Advertisement

ಬಿಜೆಪಿ ಅಭ್ಯರ್ಥಿಗಳನ್ನು ಬಹುಮತದಿಂದ ಗೆಲ್ಲಿಸಿ

04:48 PM Jul 07, 2017 | Team Udayavani |

ಮುಧೋಳ: ಕೇವಲ ಮೂರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹಲವಾರು ಜನಪರ ಹಾಗೂ ಅಭಿವೃದ್ಧಿ ಪರ ಕೆಲಸಗಳನ್ನು ಮಾಡುವ ಮೂಲಕ ದೇಶದ ಮೂರು ಲಕ್ಷ ಕೋಟಿ ರೂ. ಆದಾಯ ಹೆಚ್ಚಿಸಿದ್ದಾರೆ. ವಿಶ್ವದಲ್ಲೇ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿ ವಿಶ್ವ ಕಂಡ ಅತ್ಯುತ್ತಮ ಪ್ರಧಾನ ಮಂತ್ರಿ ಎನಿಸಿಕೊಂಡ ಮೋದಿಯವರ ಕತೃತ್ವ ಶಕ್ತಿ ಗಮನಾರ್ಹವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು. 

Advertisement

ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಭುವನೇಶ್ವರಿದೇವಿ ಕಂಚಿನ ಮೂರ್ತಿಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಸತತವಾಗಿ ಕಳೆದ ಮೂರು ವರ್ಷಗಳಿಂದ ಕಂಗೆಟ್ಟಿರುವ ರೈತ ಮುಂದೆ ನೆಮ್ಮದಿಯಿಂದ ಇರಬೇಕು. ರಾಜ್ಯದ ನೀರಾವರಿ ಹಾಗೂ ವಿದ್ಯುತ್‌ ಕೆಲಸಗಳು ಪೂರ್ಣವಾಗಬೇಕು. 

ತನ್ಮೂಲಕ ರಾಜ್ಯದ ಎಲ್ಲ ವರ್ಗದ ಜನತೆ ಶಾಂತಿ, ನೆಮ್ಮದಿಯಿಂದ ಬಾಳಬೇಕೆಂಬ ತಮ್ಮ ಕನಸು ನನಸಾಗಬೇಕಾದರೆ ಮುಂಬರುವ 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಬಹುಮತದಿಂದ ಗೆಲ್ಲಿಸಿ, ಅಧಿ ಕಾರ ನೀಡಬೇಕು. ಈ ಮೂಲಕ ಪ್ರಧಾನಿ ಮೋದಿಯವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.  

ಪ್ರಧಾನಿ ದೇಶದ ಕಟ್ಟ ಕಡೆಯ ಪ್ರಜೆಗೂ ತಲುಪುವಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ನೂತನವಾಗಿ ಜಾರಿಗೆ ತಂದ ಜಿಎಸ್‌ಟಿ ಕಾಯ್ದೆಯಿಂದ ರೈತರಿಗೆ ಹಾಗೂ ನೀರಾವರಿ ಕ್ಷೇತ್ರಕ್ಕೆ ತುಂಬಾ ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣವೇ ಅರ್ಧಕ್ಕೆ ನಿಂತಿರುವ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು. 

ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಕೇಂದ್ರ ಸರ್ಕಾರದ ಹಲವಾರು ಜನಪರ ಯೋಜನೆಗಳನ್ನು ವಿವರಿಸಿ, ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಏಳೂ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವಂತೆ ಕಾರ್ಯ ನಿರ್ವಹಿಸಬೇಕು ಎಂದು ಮನವಿ ಮಾಡಿದರು. ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಯಡಿಯೂರಪ್ಪನವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವುದು ಖಚಿತ. 

Advertisement

ಅವರು ಅಧಿಕಾರಕ್ಕೆ ಬಂದ ತಕ್ಷಣ ರೈತರು ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಕೈಗೊಳ್ಳಲಿದ್ದಾರೆ ಎಂದರು. ಅಥಣಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ದೇಶದಲ್ಲಿಯೇ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿದ ಹಾಗೂ ಸಾಲ ಮನ್ನಾ ಮಾಡಿದ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲುತ್ತದೆ ಎಂದು ಹೇಳಿದರು. 

ಶಾಸಕ ಗೋವಿಂದ ಕಾರಜೋಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ವ ಜನಾಂಗ ಮೆಚ್ಚುವಂತಹ ಕೆಲಸ ಮಾಡಿದ ಪ್ರಧಾನಿ ಮೋದಿ ಹಾಗೂ ಯಡಿಯೂರಪ್ಪ ಅವರ ಕೈಯನ್ನು ಜನರು ಬಲಪಡಿಸಬೇಕು ಎಂದರು. ಇಂಗಳಗಿ-ಯಡಹಳ್ಳಿಯ ರೇವಣಸಿದ್ಧ ಶಿವಾಚಾರ್ಯರು, ನಿಜಗುಣದೇವರು ಹಾಗೂ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. 

ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದು ಸವದಿ, ಜಿ.ಎಸ್‌. ನ್ಯಾಮಗೌಡ, ಆರ್‌.ಎಸ್‌. ತಳೇವಾಡ, ಆರ್‌.ಟಿ. ಪಾಟೀಲ, ಬಿ.ಜಿ. ಪಾಟೀಲ, ರತ್ನಕ್ಕಾ ತಳೇವಾಡ, ಬಿ.ಎಚ್‌. ಪಂಚಗಾವಿ, ಕೆ.ಆರ್‌. ಮಾಚಪ್ಪನವರ, ಕೆ.ಟಿ. ಪಾಟೀಲ, ಎಸ್‌.ಎಸ್‌. ಇಮ್ಮಣ್ಣವರ, ಶೋಭಾ ಪಾಟೀಲ, ತುಳಜಾಬಾಯಿ ಶಿರಬೂರ, ರಮೇಶ ಪಂಚಕಟ್ಟಿಮಠ, ದೊಡ್ಡನಗೌಡ ಪಾಟೀಲ, ಲಕ್ಷ್ಮಣ ಚಿನ್ನಣ್ಣವರ ಸೇರಿದಂತೆ ಜೈ ಕರ್ನಾಟಕ ಯುವಕ ಸಂಘ, ಗ್ರಾಪಂ ಹಾಗೂ ಪಿಕೆಪಿಎಸ್‌ನ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ಮಹಾಂತೇಶ ಸಬರದ ಸ್ವಾಗತಿಸಿದರು. ಎಲ್‌.ಎಸ್‌. ಚಿನ್ನಣ್ಣವರ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next