Advertisement

ವಿಂಡೀಸ್‌ ಏಕದಿನ ಸರಣಿ : ಮಾಯಾಂಕ್‌ ಅಗರ್ವಾಲ್‌ಗೆ ಸ್ಥಾನ?

09:48 AM Nov 18, 2019 | sudhir |

ಹೊಸದಿಲ್ಲಿ: ಟೆಸ್ಟ್‌ ಪಂದ್ಯಗಳಲ್ಲಿ ಅಮೋಘ ಬ್ಯಾಟಿಂಗ್‌ ಮೂಲಕ ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸುತ್ತಿರುವ ಕರ್ನಾಟಕದ ಮಾಯಾಂಕ್‌ ಅಗರ್ವಾಲ್‌ ಅವರನ್ನು ಸೀಮಿತ ಓವರ್‌ಗಳ ಪಂದ್ಯಗಳಲ್ಲೂ ಆಡಿಸುವ ಸಾಧ್ಯತೆಯೊಂದು ಕಾಣಿಸುತ್ತಿದೆ.

Advertisement

ಮುಂದಿನ ತಿಂಗಳು ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ದ ನಡೆಯುವ 3 ಪಂದ್ಯಗಳ ಏಕದಿನ ಸರಣಿ ವೇಳೆ ಮಾಯಾಂಕ್‌ ಅಗರ್ವಾಲ್‌ ಅವರನ್ನು ಆಯ್ಕೆಗೆ ಪರಿಗಣಿಸುವ ಸಾಧ್ಯತೆ ಇದೆ. ಈ ಸರಣಿ ವೇಳೆ ಭಾರತ ತಂಡದ ಉಪನಾಯಕ ರೋಹಿತ್‌ ಶರ್ಮ ವಿಶ್ರಾಂತಿ ಪಡೆಯುವ ಸಂಭವ ಇರುವುದರಿಂದ ಇವರ ಜಾಗಕ್ಕೆ ಅಗರ್ವಾಲ್‌ ಕಾಣಿಸಿಕೊಳ್ಳುವ ಸಂಭವವಿದೆ ಎನ್ನುತ್ತವೆ ಬಿಸಿಸಿಐ ಮೂಲಗಳು.

ಮುಂದಿನ ವರ್ಷದ ಆರಂಭದಲ್ಲೇ ನ್ಯೂಜಿಲ್ಯಾಂಡ್‌ ವಿರುದ್ಧ 5 ಟಿ20, 3 ಏಕದಿನ ಮತ್ತು 2 ಟೆಸ್ಟ್‌ ಪಂದ್ಯಗಳ ಸರಣಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ರೋಹಿತ್‌ ಶರ್ಮ ವಿಂಡೀಸ್‌ ವಿರುದ್ಧದ ಸರಣಿ ವೇಳೆ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ರೋಹಿತ್‌ ಬಿಡುವಿಲ್ಲದೆ ಆಡುತ್ತ ಬಂದಿರುವುರಿಂದ ಅವರಿಗೆ ವಿಶ್ರಾಂತಿ ನೀಡಬೇಕು ಎನ್ನುವುದು ಬಿಸಿಸಿಐ ನಿಲುವು ಕೂಡ ಆಗಿದೆ.

ಧವನ್‌ಗೆ ಗಂಡಾಂತರ
ಒಂದು ವೇಳೆ ಅಗರ್ವಾಲ್‌ ಸೀಮಿತ ಓವರ್‌ಗಳಲ್ಲೂ ಅವಕಾಶ ಪಡೆದು ಇದರ ಭರಪೂರ ಲಾಭವೆತ್ತಿದರೆ ಶಿಖರ್‌ ಧವನ್‌ಗೆ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. 2023ರ ಏಕದಿನ ವಿಶ್ವಕಪ್‌ ಪಂದ್ಯಾವಳಿಯನ್ನು ಗಮನದಲ್ಲಿರಿಸಿ ಮಾಯಾಂಕ್‌ ಅಗರ್ವಾಲ್‌ ಅವರನ್ನು “ಸುದೀರ್ಘಾವಧಿಯ ಆರಂಭಿಕ’ನ ಸ್ಥಾನಕ್ಕೆ ಪರಿಗಣಿಸುವುದು ಕೂಡ ಬಿಸಿಸಿಐ ಉದ್ದೇಶ ಎನ್ನಲಾಗಿದೆ.

“ಮಾಯಾಂಕ್‌ ಅಗರ್ವಾಲ್‌ ಅವರ ಪ್ರತಿಭೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಅವರನ್ನು ಸೀಮಿತ ಓವರ್‌ಗಳ ಪಂದ್ಯಗಳಿಗೂ ಧಾರಾಳವಾಗಿ ಪರಿಗಣಿಸಬಹುದು’ ಎಂದು ಈಗಾಗಲೇ ಮಾಜಿ ಕ್ರಿಕೆಟಿಗ, ವಿಶ್ಲೇಷಕ ದೀಪ್‌ ದಾಸ್‌ಗುಪ್ತ ಶಿಫಾರಸು ಮಾಡಿದ್ದಾರೆ.

Advertisement

ಟೆಸ್ಟ್‌ ಕ್ರಿಕೆಟ್‌ನಲ್ಲಿ ಮಾಯಾಂಕ್‌ ಅಗರ್ವಾಲ್‌ ಅವರದು “ಕನಸಿನ ಆರಂಭ’. ಈವರೆಗಿನ 10 ಟೆಸ್ಟ್‌ಗಳಲ್ಲಿ ಎರಡು ದ್ವಿಶತಕ ಹಾಗೂ ಒಂದು ಶತಕ ಬಾರಿಸಿ ಗಮನ ಸೆಳೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next