Advertisement

ಮಾನವೀಯತೆಯೇ ಆದ್ಯತೆ

01:32 AM Jul 02, 2019 | mahesh |

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಜು.3ರಿಂದ ಅನ್ವಯವಾಗುವಂತೆ ಆರು ತಿಂಗಳ ಕಾಲ ರಾಷ್ಟ್ರಪತಿ ಆಳ್ವಿಕೆ ವಿಸ್ತರಿಸುವ ಕೇಂದ್ರದ ಪ್ರಸ್ತಾಪಕ್ಕೆ ರಾಜ್ಯಸಭೆಯಲ್ಲಿಯೂ ಸೋಮವಾರ ಅನುಮತಿ ಸಿಕ್ಕಿದೆ. ಜತೆಗೆ ಜಮ್ಮು ಮತ್ತು ಕಾಶ್ಮೀರ ಮೀಸಲು (ತಿದ್ದುಪಡಿ) ವಿಧೇಯಕ 2019ಕ್ಕೆ ಮೇಲ್ಮನೆಯಲ್ಲಿಯೂ ಅಂಗಿಕಾರ ಸಿಕ್ಕಿದೆ. ಕಳೆದ ವಾರ ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಂಡಿಸಿದ್ದ ಗೊತ್ತುವಳಿಗೆ ಚರ್ಚೆ ನಡೆದು ಅನುಮೋದನೆ ಪಡೆದುಕೊಳ್ಳಲಾಗಿತ್ತು.

Advertisement

ರಾಜ್ಯಸಭೆಯಲ್ಲಿ ವಿಧೇಯಕ ಮಂಡಿಸಿ, ಅದಕ್ಕೆ ಸಂಬಂಧಿಸಿದಂತೆ ಬಿರುಸಿನ ಚರ್ಚೆ ನಡೆಯಿತು. ಅದಕ್ಕೆ ಉತ್ತರಿಸಿದ ಗೃಹ ಸಚಿವ ಅಮಿತ್‌ ಶಾ, ದೇಶವನ್ನು ಒಡೆಯಬೇಕು ಎಂದು ವಾದ ಮಾಡುವವರ ವಿರುದ್ಧ ಕೇಂದ್ರ ಸರ್ಕಾರ ಕಠಿಣವಾಗಿಯೇ ವರ್ತಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಮೋದಿ ನೇತೃತ್ವದ ಸರ್ಕಾರ ಉಗ್ರಗಾಮಿಗಳು ಮತ್ತು ಭಯೋತ್ಪಾದನೆ ವಿರುದ್ಧ ಶೂನ್ಯ ಸಹನೆ ತೋರುತ್ತಿದೆ ಎಂದು ಹೇಳಿದ್ದಾರೆ.

ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಅಟಲ್ ಬಿಹಾರಿ ವಾಜಪೇಯಿ ತರಲು ಉದ್ದೇಶಿಸಿದ್ದ ಇನ್ಸಾನಿಯತ್‌ (ಮಾನವೀಯತೆ), ಜಮೂರಿಯತ್‌ (ಶಾಂತಿ), ಕಾಶ್ಮೀರಿಯತ್‌ (ಕಾಶ್ಮೀರ ಜನರ ಸ್ಥಳೀಯತೆ ಕಾಯ್ದುಕೊಳ್ಳುವುದು) ಸರ್ಕಾರದ ಆದ್ಯತೆಯಾಗಲಿದೆ ಎಂದಿದ್ದಾರೆ. ಕಾಶ್ಮೀರ ಪಂಡಿತರನ್ನು ಮತ್ತೆ ಅವರ ರಾಜ್ಯಕ್ಕೆ ಸೇರಿಸುವುದೇ ಆದ್ಯತೆಯಾಗಲಿದೆ. ಅವರು ಕಾಶ್ಮೀರಿಯತ್‌ನ ಭಾಗವಲ್ಲವೇ ಎಂದು ಪ್ರಶ್ನಿಸಿದ್ದಾರೆ. ಸೂಫಿ ಪದ್ಧತಿ ಕೂಡ ಆಗಿರಲಿಲ್ಲವೇಕೆ ಎಂದು ಪ್ರಶ್ವೆ ಮಾಡಿದ್ದಾರೆ. ಹಿಂದೂ ಮುಸ್ಲಿಂ ಭಾವೈಕ್ಯತೆ ಮಾತನಾಡುವವರು ಸೂಫಿ ಪದ್ಧತಿಯನ್ನೇಕೆ ಕಾಪಾಡಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ನೆಹರೂ ವಿರುದ್ಧ ಮತ್ತೆ ವಾಗ್ಧಾಳಿ: ಕಳೆದ ವಾರ ಲೋಕಸಭೆಯಲ್ಲಿ ನೆಹರೂ ನೀತಿಗಳಿಂದಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಹಾಲಿ ಪರಿಸ್ಥಿತಿ ಉಂಟಾಗಿದೆ ಎಂದು ಟೀಕಿಸಿದ್ದರು. ಅದನ್ನೇ ಅಮಿತ್‌ ಶಾ ಸೋಮವಾರ ಪುನರುಚ್ಚರಿಸಿದ್ದಾರೆ. ಮೂರನೇ ಒಂದಷ್ಟು ಭಾಗದ ಕಾಶ್ಮೀರ ನಮ್ಮ ನಿಯಂತ್ರಣದಲ್ಲಿ ಇಲ್ಲ. ಹಿಂದಿನ ಐತಿಹಾಸಿಕ ತಪ್ಪುಗಳಿಂದ ಪಾಠ ಕಲಿಯಬೇಕಾಗಿದೆ. ನೆಹರೂ ಏನು ಮಾಡಿದ್ದರು ಎಂಬ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡಲು ಬಯಸುವುದಿಲ್ಲ. ಜತೆಗೆ ಹಿಂದಿನ ತಪ್ಪುಗಳಿಂದ ಪಾಠ ಕಲಿಯದ ಯಾವುದೇ ದೇಶಕ್ಕೆ ಭವಿಷ್ಯವಿಲ್ಲ ಎಂದೂ ಹೇಳಿದ್ದಾರೆ.

