Advertisement
ಮನೆಯ ಅಂದ ಹೆಚ್ಚಿಸುವುದಕ್ಕೆ ಒಂದು ಸುಂದರವಾದ ಕಿಟಕಿ ಇಲ್ಲದಿದ್ದರೆ ಹೇಗೆ? ಆದರೆ ಕಿಟಕಿಯನ್ನು ಮನೆಯಲ್ಲಿ ಯಾವ ಜಾಗದಲ್ಲಿ ಇರಿಸಬೇಕು, ವಿನ್ಯಾಸ ಹೇಗಿದ್ದರೆ ಚಂದ, ಗಾತ್ರ ಎಷ್ಟು ಹೀಗೆ ಹಲವು ವಿಷಯಗಳನ್ನು ತಿಳಿದಿದ್ದರೆ ಮನೆಯ ಅಂದವನ್ನು ಇನ್ನಷ್ಟು ಹೆಚ್ಚಿಸಬಹುದು. ಸ್ವಂತ ಮನೆಯೇ ಆಗಲಿ ಅಥವಾ ಅಪಾರ್ಟ್‌ಮೆಂಟ್ ಯಾವುದೇ ಆದರೂ ಅಲ್ಲಿ ಕಿಟಕಿ ಪ್ರಮುಖ ಪಾತ್ರ ವಹಿಸುತ್ತವೆ. ಅಪಾರ್ಟ್‌ಮೆಂಟ್‌ಗಳಾದರೆ ಮನೆಕೊಳ್ಳಲು ಬರುವವರನ್ನು ಆಕರ್ಷಿಸುವ ಪೈಕಿ ಇದು ಪ್ರಮುಖ ಪಾತ್ರ ವಹಿಸುವುದರಿಂದ ಬಿಲ್ಡರ್‌ಗಳು ಸುಂದರ ಕಿಟಕಿ, ಬಾಲ್ಕನಿ ನಿರ್ಮಿಸುವಲ್ಲಿ ಹೆಚ್ಚು ಗಮನ ಹರಿಸುತ್ತಾರೆ. ಮನೆಯ ಸೌಂದರ್ಯ ಹೆಚ್ಚಿಸಲು ಕೆಲವು ವಿಶಿಷ್ಟ ವಿನ್ಯಾಸಗಳ ಮಾಹಿತಿ ಇಲ್ಲಿದೆ.
ನೈಸರ್ಗಿಕ ಬೆಳಕು ಆರೋಗ್ಯಕರ ಜೀವನಕ್ಕೆ ಅಗತ್ಯ. ಇದರಿಂದ ನಮ್ಮ ದೇಹ, ಮನಸ್ಸು ಪ್ರಪುಲ್ಲವಾಗಿರುತ್ತದೆ. ಹಾಗಾಗಿ ಹೆಚ್ಚು ಬೆಳುಕು ಬರುವಂತಿರಲಿ. ಚಿಕ್ಕ ಮಕ್ಕಳು ಮತ್ತು ದೊಡ್ಡವರು ಹೀಗೆ ಎಲ್ಲರೂ ಕಿಟಕಿಯಿಂದಾಚೆ ನೋಡಲು ಸಾಧ್ಯವಾಗುವಂತಿರಲಿ. ಹೆಚ್ಚು ಎತ್ತರದಲ್ಲಿ ಇದ್ದರೆ ಅದು ಅಷ್ಟು ಸುಂದರವಾಗಿರುವುದಿಲ್ಲ. ನೆಲದಿಂದ ಸೀಲಿಂಗ್‌ವರೆಗೂ ಗಾಜಿನ ಕಿಟಕಿ ನಿರ್ಮಿಸ ಬಹುದು. ಇದು ಸ್ವಲ್ಪ ವೆಚ್ಚದಾಯಕ. ಬೀಚ್, ನದಿ ತೀರದ ರೆಸಾರ್ಟ್, ಹೋಟೆಲ್ ಮತ್ತು ಅಪಾರ್ಟ್ ಮೆಂಟ್‌ಗಳಲ್ಲಿ ಇಂದು ಹೆಚ್ಚು ಪ್ರಚಲಿತದಲ್ಲಿದೆ. ಈ ರೀತಿಯ ಕಿಟಕಿಯಿಂದ ಪ್ರಕೃತಿ ಸೌಂದರ್ಯ ಸವಿಯಬಹುದು. ಇದು ಸೀಲಿಂಗ್‌ನ ಹತ್ತಿರ ಚಿಕ್ಕದಾಗಿ ಆಯತಾಕಾರದಲ್ಲಿ ನಿರ್ಮಿಸಬಹುದಾದ ಮಾದರಿ. ಇದರಿಂದ ನಿಮಗೆ ಹೊರಗಡೆ ನೋಡಲು ಸಾಧ್ಯವಿಲ್ಲ. ಆದರೆ ನೈಸರ್ಗಿಕ ಬೆಳಕು ಪಡೆಯಲು ಸಹಾಯಕ.
