Advertisement

ಗಾಳಿ-ಮಳೆ; 551.36 ಹೆಕ್ಟರ್‌ ಬೆಳೆ ಹಾನಿ

02:24 PM May 20, 2022 | Team Udayavani |

ಬಳ್ಳಾರಿ: ಗಣಿನಾಡು ಬಳ್ಳಾರಿ-ವಿಜಯನಗರ ಅವಳಿ ಜಿಲ್ಲೆಗಳಲ್ಲಿ ಕಳೆದ ಕೆಲ ದಿನಗಳಿಂದ ಸುರಿದ ಗಾಳಿಮಳೆಗೆ 551.36 ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, 337 ಮನೆಗಳು ಶಿಥಿಲಗೊಂಡಿವೆ. ವಿಜಯನಗರ ಜಿಲ್ಲೆಯಲ್ಲಿ ಕೃಷಿ ಬೆಳೆ ಹೆಚ್ಚು ಹಾನಿಯಾಗಿದ್ದು, ಜಾನುವಾರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿವೆ.

Advertisement

ಬಳ್ಳಾರಿ ಜಿಲ್ಲೆ 7.92 ಲಕ್ಷ ರೂ. ನಷ್ಟ

ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕಳೆದ 48 ಗಂಟೆಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಒಂದೆರಡು ಬಾರಿ ರಭಸವಾಗಿ ಸುರಿದರೆ, ಉಳಿದಂತೆ ಸಾಧಾರಣವಾಗಿ ಜಿಟಿಜಿಟಿಯಾಗಿ ಸುರಿದಿದೆ. ಹೀಗೆ ಸುರಿದ ಮಳೆಗೆ ಬಳ್ಳಾರಿ ಜಿಲ್ಲೆಯ ಬಳ್ಳಾರಿ 14, ಕುರುಗೋಡು 9, ಸಿರುಗುಪ್ಪ 11, ಸಂಡೂರು 4, ಕಂಪ್ಲಿ 4 ಸೇರಿ ಒಟ್ಟು 42 ಮನೆಗಳು ಕುಸಿದಿವೆ. ಈ ಪೈಕಿ 39 ಭಾಗಶಃ ಕುಸಿದಿದ್ದು, ಮೂರು ಮನೆಗಳು ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿವೆ. ಆದರೆ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಳ್ಳಾರಿ ತಾಲೂಕು ಬಿ.ಡಿ. ಹಳ್ಳಿ ಗ್ರಾಮದಲ್ಲಿ 8.9 ಹೆಕ್ಟೇರ್‌ ಭತ್ತ, ಕಪ್ಪಗಲ್ಲು ಗ್ರಾಮದಲ್ಲಿ 9 ಹೆಕ್ಟೇರ್‌ ಪಪ್ಪಾಯಿ ಬೆಳೆಗಳು ಬಿರುಗಾಳಿ ಸಹಿತ ಮಳೆಗೆ ಹಾನಿಯಾಗಿದ್ದು, ಅಂದಾಜು 7.91 ಲಕ್ಷ ರೂ. ನಷ್ಟವಾಗಿದೆ ಎಂದು ಜಿಲ್ಲಾಡಳಿತದ ಅಂಕಿ ಅಂಶಗಳು ತಿಳಿಸಿವೆ.

ಬಳ್ಳಾರಿ ತಾಲೂಕು ಡಿ.ಕಗ್ಗಲ್ಲು ಗ್ರಾಮದಲ್ಲಿ ಬುಧವಾರ ರಾತ್ರಿ ಸಿಡಿಲು ಬಡಿದು 4 ದೊಡ್ಡ, 2 ಚಿಕ್ಕವು ಸೇರಿ 6 ಕುರಿಗಳು ಸಾವಿಗೀಡಾಗಿವೆ. ಇನ್ನು ಬಳ್ಳಾರಿ ನಗರ ಹೊರವಲಯದಲ್ಲಿ ಗಾಳಿ ಮಳೆಗೆ 38 ವಿದ್ಯುತ್‌ ಕಂಬಗಳು ನೆಲಕ್ಕುರುಳಿದ್ದು, ದುರಸ್ತಿ ಕಾರ್ಯ ನಡೆಯುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ ಕಳೆದ 48 ಗಂಟೆಯಲ್ಲಿ 43.2 ಮಿಲಿಮೀಟರ್‌ ಮಳೆಯಾಗಿದೆ. ಈ ಪೈಕಿ ಕುರುಗೋಡು ತಾಲೂಕಲ್ಲಿ ಅತಿಹೆಚ್ಚು 66.7 ಮಿಮಿ ಮಳೆಯಾಗಿದ್ದು, ಸಿರುಗುಪ್ಪ 61.1, ಸಂಡೂರು 39.6, ಬಳ್ಳಾರಿ 31.4, ಕಂಪ್ಲಿ 3.3 ಮಿಮಿ ಮಳೆಯಾಗಿದೆ.

