ಕೋಲ್ಕತಾ: ಇಂಗ್ಲೆಂಡ್‌ನ ವಿಂಬಲ್ಡನ್‌ನಲ್ಲಿ ಸ್ವಾಮಿ ವಿವೇಕಾನಂದ ಅವರ ನೇರ ಶಿಷ್ಯೆ ಸೋದರಿ ನಿವೇದಿತಾ ಅವರ 6.2 ಅಡಿ ಎತ್ತರದ ಕಂಚಿನ ಪ್ರತಿಮೆ ಜು.1ರಂದು ಅನಾವರಣಗೊಳ್ಳಲಿದೆ ಎಂದು ಸೋದರಿ ನಿವೇದಿತಾ ಸಂಭ್ರಮಾಚರಣೆ ಸಮಿತಿಯ ವಕ್ತಾರರು ತಿಳಿಸಿದ್ದಾರೆ.
ಈ ಕಂಚಿನ ಪ್ರತಿಮೆಯನ್ನು ಪಶ್ಚಿಮ ಬಂಗಾಲದ ಸರಗಚ್ಚಿ ರಾಮಕೃಷ್ಣ ಮಿಶನ್ ಆಶ್ರಮದ ಸ್ವಾಮಿ ವಿಶ್ವಮಯಾನಂದಜೀ ವಿನ್ಯಾಸಗೊಳಿಸಿದ್ದಾರೆ. ಇದನ್ನು ಕಲಾವಿದರಾದ ನಿರಂಜನ್ ದೇ ತಯಾರಿಸಿದ್ದಾರೆ ಎಂದು ಸಮಿತಿಯ ಶಾರದಾ ಸರ್ಕಾರ್ ಮಾಹಿತಿ ನೀಡಿದ್ದಾರೆ.
1867ರಲ್ಲಿ ಐರ್ಲೆಂಡ್‌ನಲ್ಲಿ ಜನಿಸಿದ ಮಾರ್ಗರೆಟ್ ಎಲಿಜಿಬತ್ ನೊಬೆಲ್, ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿಗೊಂಡು ಭಾರತಕ್ಕೆ ಬಂದು ಹಿಂದೂ ಧರ್ಮವನ್ನು ಸ್ವೀಕರಿಸುತ್ತಾರೆ. ವಿವೇಕಾನಂದರಿಂದಲೇ ಸೋದರಿ ನಿವೇದಿತಾ ಎಂಬ ಹೆಸರನ್ನು ಪಡೆಯುತ್ತಾರೆ. ಅನಂತರ ಭಾರತವನ್ನು ಸೇವಾ ಕ್ಷೇತ್ರವನ್ನಾಗಿಸಿಕೊಳ್ಳುತ್ತಾರೆ. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ, ಸ್ತ್ರೀಯರ ಸಬಲೀಕರಣಕ್ಕಾಗಿ ಜೀವನವಿಡೀ ಶ್ರಮಿಸುತ್ತಾರೆ.