ಚಳ್ಳಕೆರೆ: ಮಾಜಿ ಸಿಎಂ ಸಿದ್ದರಾಮಯ್ಯಗೆ ಸ್ಪರ್ಧಿಸಲು ಸ್ಥಳ ನಿಗದಿಯಾಗದಿದ್ದರೂ ನನ್ನನ್ನು ಮತ್ತೆ ಮುಖ್ಯಮಂತ್ರಿ ಮಾಡಿ ಎಂದು ಜನರಲ್ಲಿ ಬೆಂಬಲ ಕೇಳುತ್ತಿದ್ದಾರೆ. ಇವರು ಸಿಎಂ ಆಗಲು ಡಿಕೆಶಿ ಬೆಂಬಲ ಇದೆಯೇ ಎಂಬುದನ್ನು ಮೊದಲು ಜನತೆಗೆ ಸ್ಪಷ್ಟಪಡಿಸಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.
ನಗರದ ಬಿ.ಎಂ.ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ನಡೆದ ಜನಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ “ಭಾರತ್ ಜೋಡೋ’ ಯಾತ್ರೆ ಕೈಗೊಂಡಿದ್ದರು. ದೂರದ ಊರುಗಳಿಂದ ಜನರನ್ನು ಕರೆಸಿ ಯಾತ್ರೆ ಮಾಡಿದ್ದು ಇದು ಸಂಪೂರ್ಣ ವಿಫಲವಾಗಿದೆ.
2023ರ ವಿಧಾನಸಭಾ ಚುನಾವಣೆ ನಂತರ ಕಾಂಗ್ರೆಸ್ ಕರ್ನಾಟಕದಲ್ಲಿ ಸಂಪೂರ್ಣ ಮುಳುಗಲಿದೆ. ಸಿದ್ರಾಮಣ್ಣನ ಮುಖ್ಯಮಂತ್ರಿ ಹಗಲುಗನಸು ನನಸಾಗದಂತೆ ಮತದಾರರು ಜಾಗೃತೆ ವಹಿಸಬೇಕು ಎಂದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಕಾಂಗ್ರೆಸ್‌ನಲ್ಲಿ ನಾಯಕರ ಕೊರತೆ ಎದ್ದು ಕಾಣುತ್ತಿದೆ. ಮುಂದಿನ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ನಾಯಕರ ಜಗಳ ಬೀದಿಗೆ ಬರಲಿದೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರಲ್ಲೇ ಸಾಮಾಜಿಕ ನ್ಯಾಯ ಮಾಯವಾಗಿದೆ ಎಂದರು.