು ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದರು.

Advertisement

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ, ಮುಖಂಡರಾದ ಈರಣ್ಣ ಜಡಿ, ನಾಗೇಶ ಕಲಬುರ್ಗಿ, ಮಲ್ಲಿಕಾರ್ಜುನ ಸಾವಕಾರ, ಆರೆಸ್ಸೆಸ್‌ ಪ್ರಮುಖರಾದ ಶಿವಾನಂದ ಅವಟೆ, ಡಾ| ಗೋವಿಂದ ನರೇಗಲ್ಲ, ಸುಧಾಕರ ಶೆಟ್ಟಿ ಇನ್ನಿತರರಿದ್ದರು.

ಸಿದ್ಧಾರೂಢ ಹೆಸರು ನಾಮಕರಣಕ್ಕೆ ಮನವಿ:

ಹುಬ್ಬಳ್ಳಿ ರೈಲ್ವೆ ನಿಲ್ದಾಣ ಹಾಗೂ ವಿಮಾನ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ಸ್ವಾಮಿಗಳ ಹೆಸರು ನಾಮಕರಣ ಮಾಡುವಂತೆ ಟ್ರಸ್ಟ್‌ ಕಮಿಟಿ ವತಿಯಿಂದ ಸಚಿವ ಸುರೇಶ ಅಂಗಡಿಯವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಅವರು, ಈ ಕುರಿತು ರಾಜ್ಯ ಸರಕಾರದಿಂದ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕಾಗಿದೆ. ಹಿಂದೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ಚನ್ನಮ್ಮ ಹೆಸರು ನಾಮಕಾರಣ ಮಾಡುವ ವಿಚಾರದಲ್ಲಿ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಈ ವಿಚಾರದಲ್ಲಿ ರಾಜ್ಯ ಸರಕಾರದಿಂದ ಶಿಫಾರಸು ಬಂದರೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
Advertisement

Udayavani is now on Telegram. Click here to join our channel and stay updated with the latest news.

Next