ಬೆಂಗಳೂರು: ಸಚಿವರೊಬ್ಬರು ನಡೆಸಿರುವ ಹಗರಣಕ್ಕೆ ಸಂಬಂಧಪಟ್ಟಂತೆ ದಾಖಲೆ ಬಿಡುಗಡೆಗೆ ಸಮಯಾವಕಾಶ ನೀಡುವಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಮಾಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ದಾಖಲೆ ಬಿಡುಗಡೆ ಮಾಡುವುದಕ್ಕಾಗಿ ಸ್ಪೀಕರ್ ಗೆ ಅವಕಾಶ ಕೇಳಿದ್ದೇನೆ.ಸ್ಪೀಕರ್ ಗೆ ಇಂದು ಬೆಳಗ್ಗೆ ದೂರವಾಣಿ ಕರೆ ಮಾಡಿ ಮಾತಾಡಿದ್ದೇನೆ. ನಾಳೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ ಎಂದರು.
ನಾನು ನ್ಯೂಸ್ ಸೆನ್ಸ್ ಮಾಡೋಕೆ ನೀಡಿರುವ ಹೇಳಿಕೆ ಅಲ್ಲ. ಸರ್ಕಾರ ಸಹಕಾರ ನೀಡಲಿ. ಸರ್ಕಾರದ ಒಂದು ತೀರ್ಮಾನದಿಂದ ನೂರಾರು ಕೋಟಿ ನಷ್ಟವಾಗಿದೆ. ಅದನ್ನು ದಾಖಲೆ ಸಹಿತ ಇಡುತ್ತೇನೆ ಎಂದು ಹೇಳಿದರು.
ರಾಜಕೀಯ ನಿವೃತ್ತಿಗೆ ಸಿದ್ಧ: ಬೆಂಗಳೂರಲ್ಲಿ ಒತ್ತುವರಿ ತೆರವು ಮಾಡ್ತಾ ಇರುವ ಬಗ್ಗೆ ಸದನದಲ್ಲಿ ಮಾತಾಡಿದ್ದೇನೆ. ನನ್ನ ಕಾಲದಲ್ಲಿ ಬೆಂಗಳೂರು ಜನತೆಗೆ ಏನಾದರೂ ಮೋಸ ಮಾಡಿದ್ದೇನೆ ಎಂದು ಹೇಳಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.
ಇದನ್ನೂ ಓದಿ:29 ಕೋಟಿ ಲಂಚ ಆರೋಪ: ವಿಚಾರಣೆ ರದ್ದುಪಡಿಸುವಂತೆ ಸುಪ್ರೀಂ ಕೋರ್ಟ್ ಮೊರೆ ಹೋದ ಯಡಿಯೂರಪ್ಪ
ಸಚಿವ ಎಸ್ ಟಿ ಸೋಮಶೇಖರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕೋರ್ಟ್ ಆದೇಶದ ಮೇರೆ ಎಫ್ ಐಆರ್ ದಾಖಲಾಗಿದೆ. ತನಿಖೆ ಪ್ರಾರಂಭ ಆದಾಗ ಸೋಮಶೇಖರ್ ಸತ್ಯಾಸತ್ಯತೆ ಮರೆಮಾಚಲು ಅವಕಾಶ ಇರುವ ಕಾರಣ ರಾಜೀನಾಮೆ ನೀಡುವುದೇ ಸೂಕ್ತ ಎಂದು ಹೇಳಿದರು.