Advertisement

ಖಾಲಿ ಸ್ಟೇಡಿಯಂನಲ್ಲಿ ನಡೆಯಲಿದೆಯೇ ಐಪಿಎಲ್‌ ?

10:09 AM Mar 14, 2020 | sudhir |

ಹೊಸದಿಲ್ಲಿ : ಈ ವರ್ಷದ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ಖಾಲಿ ಸ್ಟೇಡಿಯಂಗಳಲ್ಲಿ ನಡೆಯಲಿದೆಯೇ? ಹೀಗೊಂದು ಪ್ರಶ್ನೆ ಈಗ ಕ್ರಿಕೆಟ್‌ ಪ್ರೇಮಿಗಳನ್ನು ಕಾಡಲಾರಂಭಿಸಿದೆ. ಇದಕ್ಕೆ ಕಾರಣವಾಗಿರುವುದು ಕೊರೊನಾ ವೈರಸ್‌ ಹಾವಳಿಯನ್ನು ತಡೆಯುವ ಸಲುವಾಗಿ ಸರಕಾರ ವಿಧಿಸಿರುವ ಕೆಲವು ನಿರ್ಬಂಧಗಳು.

Advertisement

ಶನಿವಾರ ನಡೆಯಲಿರುವ ಐಪಿಎಲ್‌ ಆಡಳಿತ ಸಮಿತಿಯ ಸಭೆಯಲ್ಲಿ, ಖಾಲಿ ಮೈದಾನಗಳಲ್ಲಿ ಪಂದ್ಯಗಳನ್ನು ನಡೆಸುವ ವಿಚಾರ ಚರ್ಚೆಗೆ ಬರಲಿದೆ. ಆದರೆ ಈ ವಿಚಾರವಾಗಿ ಬಿಸಿಸಿಐ ಇನ್ನೂ ಮೌನ ಮುರಿದಿಲ್ಲ. ಸರಕಾರದ ವೀಸಾ ನಿರ್ಬಂಧದಿಂದಾಗಿ ಎ. 15ರ ತನಕ ವಿದೇಶಿ ಆಟಗಾರರು ಭಾರತಕ್ಕೆ ಬರುವಂತಿಲ್ಲ. ಹೀಗಾಗಿ ಒಂದು ವೇಳೆ ಐಪಿಎಲ್‌ ಪಂದ್ಯಗಳನ್ನು ನಡೆಸಿದರೂ ಅದರ ರೋಚಕತೆ ಕಾಣಸಿಗುವುದು ಅಸಂಭವ. ಇಂಥ ನೀರಸ ಪಂದ್ಯಗಳನ್ನು ನೋಡಲು ಕಾಸು ಕೊಟ್ಟು ಪ್ರೇಕ್ಷಕರು ಬರುವರೇ ಎಂಬ ಪ್ರಶ್ನೆಯೂ ಇದೆ.

ಆರೋಗ್ಯ ಇಲಾಖೆಯ ಸೂಚನೆ
ಕ್ರೀಡಾಕೂಟಗಳನ್ನು ಜನ ಸೇರಿಸದೆ ಮಾಡಬೇಕೆಂದು ಆರೋಗ್ಯ ಇಲಾಖೆ ಎಲ್ಲ ಕ್ರೀಡಾ ಸಂಸ್ಥೆಗಳಿಗೆ ಸೂಚಿಸಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕ್ರೀಡಾ ಇಲಾಖೆಯೂ ಹೇಳಿದೆ. ಜನ ಸೇರಿಸದೆ ಕ್ರೀಡಾಕೂಟಗಳನ್ನು ಮಾಡುವುದರಿಂದ ಆಗುವ ಲಾಭವಾದರೂ ಏನು ಎಂಬುದು ಇಲ್ಲಿನ ಪ್ರಶ್ನೆ.
“ಎಲ್ಲ ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳಿಗೆ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಹೇಳಿದ್ದೇವೆ.

ಕ್ರೀಡಾಕೂಟಗಳನ್ನು ನಡೆಸುವುದು ತೀರಾ ಅನಿವಾರ್ಯ ಎಂದಾದರೆ ಪ್ರೇಕ್ಷಕರಿಲ್ಲದೆ ನಡೆಸಬೇಕು’ ಎಂದು ಈ ಬೆಳವಣಿಗೆ ಹಿನ್ನೆಲೆಯಲ್ಲಿ ಕ್ರೀಡಾ ಕಾರ್ಯದರ್ಶಿ ರಾಧೆ ಶ್ಯಾಮ್‌ ಜೂಲನಿಯ ಹೇಳಿದ್ದಾರೆ.

ವೀಸಾ ನಿರ್ಬಂಧದಿಂದ 60 ವಿದೇಶಿ ಆಟಗಾರರು ಮೊದಲ ಸುತ್ತಿನ ಐಪಿಎಲ್‌ ಪಂದ್ಯಗಳಿಗೆ ಲಭ್ಯರಾಗುವುದಿಲ್ಲ. ಹೀಗಾಗಿ ಐಪಿಎಲ್‌ ಕೂಟವನ್ನು ಮುಂದೂಡುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ವಿದೇಶಿ ಐಪಿಎಲ್‌ ಆಟಗಾರರು ಬಿಸಿನೆಸ್‌ ವೀಸಾದಲ್ಲಿ ಭಾರತಕ್ಕೆ ಬರುತ್ತಾರೆ.