Related Articles
ಮನೆಯ ಎಲ್ಲ ಭಾಗಗಳಲ್ಲಿಯೂ ಒಂದೇ ರೀತಿಯಾದ ಕಿಟಕಿ ನಿರ್ಮಿಸಿದರೆ ಅದು ಸಮಂಜಸವಲ್ಲ. ಹಾಗಾಗಿ ವಿವಿಧ ಭಾಗಗಳಲ್ಲಿ ವಿವಿಧ ವಿನ್ಯಾಸಗಳಿರಲಿ. ಮಲಗುವ ಕೊಣೆಯಾದರೆ ಅಲ್ಲಿ ನಿಮ್ಮ ಮಂಚಕ್ಕೆ ನೇರವಾಗಿ ಬೆಳಕು ಬಿಳುವಂತೆ ಮಧ್ಯಮ ಪ್ರಮಾಣದ ಕಿಟಕಿ ಇರಲಿ. ಊಟದ ಕೋಣೆಯಲ್ಲಿ ವಿಶಾಲವಾದ ಮತ್ತು ಹೆಚ್ಚು ಕಿಟಕಿಗಳಿದ್ದರೆ ಊಟ ಮಾಡುವಾಗ ಒಂದೊಳ್ಳೆ ಮನಸ್ಥಿತಿ ನಿಮ್ಮದಾಗುತ್ತದೆ. ಮತ್ತು ಪರಿಸರದ ಮಧ್ಯದಲ್ಲಿರುವ ಹಾರ ಸೇವಿಸಿದ ಅನುಭವ ಲಭಿಸುತ್ತದೆ. ಅಡುಗೆ ಮನೆಯಾದರೆ ಒಲೆಯ ಪಕ್ಕದಲ್ಲೇ ಒಂದು ಕಿಟಕಿ ಇರಲಿ. ಅದು ಅಡುಗೆ ಮಾಡುವವರಿಗೆ ಹೆಚ್ಚು ಸಹಕಾರಿ. ಮಕ್ಕಳು ಓದುವ ಕೋಣೆಗಳಲ್ಲಿ ಪಾರದರ್ಶಕ ಗಾಜಿನ ವಿಶಾಲ ಕಿಟಕಿಯಿದ್ದರೆ ಅವರ ಓದಿಗೆ ಹೆಚ್ಚು ನೆರವಾಗಬಲ್ಲದು.
Advertisement
ಈಗ ಟ್ರೆಂಡ್ ಹೇಗಿದೆಈಗೀಗ ಜನರು ರೆಟ್ರೋ ಶೈಲಿಗೆ ಮಾರು ಹೊಗುತ್ತಿದ್ದಾರೆ. ಹಳೆಯ ಶೈಲಿಯ ಗಾಜು, ಚೌಕಟ್ಟು, ವಿನ್ಯಾಸ ಹೀಗೆ ಎಲ್ಲವೂ ರೆಟ್ರೋ ಶೈಲಿಯದ್ದಾದರೂ ಅದರಲ್ಲೀ ಸ್ವಲ್ಪ ಹೊಸತನವನ್ನು ಬೆರೆಸಿ ಚೆಂದದ ಕಿಟಕಿಯನ್ನು ಅಳವಡಿಸಿಕೊಳ್ಳುವುದು ಇಂದಿನ ಟ್ರೆಂಡ್. ಹೀಗೆ ಇನ್ನು ಕಿಟಕಿಯ ಬಗ್ಗೆ ಹೆಚ್ಚು ವ್ಯಾಮೋಹ ವಿರುವವರು ಕಿಟಕಿಯ ಪಕ್ಕ ಕುಳಿತುಕೊಳ್ಳಲು ಸಾಧ್ಯವಾಗುವಂತೆ ಸ್ಥಳಾವಕಾಶ ಬಿಟ್ಟು ನಿರ್ಮಿಸುತ್ತಾರೆ. ಇದರಿಂದ ಸೂರ್ಯೋದಯ, ಸೂರ್ಯಾಸ್ತಮಾನಗಳ ಸಮಯ ಹೆಚ್ಚು ಖುಷಿ ನೀಡುತ್ತದೆ. ಅಡ್ಡ ಸರಿಬಲ್ಲ ಮತ್ತು ರೈಲು ಬೋಗಿಯಲ್ಲಿರುವಂತೆ ಮೇಲಕ್ಕೆತಯ್ತಬಲ್ಲ ಕಿಟಕಿಗಳೂ ಹೆಚ್ಚು ಟ್ರೆಂಡ್ ಆಗುತ್ತಿವೆ. ಆಕಾರ ಗಾತ್ರ ಹೇಗಿರಬೇಕು?
