Advertisement

ಸರಣಿ ಸಮಬಲದತ್ತ ವಿಂಡೀಸ್‌ ಚಿತ್ತ

10:06 AM Dec 09, 2019 | Team Udayavani |

ತಿರುವನಂತಪುರ: ಶುಕ್ರವಾರ ಹೈದರಾಬಾದ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದ ಜಿದ್ದಾಜಿದ್ದಿನ ಹೋರಾಟದಲ್ಲಿ 6 ವಿಕೆಟ್‌ಗಳ ಗೆಲುವು ದಾಖಲಿಸಿದ ಭಾರತವು ವೆಸ್ಟ್‌ಇಂಡೀಸ್‌ ವಿರುದ್ಧದ ಸರಣಿಯ ಎರಡನೇ ಪಂದ್ಯವನ್ನಾಡಲು ಸಜ್ಜಾಗಿ ನಿಂತಿದೆ. ರವಿವಾರ ತಿರುವನಂತಪುರದಲ್ಲಿ ನಡೆಯುವ ಈ ಪಂದ್ಯ ವಿಂಡೀಸ್‌ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ವೆಸ್ಟ್‌ ಇಂಡೀಸ್‌ ಗೆದ್ದರೆ ಮಾತ್ರ ಸರಣಿ ಸಮಬಲದಲ್ಲಿ ನಿಲ್ಲದಿದೆ. ಇಲ್ಲದಿದ್ದರೆ ಸರಣಿ ಭಾರತದ ವಶವಾಗಲಿದೆ.

Advertisement

ಹೈದರಾಬಾದ್‌ನ ಬ್ಯಾಟಿಂಗ್‌ ಟ್ರ್ಯಾಕ್‌ ಪಿಚ್‌ನಲ್ಲಿ ಎರಡೂ ತಂಡಗಳು ರನ್‌ಗಳ ಸುರಿಮಳೆಯನ್ನೇ ಸುರಿಸಿದ್ದವು. ಕೊಹ್ಲಿ ಅವರ ಅಬ್ಬರದ ಬ್ಯಾಟಿಂಗ್‌ನಿಂದ ಭಾರತ ಮೇಲುಗೈ ಸಾಧಿಸಿತ್ತು. ಆದರೆ ತಿರುವನಂತಪುರದ ಪಿಚ್‌ ಯಾವ ರೀತಿ ವರ್ತಿಸಲಿದೆ ಎನ್ನುವುದು ಇತ್ತಂಡಗಳ ನಾಯಕರಿಗೆ ತಲೆನೋವಾಗಿದೆ. ಪಿಚ್‌ ಬ್ಯಾಟಿಂಗಿಗೆ ನೆರವಾದರೆ ಭಾರತ ಮತ್ತೆ ಭರ್ಜರಿ ಆಟವಾಡಿ ಗೆಲುವಿಗೆ ಪ್ರಯತ್ನಿಸಬಹುದು.

ಬೌಲಿಂಗ್‌, ಫೀಲ್ಡಿಂಗ್‌ ಕಳಪೆ
ಮೊದಲ ಪಂದ್ಯವನ್ನು ಗಮನಿಸಿದರೆ ಎರಡೂ ತಂಡಗಳು ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿವೆ. ಆದರೆ ಬೌಲಿಂಗ್‌ ಅಥವಾ ಫೀಲ್ಡಿಂಗ್‌ ತೀರ ಕಳಪೆ ಮಟ್ಟ ದಲ್ಲಿರುವುದು ಎದ್ದುಕಾಣುತ್ತಿತ್ತು. ಸಾಧಾರಣ ತಂಡ ವಾಗಿರುವ ವಿಂಡೀಸ್‌ ಕೂಡ ಭಾರತೀಯ ಬೌಲರ್‌ಗಳನ್ನು ಬಹಳಷ್ಟು ದಂಡಿಸಿ 200 ಪ್ಲಸ್‌ ಪೇರಿಸಿರುವುದು ದೊಡ್ಡ ಸಾಧನೆಯೆಂದು ಹೇಳಬಹುದು. ಭಾರತ ಬೌಲಿಂಗ್‌ ದಾಳಿಯನ್ನು ಇನ್ನಷ್ಟು ಬಿಗುಗೊಳಿಸದಿದ್ದರೆ ಮತ್ತು ಫೀಲ್ಡಿಂಗನ್ನು ಚುರುಕುಗೊಳಿಸದಿದ್ದಲ್ಲಿ ವಿಂಡೀಸ್‌ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.