ರಾಷ್ಟ್ರಪತಿ ಆಳ್ವಿಕೆ ವಿಸ್ತರಣೆ ಮಾಡುವ ಮೂಲಕ ಪರೋಕ್ಷವಾಗಿ ಕಣಿವೆ ರಾಜ್ಯದಲ್ಲಿ ಸಂವಿಧಾನದ 356ನೇ ವಿಧಿಯನ್ನು ಜಾರಿ ಮಾಡುತ್ತಿದೆ ಎಂಬ ಪ್ರತಿಪಕ್ಷಗಳ ಟೀಕೆಗೆ ಉತ್ತರಿಸಿದ ಶಾ, ‘ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಜನಪ್ರಿಯರು ಮತ್ತು 16 ರಾಜ್ಯಗಳಲ್ಲಿ ನಮ್ಮ ಪಕ್ಷ ಮತ್ತು ಮೈತ್ರಿಕೂಟದ ಆಡಳಿತ ಇದೆ. ಹೀಗಾಗಿ, ಹಿಂಬಾಗಿಲಿನಿಂದ ಅಧಿಕಾರ ನಡೆಸುವ ಅಗತ್ಯವಿಲ್ಲ’ ಎಂದು ಹೇಳಿದರು.

Advertisement

ಭದ್ರತಾ ಕಾರಣಗಳಿಗಾಗಿ: ಲೋಕಸಭೆ ಜತೆಯಲ್ಲಿಯೇ ಏಕೆ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸಲಿಲ್ಲ ಎಂಬ ಪ್ರತಿಪಕ್ಷಗಳ ಆಕ್ಷೇಪಕ್ಕೆ ಉತ್ತರಿಸಿದ ಅವರು ಕೇವಲ ಭದ್ರತಾ ಕಾರಣಗಳಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಬಗ್ಗೆ ಭದ್ರತಾ ಪಡೆಗಳೇ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದವು. ಒಂದೇ ಅವಧಿಯಲ್ಲಿ ಲೋಕಸಭೆ- ವಿಧಾನಸಭೆ ಚುನಾವಣೆ ನಡೆದರೆ ಅಭ್ಯರ್ಥಿಗಳಿಗೆ ಮತ್ತು ಮತದಾರರಿಗೆ ಭದ್ರತೆ ನೀಡುವುದು ಸಾಧ್ಯವೇ ಇಲ್ಲ ಎಂದು ಆಯೋಗಕ್ಕೆ ಮನವರಿಕೆ ಮಾಡಲಾಗಿತ್ತು ಎಂದು ಶಾ ಹೇಳಿದ್ದಾರೆ.

ಸೋಮವಾರದ ಮಹತ್ವದ ಬೆಳವಣಿಗೆ ಎಂದರೆ ಮೋದಿ ನೇತೃತ್ವದ ಸರ್ಕಾರವನ್ನು ಖಂಡತುಂಡವಾಗಿ ವಿರೋಧಿಸುತ್ತಿರುವ ತೃಣಮೂಲ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷ ರಾಷ್ಟ್ರಪತಿ ಆಡಳಿತವನ್ನು ಆರು ತಿಂಗಳ ಕಾಲ ವಿಸ್ತರಿಸುವ ಸರ್ಕಾರದ ಪ್ರಸ್ತಾಪಕ್ಕೆ ಬೆಂಬಲ ನೀಡಿವೆ. ಇದರ ಜತೆಗೆ ಪಿಡಿಪಿ ಕೂಡ ಬೆಂಬಲ ನೀಡಿದೆ.

