Advertisement

ಶೇ.100 ಅಸಲು ಪಾವತಿಸಲು ಸಿದ್ಧ; ದಯವಿಟ್ಟು ಸ್ವೀಕರಿಸಿ: ವಿಜಯ್‌ ಮಲ್ಯ

11:22 AM Dec 05, 2018 | Team Udayavani |

ಹೊಸದಿಲ್ಲಿ : ಭಾರತೀಯ ಬ್ಯಾಂಕುಗಳಿಗೆ 9,000 ಕೋಟಿ ರೂ. ಸಾಲವನ್ನು ಬಾಕಿ ಇರಿಸಿ ವಿದೇಶಕ್ಕೆ ಪಲಾಯನ ಮಾಡಿ ಪ್ರಕೃತ ಲಂಡನ್‌ನಲ್ಲಿ ಭಾರತಕ್ಕೆ ಗಡೀಪಾರಾಗುವ ಕೋರ್ಟ್‌ ಕೇಸನ್ನು ಎದುರಿಸುತ್ತಿರುವ ಮದ್ಯ ದೊರೆ ವಿಜಯ್‌ ಮಲ್ಯ ಅವರು ತನ್ನ ಬ್ಯಾಂಕ್‌ ಸಾಲಗಳ ಶೇ.100 ಅಸಲು ಮೊತ್ತವನ್ನು ಪಾವತಿಸುವುದಾಗಿ ಹೇಳಿದ್ದು ‘ದಯವಿಟ್ಟು ಇದನ್ನು ಸ್ವೀಕರಿಸಿ’ ಎಂದು ಗೋಗರೆದಿದ್ದಾರೆ.

Advertisement

”ಕಿಂಗ್‌ ಫಿಶರ್‌ ಏರ್‌ ಲೈನ್ಸ್‌ ಕಂಪೆನಿ ಅತ್ಯಧಿಕ ಎಟಿಎಫ್ (ವಿಮಾನ ಇಂಧನ) ಬೆಲೆಯಿಂದ ಕುಸಿಯಿತು. ಅಂದಿನ ದಿನಗಳಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್‌ ಗೆ ಗರಿಷ್ಠ  140 ಡಾಲರ್‌ ಇತ್ತು. ಬ್ಯಾಂಕ್‌ ನಿಂದ ಪಡೆದುಕೊಂಡಿದ್ದ ಸಾಲದ ಹಣವೆಲ್ಲ ಕಿಂಗ್‌ ಫಿಶರ್‌ಗಾಗಿ ವಿನಿಯೋಗವಾಯಿತು. ನಾನೀಗ ನನ್ನ ಬ್ಯಾಂಕ್‌ ಸಾಲದ ಶೇ.100 ಅಸಲು ಮೊತ್ತವನ್ನು ಕಟ್ಟಲು ಸಿದ್ಧನಿದ್ದೇನೆ; ದಯವಿಟ್ಟು ಇದನ್ನು  ಸ್ವೀಕರಿಸಿ” ಎಂದು ಮಲ್ಯ ತಮ್ಮ ಸರಣಿ ಟ್ಟಿàಟ್‌ನಲ್ಲಿ ಕೋರಿದ್ದಾರೆ. 

”ರಾಜಕಾರಣಿಗಳು ಮತ್ತು ಮಾಧ್ಯಮದವರು ನಾನು ಬ್ಯಾಂಕ್‌ ಸಾಲ ಸುಸ್ತಿಗಾರನಾಗಿರುವ ಬಗ್ಗೆ ಭಾರೀ ಗುಲ್ಲೆಬ್ಬಿಸುತ್ತಿದ್ದಾರೆ. ನನಗೆ ನ್ಯಾಯೋಚಿತ ವಿಚಾರಣೆಯ ಅವಕಾಶವನ್ನು ಯಾಕಾಗಿ ನೀಡಲಾಗುತ್ತಿಲ್ಲ. ಆ ಬಗ್ಗೆ ನನಗೆ ದುಃಖವಿದೆ; ನನ್ನ ಬ್ಯಾಂಕ್‌ ಸಾಲದ ಶೇ.100 ಅಸಲು ಮೊತ್ತವನ್ನು ತೀರಿಸುವ ನನ್ನ ಈ ಪ್ರಸ್ತಾವವನ್ನು ಕರ್ನಾಟಕ ಹೈಕೋರ್ಟ್‌ ಮುಂದೆ ಮಂಡಿಸಬೇಕೆಂದು ನಾನು ಕೋರುತ್ತೇನೆ” ಎಂದು ಮಲ್ಯ ಬರೆದಿದ್ದಾರೆ. 

”ಕಳೆದ ಮೂರು ದಶಕಗಳಿಂದಲೂ ಭಾರತದ ಅತೀ ದೊಡ್ಡ ಆಲ್ಕೋಹಾಲಿಕ್‌ ಬೀವರೇಜ್‌ ಸಮೂಹವಾಗಿ ನಾವು ಸಾವಿರಾರು ಕೋಟಿ ರೂ.ಗಳ ತೆರಿಗೆನ್ನು ರಾಜ್ಯ ಬೊಕ್ಕಸಕ್ಕೆ ನೀಡಿದ್ದೇವೆ. ಕಿಂಗ್‌ ಫಿಶರ್‌ ಏರ್‌ ಲೈನ್‌ಸ ಕೂಡ ಸರಕಾರಕ್ಕೆ ಸಾಕಷ್ಟು ನೀಡಿದೆ. ಅತ್ಯುತ್ತಮ ಏರ್‌ ಲೈನ್ಸ್‌ ಕಂಪೆನಿಯನ್ನು ಕಳೆದುಕೊಂಡದ್ದಕ್ಕೆ ದುಃಖವಿದೆ. ಆದರೂ ನನ್ನ  ಬ್ಯಾಂಕ್‌ ಸಾಲದ ಶೇ.100 ಅಸಲು ಮೊತ್ತ ಪಾವತಿಸಲು ನಾನು ಸಿದ್ಧನಿದ್ದೇನೆ; ದಯವಿಟ್ಟು ಇದನ್ನು ಸ್ವೀಕರಿಸಿ” ಎಂದು ಮಲ್ಯ ಬರೆದಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next