ಕಿಟಕಿ ಆಕಾರಗಳು ಮತ್ತು ಗಾತ್ರಗಳನ್ನು ಆಯ್ಕೆ ಮಾಡುವಾಗ ಯಾವುದೇ ನಿರ್ದಿಷ್ಟ ವಿನ್ಯಾಸ, ನಿಯಮಗಳಿಲ್ಲ. ನಿಮ್ಮ ಮನೆ ಮತ್ತು ಗೋಡೆಗಳಿಗೆ ಹೊಂದಾಣಿಯಾಗುವ ಮತ್ತು ಮನೆಯ ಸೌಂದರ್ಯ ಹೆಚ್ಚಿಸುವ ಸಂರಚನೆಯ ಆಯತಾಕಾರ, ಚೌಕಾಕಾರ ಹಾಗೂ ಉದ್ದನೆಯ ವಿನ್ಯಾಸದ ಕಿಟಕಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಸ್ವತ್ಛಗೊಳಿಸಲು ಹೆಚ್ಚು ಸಹಾಯಕ ವಾಗುವಂತಿರಲಿ. ಕಿಟಕಿಗಳು ಯಾವಾಗಲೂ ಪೂರ್ವ ಮತ್ತು ಪಶ್ಚಿಮ ದಿಕ್ಕಿಗಿದ್ದರೆ ಹೆಚ್ಚು ಉಪಯುಕ್ತ. ಸೂರ್ಯನ ಬೆಳಕನ್ನು ಹೆಚ್ಚು ಮನೆಯೊಳಗೆ ಬರುವಂತೆ ಮಾಡುತ್ತದೆ. ಅಲ್ಲದೇ ಇತರ ದಿಕ್ಕು ಗಳಿಗೂ ಕಿಟಕಿಗಳಿರಲಿ. ಇವು ಮಳೆಗಾಲದಲ್ಲಿ ಹೆಚ್ಚು ಉಪಯುಕ್ತ. ಕಿಟಕಿಯ ಬಳಿ ಇವೆಲ್ಲ ಇರಲಿ
ಕಿಟಕಿ ಜತೆಗೆ ಕೆಲವೊಂದಿಷ್ಟು ವಸ್ತುಗಳಿದ್ದರೆ ಅದರ ಅಂದ ಇನ್ನಷು ಹೆಚ್ಚಾಗುತ್ತದೆ. ಗಿಡಗಳ ಪಾಟ್, ಹೂವಿನ ಗಿಡ, ಹಸುರು ಬಳ್ಳಿಗಳು, ಅಕ್ವೇರಿಯಂ, ಆ್ಯಂಟಿಕ್ ವಸ್ತು, ಸುಂದರ ಕಲಾಕೃತಿ ಅಥವಾ ಗೊಂಬೆಗಳನ್ನು ಇರಿಸಿದರೆ ಕಿಟಕಿಗೆ ಹೆಚ್ಚು ಮೆರುಗು ನೀಡುತ್ತವೆ. ಯಾವ ರೀತಿಯ ಗಾಜು ಸೂಕ್ತ?
ಕಿಟಕಿಯನ್ನು ನಿರ್ಮಿಸುವಾಗ ಅದರ ಫ್ರೆಮ್‌ನಂತೆ ಬಳಸುವ ಗಾಜಿಗೂ ಹೆಚ್ಚು ಆದ್ಯತೆ ನೀಡಬೇಕು. ಪಾರದರ್ಶಕ, ಅಪಾರದರ್ಶಕ, ನೇರಾಳತೀತ ಕಿರಣಗಳಿಂದ ರಕ್ಷಿಸುವ ಮತ್ತು ನಿಮಗೆ ಬೇಕಾದ ಬಣ್ಣದ ಗಾಜು ಬಳಸಬಹುದು. ಅದರಿಂದ ಒಳ ಬರುವ ಬೇಳಕು ಸಹ ಅದೇ ಬಣ್ಣದಲ್ಲಿರುತ್ತದೆ. ನೀವು ಕಲೋಪಾಸಕರಾಗಿದ್ದರೆ ಪಾರದರ್ಶಕ ಗಾಜಿನ ಮೇಲೆ ವಿವಿಧ ಕಲಾಕೃತಿಗಳನ್ನೂ ಬಿಡಿಸಬಹುದು. ಮಾರುಕಟ್ಟೆಗಳಲ್ಲಿ ಅನೇಕ ಫ್ರಿಂಟೆಡ್ ಹಾಳೆಗಳು ಸಿಗುತ್ತವೆ. ಅವುಗಳನ್ನು ಅಂಟಿಸಬಹುದು. – ಶಿವಾನಂದ ಎಚ್.