ಗಜೇಂದ್ರಗಡ: ಅಂತರ್ಜಲವನ್ನೇ ನಂಬಿರುವ ಕೋಟೆ ನಾಡಿನ ಜನರ ಜಲಕ್ಷಾಮ ನೀಗಿಸಲು ಬಹುಗ್ರಾಮ ಕುಡಿಯುವ ನೀರು ಯೋಜನೆಯ ಪೈಪ್‌ಲೈನ್ ಕಾರ್ಯ ಪೂರ್ಣಗೊಂಡಿದೆ. ಶೀಘ್ರದಲ್ಲಿ ಪಟ್ಟಣದ ನಿವಾಸಿಗಳಿಗೆ ಗಂಗಾಮಾತೆ ಹರಿದು ಬರಲಿದ್ದಾಳೆ.
ಅಂತರ್ಜಲ ಹೊರತುಪಡಿಸಿ ಯಾವೊಂದು ಜಲ ಮೂಲಗಳಿಲ್ಲದೇ, ಹಲವಾರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಅನುಭವಿಸುತ್ತಿದ್ದ ಗಜೇಂದ್ರಗಡ ಪಟ್ಟಣದ ಜನತೆ ಇದೀಗ ನಿಟ್ಟುಸಿರು ಬಿಡುವ ಕಾಲ ಸನ್ನಿಹಿತವಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್ ಪಟ್ಟಣ ಮಧ್ಯಭಾಗದಲ್ಲಿ ಹಾದು ಹೋಗಿದ್ದು, ಅಲ್ಲಿ ವಾಲ್ ಜೋಡಣೆ ಮಾಡಿ, ಪಟ್ಟಣದ ಪಂಪ್‌ಹೌಸ್‌ಗೆ ಸೇರ್ಪಡೆಗೊಳಿಸುವ ಕಾರ್ಯ ಸಹ ಪೂರ್ಣಗೊಂಡಿದೆ.
ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ: ವ್ಯವಹಾರಿಕ ಮತ್ತು ಜನಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಟ್ಟಣದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಅಂತರ್ಜಲ ಮಟ್ಟ ಸಂಪೂರ್ಣ ಕುಸಿತ ಕಂಡಿದೆ. ಇದರಿಂದ ಬಹುತೇಕ ಬೋರ್‌ವೆಲ್ಗಳು ಬತ್ತಿವೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾದ ಸಂದರ್ಭದಲ್ಲಿ ಜಿಲ್ಲಾಡಳಿತದ ನಿರ್ದೇಶನ ಮೇರೆಗೆ ಪುರಸಭೆ ಖಾಸಗಿಯವರ 10ಕ್ಕೂ ಅಧಿಕ ಬೋರ್‌ವೆಲ್ಗಳನ್ನು ವಶಕ್ಕೆ ಪಡೆದು ನೀರು ಪೂರೈಸಿದರೂ ಸಹ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಿತ್ತು.
ನವಿಲು ತೀರ್ಥದ ನೀರು: ಯಾವೊಂದು ನದಿ ಮೂಲಗಳಿಲ್ಲದೇ ಬೋರ್‌ವೆಲ್ ಆಶ್ರಯದಿಂದ ಪಟ್ಟಣದ ಜನತೆಗೆ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೀಗ ಬೋರ್‌ವೆಲ್ಗಳು ಬತ್ತಿದ ಪರಿಣಾಮ ನೀರಿನ ಸಮಸ್ಯೆ ಉಲ್ಬಣಿಸಿತ್ತು. ಸುತ್ತಲಿನ ಗ್ರಾಮಗಳಲ್ಲಿ ನದಿ, ಡ್ಯಾಂಗಳಿಂದ ನೀರು ಬರುತ್ತಿದ್ದರೂ ಸಹ ಪಟ್ಟಣಕ್ಕೆ ಕಳೆದ ಹಲವಾರು ದಶಕಗಳಿಂದ ನದಿ ಮೂಲಗಳು ಇದ್ದಿಲ್ಲ. ಆದರೀಗ ನವಿಲು ತೀರ್ಥ ಡ್ಯಾಂನಿಂದ ಪೈಪ್‌ಲೈನ್ ಮೂಲಕ ನೀರು ಪೂರೈಸಲು ಸಜ್ಜಾಗಿರುವುದು ಈ ಭಾಗದ ಜನರ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ.
ನೀರು ಪೂರೈಕೆ ಹೇಗೆ?: ಸವದತ್ತಿಯ ನವಿಲುತೀರ್ಥ ಡ್ಯಾಂನಿಂದ ಕಾಲುವೆ ಮೂಲಕ ನರಗುಂದ, ರೋಣ ಪಟ್ಟಣಕ್ಕೆ ಬರುತ್ತದೆ. ಅಲ್ಲಿಂದ ಪೈಪ್‌ಲೈನ್ ಮೂಲಕ ಸಮೀಪದ ದಿಂಡೂರ ಗ್ರಾಮ ಹೊರ ವಲಯದ ಪಂಪ್‌ಹೌಸ್‌ನಲ್ಲಿ ಸಂಗ್ರಹವಾಗಲಿದೆ. ನಂತರ ಕಾಲಕಾಲೇಶ್ವರ ಗ್ರಾಮದಲ್ಲಿನ ಓವರ್ ಹೇಡ್ ಟ್ಯಾಂಕ್‌ಗಳಲ್ಲಿ ಶೇಖರಣೆಯಾಗಿ, ಅಲ್ಲಿಂದ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ ಸರಬರಾಜು ಆಗಲಿದೆ.