ರಾಹುಲ್‌- ಕೊಹ್ಲಿ ಉತ್ತಮ ಫಾರ್ಮ್
ಆರಂಭಕಾರ ಕನ್ನಡಿಗ ಕೆ.ಎಲ್‌. ರಾಹುಲ್‌ ಮತ್ತು ವಿರಾಟ್‌ ಕೊಹ್ಲಿ ಅವರ ಬ್ಯಾಟಿಂಗ್‌ ಮೇಲೆ ತಂಡ ಹೆಚ್ಚು ಅವಲಂಬಿತವಾಗಿದೆ. ಶುಕ್ರವಾರದ ಪಂದ್ಯದಲ್ಲಿ ರಾಹುಲ್‌- ಕೊಹ್ಲಿ ಕೆರಿಬಿಯನ್‌ ಬೌಲರ್‌ಗಳ ಮೇಲೆರಗಿ ಎರಡನೇ ವಿಕೆಟಿಗೆ 10.1 ಓವರ್‌ಗಳಿಂದ ಭರ್ತಿ 100 ರನ್‌ ಪೇರಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇವರಿಬ್ಬರ ಬ್ಯಾಟಿಂಗ್‌ ವೈಭವ ಎರಡನೇ ಪಂದ್ಯದಲ್ಲೂ ಮುಂದುವರಿಯುವ ಸಾಧ್ಯತೆಯಿದೆ. ಇದೇ ವೇಳೆ ರಾಹುಲ್‌ ಟಿ20 ಪಂದ್ಯಗಳಲ್ಲಿ ಸಾವಿರ ರನ್‌ ಪೂರ್ತಿಗೊಳಿಸಿದ ಸಾಧನೆಯನ್ನು ಮಾಡಿ ಮಿಂಚಿದ್ದಾರೆ.

ಕಳೆದ ಪಂದ್ಯದಲ್ಲಿ ನಿರಾಶೆ ಮೂಡಿಸಿದ ರೋಹಿತ್‌ ಶರ್ಮ ರವಿವಾರದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ನಡೆಸುವ ಸಾಧ್ಯತೆಯಿದೆ. ಆದರೆ ಭಾರತಕ್ಕೆ ಬೌಲಿಂಗ್‌ ಮತ್ತು ಫೀಲ್ಡಿಂಗ್‌ನದ್ದೇ ಚಿಂತೆ. ಅನುಭವಿ ಬೌಲರ್‌ ಭುವನೇಶ್ವರ್‌ ಕುಮಾರ್‌ ವಿಕೆಟ್‌ ಪಡೆಯುವಲ್ಲಿ ವಿಫ‌ಲರಾಗುತ್ತಿದ್ದಾರೆ. ವಾಷಿಂಗ್ಟನ್‌ ಸುಂದರ್‌ ಅವರ ಕಳಪೆ ಫೀಲ್ಡಿಂಗ್‌ ಕೂಡ ತಂಡಕ್ಕೆ ತಲೆನೋವಾಗಿದೆ. ಕಳೆದ ಪಂದ್ಯದಲ್ಲಿ ಎರಡು ಕ್ಯಾಚ್‌ ಮತ್ತು ಹಲವು ಮಿಸ್‌ ಫೀಲ್ಡ್‌ ಮಾಡಿರುವುದೇ ಇದಕ್ಕೆ ಸಾಕ್ಷಿ. ಇನ್ನು ಬಾಂಗ್ಲಾ ವಿರುದ್ಧ ಉತ್ತಮ ಬೌಲಿಂಗ್‌ ದಾಳಿ ನಡೆಸಿದ ದೀಪಕ್‌ ಚಹರ್‌ ಕಳೆದ ಪಂದ್ಯದಲ್ಲಿ ದುಬಾರಿಯಾಗಿ ಪರಿಣಮಿಸಿದರು. ಭಾರತ ತಂಡದಲ್ಲಿ ದೊಡ್ಡ ಬದಲಾವಣೆ ಸಂಭವಿಸದಿದ್ದರೂ ಬೌಲಿಂಗ್‌ನಲ್ಲಿ ಕೆಲವು ಬದಲಾವಣೆ ತಂದರೆ ಅಚ್ಚರಿಯಿಲ್ಲ. ಸುಂದರ್‌ ಬದಲಿಗೆ ಕುಲದೀಪ್‌ ಯಾದವ್‌ ಅವರಿಗೆ ಅವಕಾಶ ನೀಡುವ ಸಾಧ್ಯತೆಯಿದೆ.