Advertisement

ಐಪಿಎಲ್‌: ಎ. 15ರ ತನಕ ವಿದೇಶಿ ಕ್ರಿಕೆಟಿಗರಿಲ್ಲ
ಮಾರಣಾಂತಿಕ ಕೊರೊನಾ ವೈರಸ್‌ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರ ವೀಸಾ ನಿರ್ಬಂಧ ಹೇರಿರುವ ಕಾರಣ ಈ ವರ್ಷದ ಐಪಿಎಲ್‌ ಟೂರ್ನಿಯಲ್ಲಿ ಎ. 15ರ ತನಕ ವಿದೇಶಿ ಆಟಗಾರರು ಭಾಗವಹಿಸುವ ಯಾವುದೇ ಸಾಧ್ಯತೆ ಇಲ್ಲ.

ರಾಜತಾಂತ್ರಿಕ ಹಾಗೂ ಉದ್ಯೋಗ ಸಂಬಂಧಿ ವೀಸಾಗಳನ್ನು ಹೊರತುಪಡಿಸಿ ಉಳಿದೆಲ್ಲ ವೀಸಾಗಳನ್ನು ಕೇಂದ್ರ ಸರಕಾರ ರದ್ದುಪಡಿಸಿದೆ. ಇದರಲ್ಲಿ ಬಿಸಿನೆಸ್‌ ಕ್ಲಾಸ್‌ ವೀಸಾ ಕೂಡ ಸೇರಿದೆ. ಕ್ರಿಕೆಟಿಗರು ಬಿಸಿನೆಸ್‌ ಕ್ಲಾಸ್‌ ವೀಸಾ ವ್ಯಾಪ್ತಿಗೆ ಒಳಪಡುವ ಕಾರಣ ಅವರಿಗೆ ಎ. 15ರ ತನಕ ಭಾರತಕ್ಕೆ ಆಗಮಿಸಲು ಸಾಧ್ಯವಾಗದು.

ಶನಿವಾರ ಐಪಿಎಲ್‌ ಸಭೆ
ಆದರೆ ಈಗಿನ ಪರಿಸ್ಥಿತಿಯಲ್ಲಿ ಐಪಿಎಲ್‌ ನಡೆಯುವ ಬಗ್ಗೆ ಅನುಮಾನವಿದೆ. ಇದನ್ನು ಮುಂದೂಡಬೇಕು ಅಥವಾ ಖಾಲಿ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ನಡೆಸಬೇಕೆಂಬ ಎರಡು ಆಯ್ಕೆಗಳಷ್ಟೇ ಮುಂದಿವೆ. ಬಿಸಿಸಿಐ ಹಾಗೂ ಐಪಿಎಲ್‌ ಆಡಳಿತ ಮಂಡಳಿ ಶನಿವಾರ ಸಭೆ ಸೇರಿ 2020ರ ಪಂದ್ಯಾವಳಿಯ ಭವಿಷ್ಯವನ್ನು ನಿರ್ಧರಿಸಲಿವೆೆ.

ಕೂಟವನ್ನು ಮುಂದೂಡಿದರೆ ಆಗ ಅಂತಾರಾಷ್ಟ್ರೀಯ ಹಾಗೂ ಇತರ ಕೆಲವು ದೇಶಿ ಕ್ರಿಕೆಟ್‌ ಕೂಟಗಳ ವೇಳಾಪಟ್ಟಿಗೆ ಧಕ್ಕೆಯಾಗಲಿದೆ. ಖಾಲಿ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ನಡೆಸಿದರೆ ಆಗ ಬಿಸಿಸಿಐಗೆ ಭಾರೀ ಪ್ರಮಾಣದ ನಷ್ಟ ಸಂಭವಿಸುವುದರಲ್ಲಿ ಅನುಮಾನವಿಲ್ಲ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ ಕೂಟವಾಗಿರುವ ಐಪಿಎಲ್‌ ನಿಂತಿರುವುದೇ ದುಡ್ಡಿನ ಕೊಪ್ಪರಿಗೆ ಮೇಲೆ. ವೀಕ್ಷಕರಿಗೆ ನಿರ್ಬಂಧ ಹೇರಿ ಈ ಕೂಟವನ್ನು ನಡೆಸುವ ಕಲ್ಪನೆಯನ್ನೂ ಮಾಡಲಾಗದು!

ಖಾಲಿ ಸ್ಟೇಡಿಯಂನಲ್ಲಿ ಲೆಜೆಂಡ್ಸ್‌ ಕ್ರಿಕೆಟ್‌
ರಸ್ತೆ ಸುರಕ್ಷತೆಯ ಅಂಗವಾಗಿ ನಡೆಯುತ್ತಿರುವ ನಿವೃತ್ತ ಕ್ರಿಕೆಟಿಗರ “ರೋಡ್‌ ಸೇಫ್ಟಿ ಲೆಜೆಂಡ್ಸ್‌ ಟಿ20 ಟೂರ್ನಿ’ಗೆ ಕೊರೊನಾ ಭೀತಿ ತಟ್ಟಿದೆ. ಪರಿಣಾಮ, ಗುರುವಾರದಿಂದ ಮುಂಬಯಿಯ ಪಂದ್ಯಗಳನ್ನು ಖಾಲಿ ಸ್ಟೇಡಿಯಂನಲ್ಲಿ ಆಡಿಸಲಾಗುತ್ತಿದೆ. ಪುಣೆ ಆವೃತ್ತಿಯ ಪಂದ್ಯಗಳನ್ನು ಕೊರೊನಾ ಕಾರಣದಿಂದ ರದ್ದುಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next