ವಿಜಯನಗರ; 542.46 ಹೆಕ್ಟೇರ್‌ ಬೆಳೆ ಹಾನಿ

Advertisement

ವಿಜಯನಗರ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಸುರಿದ ಮಳೆಗೆ 542.46 ಹೆಕ್ಟೇರ್‌ ಬೆಳೆ, 118.84 ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿಯಾಗಿದೆ. 295 ಮನೆಗಳು ಭಾಗಶಃ ಕುಸಿದಿದ್ದು, 8 ಮನೆಗಳು ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಆದರೆ, ಯಾವುದೇ ಪ್ರಾಣ ಹಾನಿಸಂಭವಿಸಿಲ್ಲ. ಇನ್ನು ಈವರೆಗೆ 4 ಜಾನುವಾರು, 34 ಕುರಿಗಳು ಸಿಡಿಲಿಗೆ ಮೃತಪಟ್ಟಿವೆ ಎಂದು ವಿಜಯನಗರ ಜಿಲ್ಲಾಡಳಿತದ ಅಂಕಿ ಅಂಶಗಳು ಸ್ಪಷ್ಟಪಡಿಸಿವೆ.

ವಿಜಯನಗರ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಹಾಗೂ ಗುರುವಾರ ಇಡೀ ದಿನ ಸುರಿದ ಮಳೆಗೆ ಹತ್ತು ಮನೆಗಳು ಭಾಗಶಃ ಬಿದ್ದಿದ್ದು, 250.50 ಎಕರೆ ಭತ್ತದ ಬೆಳೆ ಹಾನಿಯಾಗಿದೆ. ಹೊಸಪೇಟೆ ತಾಲೂಕಿನಲ್ಲಿ ಎರಡು ಮನೆ, ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ಒಂದು, ಹೊಸಪೇಟೆ ಕಸಬಾಹೋಬಳಿಯ ಬಸವನದುರ್ಗ ಗ್ರಾಮದಲ್ಲಿ ಒಂದು ಮನೆ ಭಾಗಶಃ ಬಿದ್ದಿದೆ. ಕೊಟ್ಟೂರು ತಾಲೂಕಿನಲ್ಲಿ ನಾಲ್ಕು ಮನೆ, ಕೂಡ್ಲಿಗಿ ತಾಲೂಕಿನಲ್ಲಿ ಮೂರು ಮನೆಗಳು ಭಾಗಶಃ ಕುಸಿದಿವೆ.

ಹರಪನಹಳ್ಳಿ ತಾಲೂಕಿನ ಅರಸಿಕೆರೆ ಹೋಬಳಿಯ ಲಕ್ಷ್ಮೀಪುರ, ಸಿಂಗ್ರಹಳ್ಳಿ ಭಾಗದಲ್ಲಿ 230.50 ಎಕರೆ ಭತ್ತ, ಹೂವಿನಹಡಗಲಿ ತಾಲೂಕಿನಲ್ಲಿ 20 ಎಕರೆ ಭತ್ತದ ಬೆಳೆ ಹಾನಿಯಾಗಿದೆ. ಜಿಲ್ಲೆಯಾದ್ಯಂತ ಅಲ್ಲಲ್ಲಿ ಮರಗಿಡಗಳು ಹಾಗೂ ವಿದ್ಯುತ್‌ ಕಂಬಗಳು ಉರುಳಿ ಬಿದ್ದಿವೆ. ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲೂ ವಿದ್ಯುತ್‌ ವ್ಯತ್ಯಯದಿಂದ ಎಂ.ಪಿ. ಪ್ರಕಾಶನಗರ, ಸಂಕ್ಲಾಪುರ ಸೇರಿದಂತೆ ವಿವಿಧ ಬಡಾವಣೆಗಳ ಜನರು ವಿದ್ಯುತ್‌ ಕಡಿತದಿಂದ ಸಮಸ್ಯೆ ಎದುರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next