Advertisement

ವಿಂಡೀಸ್‌ಗೆ ಬೌಲಿಂಗ್‌ ಚಿಂತೆ
ಟಿ20 ಚಾಂಪಿಯನ್ನರಿಗೆ ಎದುರಾದ ದೊಡ್ಡ ಸಮಸ್ಯೆಯೆಂದರೆ ಕಳಪೆ ಬೌಲಿಂಗ್‌. ಕಳೆದ ಪಂದ್ಯದಲ್ಲಿ 207 ರನ್‌ ಬಾರಿಸಿಯೂ ಪಂದ್ಯವನ್ನು ಉಳಿಸಿಕೊಳ್ಳಲು ಸಾಧ್ಯವಾಗದಿರುವುದು ಇದಕ್ಕೆ ಉತ್ತಮ ಸಾಕ್ಷಿ. ಬ್ಯಾಟಿಂಗ್‌ ಮಟ್ಟಿಗೆ ಕೆರಿಬಿಯನ್‌ ಆಟಗಾರರನ್ನೂ ದೂರುವಂತಿಲ್ಲ ಪ್ರತಿಯೊಬ್ಬರೂ ಎದುರಾಳಿ ಬೌಲಿಂಗ್‌ ಪಡೆಯನ್ನು ಧ್ವಂಸಗೈದಿದ್ದಾರೆ. ವಿಂಡೀಸ್‌ಗೆ ಭಾರತದ ಪಿಚ್‌ಗಳಲ್ಲಿ ಆಡಿದ ಅಪಾರ ಅನುಭವವಿದ್ದರೂ ಬೌಲಿಂಗ್‌ನಲ್ಲಿ ಮಾತ್ರ ಎಡವುತ್ತಿದೆ. ಕಳೆದ ಪಂದ್ಯದಲ್ಲಿ ವಿಂಡೀಸ್‌ ಪರ ಶೆಲ್ಡನ್‌ ಕಾಟ್ರೆಲ್‌ ಹೊರತುಪಡಿಸಿ ಮತ್ತೆಲ್ಲ ಬೌಲರ್‌ಗಳು ದುಬಾರಿ ಎನಿಸಿದರು. ಕೆಸ್ರಿಕ್‌ ವಿಲಿಯಮ್ಸ್‌ 3.4 ಓವರ್‌ಗಳಲ್ಲಿ ಬರೋಬ್ಬರಿ 60 ರನ್‌ ಬಿಟ್ಟುಕೊಡುವ ಮೂಲಕ ವಿಂಡೀಸ್‌ ಪಾಲಿಗೆ ವಿಲನ್‌ ಆಗಿ ಕಾಡಿದರು. ದ್ವಿತೀಯ ಪಂದ್ಯದಲ್ಲಿ ಇವರ ಸ್ಥಾನಕ್ಕೆ ಕಿಮೋ ಪೌಲ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಅನುಭವಿಗಳಾದ ಜಾಸನ್‌ ಹೋಲ್ಡರ್‌ ಕೂಡ ವಿಕೆಟ್‌ ಪಡೆಯುವಲ್ಲಿ ವಿಫ‌ಲರಾಗುತ್ತಿದ್ದಾರೆ.

ಸಂಭಾವ್ಯ ತಂಡಗಳು
ಭಾರತ
ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ, ಕೆ.ಎಲ್‌. ರಾಹುಲ್‌, ರಿಷಭ್‌ ಪಂತ್‌, ಮನೀಷ್‌ ಪಾಂಡೆ, ಶ್ರೇಯಸ್‌ ಅಯ್ಯರ್‌, ಶಿವಂ ದುಬೆ, ರವೀಂದ್ರ ಜಡೇಜ, ಸಂಜು ಸ್ಯಾಮ್ಸನ್‌, ವಾಷಿಂಗ್ಟನ್‌ ಸುಂದರ್‌/ ಕುಲದೀಪ್‌ ಯಾದವ್‌, ಯಜುವೇಂದ್ರ ಚಹಲ್‌, ದೀಪಕ್‌ ಚಹರ್‌/ ಮೊಹಮ್ಮದ್‌ ಶಮಿ, ಭುವನೇಶ್ವರ್‌ ಕುಮಾರ್‌,

ವೆಸ್ಟ್‌ ಇಂಡೀಸ್‌
ಕೈರನ್‌ ಪೊಲಾರ್ಡ್‌ (ನಾಯಕ), ಫ್ಯಾಬಿಯನ್‌ ಅಲನ್‌, ಬ್ರ್ಯಾಂಡನ್‌ ಕಿಂಗ್‌, ದಿನೇಶ್‌ ರಾಮದಿನ್‌, ಶೆಲ್ಡನ್‌ ಕಾಟ್ರೆಲ್‌, ಎವಿನ್‌ ಲೆವಿಸ್‌, ಶಫೇìನ್‌ ರುದರ್‌ಫೋರ್ಡ್‌, ಹೆಟ್‌ಮೈರ್‌, ಖಾರಿ ಪಿಯರೆ, ಲೆಂಡ್ಲ್ ಸಿಮನ್ಸ್‌, ಜಾಸನ್‌ ಹೋಲ್ಡರ್‌, ಹೇಡನ್‌ ವಾಲ್ಶ್ ಜೂನಿಯರ್‌, ಕೆಸ್ರಿಕ್‌ ವಿಲಿಯಮ್ಸ್‌/ ಕೀಮೊ ಪೌಲ್‌.

Advertisement

Udayavani is now on Telegram. Click here to join our channel and stay updated with the latest news.

Next