Advertisement
ಸವದತ್ತಿಯ ನವಿಲುತೀರ್ಥ ಡ್ಯಾಂನಿಂದ ಬರುವ ನೀರು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಪೈಪ್‌ಲೈನ್ ಮೂಲಕ ಸುತ್ತಲಿನ ಹಳ್ಳಿಗಳಿಗೆ ಸರಬರಾಜಾಗುತ್ತದೆ. ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಸಮಸ್ಯೆ ನೀಗಿಸುವುದೇ ಯೋಜನೆ ಉದ್ದೇಶವಾಗಿದೆ. ಈ ಯೋಜನೆ ಗ್ರಾಮೀಣ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ. ಇದರ ಪೈಪ್‌ಲೈನ್ ಗಜೇಂದ್ರಗಡ ಪಟ್ಟಣದಲ್ಲಿಯೇ ಹಾದು ಹೋಗಿದೆ. ಆದರೆ ಪಟ್ಟಣದಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ಹನಿ ನೀರಿಗೂ ಹಾಹಾಕಾರ ಎದುರಾದ ಪರಿಣಾಮ ಬಹುಗ್ರಾಮ ಯೋಜನೆಯ ನೀರು ಪಟ್ಟಣಕ್ಕೆ ಬಳಸಿಕೊಳ್ಳಲು ಮುಂದಾಗಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
Related Articles
Advertisement
ಗ್ರಾಮೀಣ ಭಾಗಕ್ಕೆ ಹೋಗುವ ನೀರನ್ನು ತಡೆ ಹಿಡಿದ ಪಟ್ಟಣದ ಪಂಪ್‌ಹೌಸ್ ಬಳಿ ಎರಡು ವಾಲ್ಗಳನ್ನು ಅಳವಡಿಸಲಾಗಿದೆ. ಅಲ್ಲಿಂದ ಪಂಪ್‌ಹೌಸ್‌ನಲ್ಲಿ ನೀರು ಶೇಖರಿಸಿ, ನಂತರ ರಾಜವಾಡೆ ಬಳಿಯ ಟ್ಯಾಂಕ್‌ನಿಂದ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡುವ ಯೋಜನೆ ರೂಪಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲ ತಂತ್ರಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಮಂಗಳವಾರ ಗಜೇಂದ್ರಗಡದ ಜನತೆಗೆ ನವಿಲು ತೀರ್ಥ ಡ್ಯಾಂ ನೀರು ಸರಬರಾಜು ಆಗುವುದರಲ್ಲಿ ಸಂದೇಹವಿಲ್ಲ.
ನೀರಿನ ಸಮಸ್ಯೆ ನೀಗಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸೋಮವಾರ ಡ್ಯಾಂನಿಂದ ನೀರು ಬಿಡಲಾಗುತ್ತದೆ. ಅಲ್ಲಿಂದ ಟ್ಯಾಂಕ್‌ನಲ್ಲಿ ನೀರು ಶೇಖರಿಸಿ ಪಟ್ಟಣದಲ್ಲಿ ನೀರು ಸರಬರಾಜು ಮಾಡಲಾಗುವುದು. ಪಟ್ಟಣಕ್ಕೆ ಅಗತ್ಯವಿರುವ ನೀರಿನ ಪ್ರಮಾಣವೆಷ್ಟು ಎಂಬುದನ್ನು ಪರೀಕ್ಷಿಸಲಾಗುವುದು.
•ಎಸ್.ಎಂ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ
ಪುರಸಭೆಯವರು 25 ದಿನಕ್ಕೊಮ್ಮೆ ನೀರು ಪೂರೈಸುತ್ತಿದ್ದಾರೆ. ನೀರಿಗಾಗಿ ಕೊಡ ಹಿಡಿದು ಗಲ್ಲಿ-ಗಲ್ಲಿ ಸುತ್ತುವ ಪರಿಸ್ಥಿತಿ ಬಂದೋದಗಿದೆ. ಹೀಗಾಗಿ ನೀರಿನ ಸಮಸ್ಯೆ ದೊಡ್ಡ ತಲೆ ನೋವಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನೀರಿನ ಸಮಸ್ಯೆ ನೀಗಬೇಕಿದೆ.
•ಅಂದಮ್ಮ ವಾರಿಕಲ್, ಸ್ಥಳೀಯ ನಿವಾಸಿ
ಡಿ.ಜಿ ಮೋಮಿನ್