ತಪ್ಪು ದಾರಿಗೆಳೆವ ಮಾಹಿತಿ: ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಿರುದ್ಯೋಗ ಇದೆ ಎಂಬ ಅಂಶ ತಪ್ಪು ಮಾಹಿತಿಯಿಂದ ಕೂಡಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಹಾಯಕ ಸಚಿವ ಸಂತೋಷ್‌ ಗಂಗ್ವಾರ್‌ ಲೋಕಸಭೆಗೆ ತಿಳಿಸಿದ್ದಾರೆ. ಉದ್ಯೋಗ ಸೃಷ್ಟಿಸುವುದು ಕೇಂದ್ರದ ಆದ್ಯ ಕರ್ತವ್ಯ ಎಂದು ಅವರು ಹೇಳಿದ್ದಾರೆ. ದೇಶದಲ್ಲಿ ಉಂಟಾಗಿರುವ ಉದ್ಯೋಗ ಸೃಷ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಸಿದ್ಧವಿರುವುದಾಗಿ ಹೇಳಿದ್ದಾರೆ ಗಂಗ್ವಾರ್‌.

ವೀಕ್ಷಣೆಗೆ ಸಮಿತಿ: ರಾಜ್ಯಸಭೆಯಲ್ಲಿನ ಕಲಾಪಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳು ಸಮ ಪ್ರಮಾಣದಲ್ಲಿ ಭಾಗಿಯಾಗುವಂತೆ ಇರುವ ಬಗ್ಗೆ ದೂರದರ್ಶನದಲ್ಲಿ ಪ್ರಸಾರವಾಗುತ್ತದೆಯೋ ಇಲ್ಲವೋ ಎಂಬ ಬಗ್ಗೆ ಸಮಿತಿ ರಚಿಸಲಾಗುತ್ತದೆ. ರಾಜ್ಯಸಭೆಯಲ್ಲಿನ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್‌ ಜಾವಡೇಕರ್‌ ಈ ಮಾಹಿತಿ ನೀಡಿದ್ದಾರೆ.

ಸಂಸತ್‌ ಸಮಿತಿಗೆ ಒಪ್ಪಿಸಿ

ಕೇಂದ್ರೀಯ ಶಿಕ್ಷಣ ಸಂಸ್ಥೆಗಳ (ಅಧ್ಯಾಪಕರ ಕೇಡರ್‌ನಲ್ಲಿ ಮೀಸಲು) ವಿಧೇಯಕ 2019ನ್ನು ಸಂಸತ್‌ನ ಸ್ಥಾಯಿ ಸಮಿತಿಗೆ ಒಪ್ಪಿಸಬೇಕು ಎಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಒತ್ತಾಯಿಸಿವೆ. ದೇಶದ 41 ಕೇಂದ್ರೀಯ ವಿವಿಗಳಲ್ಲಿ ಇರುವ 8 ಸಾವಿರ ಖಾಲಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಮಾರ್ಚ್‌ನಲ್ಲಿ ಹೊರಡಿಸಲಾಗಿದ್ದ ಸುಗ್ರೀವಾಜ್ಞೆ ಸ್ಥಾನದಲ್ಲಿ ವಿಧೇಯಕ ಜಾರಿಗೆ ಬರಲಿದೆ. ಈ ಬಗ್ಗೆ ಉತ್ತರಿಸಿದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್‌ ಪೋಖ್ರೀಯಾಲ್ ನಿಶಾಂಕ್‌ ಆರ್ಥಿಕವಾಗಿ ಮೇಲ್ವರ್ಗದವರಿಗೆ ಶೇ. 10ರಷ್ಟು ಮೀಸಲು ನೀಡುವ ನಿಟ್ಟಿನಲ್ಲಿ 770 ಕೋಟಿ ರೂ. ಮೊತ್ತವನ್ನು ಕೇಂದ್ರ ವಿವಿಗಳಿಗೆ ನೀಡಲಾಗಿದೆ ಎಂದರು.

ಬೌನ್ಸರ್‌ಗಳ ಬಳಸುವಂತಿಲ್ಲ

ಗ್ರಾಹಕರು ಬ್ಯಾಂಕ್‌ಗಳಿಗೆ ಸಾಲ ಮರು ಪಾವತಿ ಮಾಡದೇ ಇದ್ದರೆ, ಅದನ್ನು ವಸೂಲು ಮಾಡಲು ಬೌನ್ಸರ್‌ಗಳ ಬಳಕೆಗೆ ಅವಕಾಶ ನೀಡಲಾಗಿಲ್ಲ. ಹೀಗೆಂದು ಹಣಕಾಸು ಖಾತೆ ಸಹಾಯಕ ಸಚಿವ ಅನುರಾಗ್‌ ಠಾಕೂರ್‌ ಲೋಕಸಭೆಯಲ್ಲಿ ತಿಳಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next