Advertisement

ವಿಂಬಲ್ಡನ್‌-2022: ರಿಬಾಕಿನಾ, ಗಾರಿನ್‌ ಕ್ವಾ.ಫೈನಲ್‌ ಪ್ರವೇಶ

11:21 PM Jul 04, 2022 | Team Udayavani |

ಲಂಡನ್‌: ಸೋಮವಾರದ ಮುಖಾಮುಖಿಯಲ್ಲಿ ಗೆಲುವು ಸಾಧಿಸಿದ ಎಲೆನಾ ರಿಬಾಕಿನಾ, ಕ್ರಿಸ್ಟಿಯನ್‌ ಗಾರಿನ್‌, ನಿಕ್‌ ಕಿರ್ಗಿಯೋಸ್‌, ಟೇಲರ್‌ ಫ್ರಿಟ್ಸ್‌ ವಿಂಬಲ್ಡನ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

Advertisement

ದಿನದ ಮೊದಲ ಗೆಲುವಿಗೆ ಸಾಕ್ಷಿಯಾದವರು ಜೆಕ್‌ ಗಣರಾಜ್ಯದ ಎಲೆನಾ ರಿಬಾಕಿನಾ. ವನಿತಾ ಸಿಂಗಲ್ಸ್‌ ನಲ್ಲಿ ಅವರು ಕ್ರೊವೇಶಿಯಾದ ಪೆಟ್ರಾ ಮಾರ್ಟಿಕ್‌ ವಿರುದ್ಧ 7-5, 6-3ರಿಂದ ಗೆದ್ದು ಮೊದಲ ಸಲ ವಿಂಬಲ್ಡನ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಪುರುಷರ ಸಿಂಗಲ್ಸ್‌ನಲ್ಲಿ ಚಿಲಿಯ ಕ್ರಿಸ್ಟಿಯನ್‌ ಗಾರಿನ್‌ 5 ಸೆಟ್‌ಗಳ ಅಮೋಘ ಹೋರಾಟದ ಬಳಿಕ ಆಸ್ಟ್ರೇಲಿಯದ ಅಲೆಕ್ಸ್‌ ಡಿ ಮಿನೌರ್‌ ಅವರನ್ನು ಹಿಮ್ಮೆಟ್ಟಿಸಿದ್ದು ವಿಶೇಷವಾಗಿತ್ತು. ಮೊದಲೆರಡು ಸೆಟ್‌ ಸೋತ ಬಳಿಕ ಗಾರಿನ್‌ ಅಸಾಮಾನ್ಯ ಟೆನಿಸ್‌ ಪ್ರದರ್ಶನವೊಂದಕ್ಕೆ ಸಾಕ್ಷಿಯಾದರು. ಇವರ ಗೆಲುವಿನ ಅಂತರ 2-6, 5-7, 7-6 (7-3), 6-4, 7-6 (10-6). ಇದು ಗಾರಿನ್‌ ಕಾಣುತ್ತಿರುವ ಮೊದಲ ಗ್ರ್ಯಾನ್‌ಸ್ಲಾಮ್‌ ಕ್ವಾರ್ಟರ್‌ ಫೈನಲ್‌.

ಕಿರ್ಗಿಯೋಸ್‌ ಕೂಡ 5 ಸೆಟ್‌ಗಳ ಹೋರಾಟ ಕಂಡರು. ಅಮೆರಿಕದ ಬ್ರ್ಯಾಂಡನ್‌ ನಕಾಶಿಮ ವಿರುದ್ಧ 4-6, 6-4, 7-6 (7-2), 3-6, 6-2ರಿಂದ ಗೆದ್ದು ಬಂದರು. ಅಮೆರಿಕದ ಟೇಲರ್‌ ಫ್ರಿಟ್ಸ್‌ 6-3, 6-1, 6-4ರಿಂದ ಆಸ್ಟ್ರೇಲಿಯದ ಜೇಸನ್‌ ಕ್ಯುಬ್ಲಿರ್‌ಗೆ ಸೋಲುಣಿಸಿದರು.

ಜೊಕೋ ವರ್ಸಸ್‌ ಸಿನ್ನರ್‌
ಕಳೆದ 3 ಬಾರಿಯ ಹಾಲಿ ಚಾಂಪಿಯನ್‌ ನೊವಾಕ್‌ ಜೊಕೋವಿಕ್‌ ಮತ್ತು ಇಟಲಿಯ 10ನೇ ಶ್ರೇಯಾಂಕದ ಆಟಗಾರ ಜಾನಿಕ್‌ ಸಿನ್ನರ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಪರಸ್ಪರ ಎದುಗಲಿದ್ದಾರೆ. ಅಗ್ರ ಶ್ರೇಯಾಂಕದ ಜೊಕೋವಿಕ್‌ ವೈಲ್ಡ್‌ಕಾರ್ಡ್‌ ಮೂಲಕ ಪ್ರವೇಶ ಪಡೆದ ಡಚ್‌ ಟೆನಿಸಿಗ ಟಿಮ್‌ ವಾನ್‌ ರಿತೊವೆನ್‌ ಅವರಿಗೆ 6-2, 4-6, 6-1, 6-2 ಅಂತರದ ಸೋಲುಣಿಸಿದರು. 2017ರ ಕ್ವಾರ್ಟರ್‌ ಫೈನಲ್‌ ಬಳಿಕ ಜೊಕೋ ಇಲ್ಲಿ ಹಿನ್ನಡೆ ಕಂಡೇ ಇಲ್ಲ. ಅಂದು ಥಾಮಸ್‌ ಬೆರ್ಡಿಶ್‌ ವಿರುದ್ಧ ಆಡುವಾಗ ಮೊಣಕೈ ಗಾಯಕ್ಕೆ ತ್ಯಜಿಸಿ ಪಂದ್ಯ ತ್ಯಜಿಸಿದ್ದರು.

Advertisement

ಜಾನಿಕ್‌ ಸಿನ್ನರ್‌ ಹಾಗೂ ಸ್ಪೇನ್‌ನ 5ನೇ ಶ್ರೇಯಾಂಕದ ಕಾರ್ಲೋಸ್‌ ಅಲ್ಕರಾಝ್ ನಡುವಿನ ಪಂದ್ಯ ತೀವ್ರ ಕುತೂಹಲ ಕೆರಳಿಸಿತ್ತು. ಇಲ್ಲಿ ಅಲ್ಕರಾಝ್ ಅವರಿಗೆ 6-1, 6-4, 6-7 (8), 6-3 ಅಂತರದ ಆಘಾತವಿಕ್ಕಿ ಮೊದಲ ಸಲ ವಿಂಬಲ್ಡನ್‌ ಕ್ವಾರ್ಟರ್‌ ಫೈನಲ್‌ ತಲುಪಿದರು.

16ರ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಬೆಲ್ಜಿಯಂನ ಡೇವಿಡ್‌ ಗೋಫಿನ್‌ ಅಮೆರಿಕದ ಫ್ರಾನ್ಸೆಸ್‌ ಥಿಯಾಫೊ ವಿರುದ್ಧ ಗೆದ್ದು ಬಂದರು. ಅಂತರ 7-6 (3), 5-7, 5-7, 6-4, 7-5.

ಬ್ರಿಟನ್ನಿನ ಕ್ಯಾಮರಾನ್‌ ನೂರಿ ಅಮೆರಿಕದ ಟಾಮಿ ಪೌಲ್‌ ವಿರುದ್ಧ 6-4, 7-5, 6-4 ಅಂತರದ ಗೆಲುವು ಸಾಧಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next